ADVERTISEMENT

ಆರ್.ಪಿ.ಶರ್ಮಾಗೆ ಮುಖ್ಯಕಾರ್ಯದರ್ಶಿ ನೋಟಿಸ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 20:41 IST
Last Updated 12 ಮಾರ್ಚ್ 2018, 20:41 IST
ಆರ್.ಪಿ. ಶರ್ಮಾ
ಆರ್.ಪಿ. ಶರ್ಮಾ   

ಬೆಂಗಳೂರು: ‘ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪವಿದೆ ಎಂದು ನೀವು ಮಾಡಿರುವ ಆರೋಪ ಕುರಿತು ಐಪಿಎಸ್ ಅಧಿಕಾರಿಗಳ ಸಂಘ ನಿರ್ಣಯ ಕೈಗೊಂಡಿದೆಯೇ, ಅದರ ಆಧಾರದಲ್ಲಿ ನೀವು ಪತ್ರ ಬರೆದಿದ್ದೀರಾ’ ಎಂದು ಸಂಘದ ಅಧ್ಯಕ್ಷರೂ ಆಗಿರುವ ಎಡಿಜಿಪಿ ಆರ್.ಪಿ. ಶರ್ಮಾಗೆ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿವರಣೆ ಕೇಳಿದ್ದಾರೆ.

‘ಈ ಸಂಬಂಧ ನಿರ್ಣಯ ಆಗಿದ್ದರೆ ಎಷ್ಟು ಸದಸ್ಯರು ಸಹಿ ಮಾಡಿದ್ದಾರೆ. ನಡಾವಳಿ ಪ್ರತಿಯನ್ನು ಮಂಗಳವಾರದೊಳಗೆ ಸಲ್ಲಿಸಿ’ ಎಂದೂ ಅವರು ತಾಕೀತು ಮಾಡಿದ್ದಾರೆ.

ಮುಖ್ಯಮಂತ್ರಿ ಗರಂ: ಶರ್ಮಾ ಬರೆದಿರುವ ಪತ್ರ ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವುದನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಸೋಮವಾರ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್. ರಾಜು ಜೊತೆ ಚರ್ಚೆ ನಡೆಸಿದರು. ಹದ್ದು ಮೀರಿ ವರ್ತಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ರತ್ನಪ್ರಭಾ ಮತ್ತು ನೀಲಮಣಿ ಅವರಿಗೆ ಮುಖ್ಯಮಂತ್ರಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ADVERTISEMENT

‘ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನನ್ನ ಬಳಿ ಹೇಳಿ. ಈ ರೀತಿ ಪತ್ರ ಬರೆದು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ನಿಮ್ಮ ಉದ್ದೇಶವಾದರೂ ಏನು. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ವರ್ತನೆಯನ್ನು ಏನೆಂದು ಅರ್ಥ ಮಾಡಿಕೊಳ್ಳಬೇಕು’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ ಎಂದೂ ಗೊತ್ತಾಗಿದೆ.

ಲೋಕಾಯುಕ್ತರ ಮೇಲೆ ದಾಳಿಯೂ ಸೇರಿದಂತೆ ಇತ್ತೀಚೆಗೆ ನಡೆದ ಹಲವು ಘಟನೆಗಳಿಂದ ಪೊಲೀಸರ ವೃತ್ತಿ ಮತ್ತು ಘನತೆಗೆ ಧಕ್ಕೆ ಬಂದಿದೆ ಎಂದು ದೂರಿ ಶರ್ಮಾ ಮಾರ್ಚ್‌ 8ರಂದು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರ ಭಾನುವಾರ ಬಹಿರಂಗವಾಗಿತ್ತು.
**
ಆಂತರಿಕ ವಿಚಾರಣೆ?
ಪತ್ರ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿಚಾರಣೆ ನಡೆಸಿ ಶರ್ಮಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ, ಇದರ ಹಿಂದೆ ಯಾರ ಕುಮ್ಮಕ್ಕಿದೆ ಎಂದು ತಿಳಿಯಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಶರ್ಮಾ ವಿರುದ್ಧ ಯಾವ ಕ್ರಮಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಕಚೇರಿಯಿಂದ ಪೊಲೀಸ್ ಮಹಾನಿರ್ದೇಶಕರಿಗೆ ಕೇಳಲಾಗಿದೆ ಎಂದೂ ಮೂಲಗಳು ತಿಳಿಸಿವೆ.

‘ಈ ಬೆಳವಣಿಗೆ ಹಿಂದೆ ಬಿಜೆಪಿ ಕೈವಾಡವಿದೆ’ ಎಂಬ ಶಂಕೆ ವ್ಯಕ್ತಡಿಸಿರುವ ಮುಖ್ಯಮಂತ್ರಿ ಆಪ್ತ ವಲಯ, ಶರ್ಮಾ ಅವರ ಮೂರು ತಿಂಗಳ ಮೊಬೈಲ್ ಕಾಲ್ ವಿವರ ಪರಿಶೀಲಿಸಲು ಚಿಂತನೆ ನಡೆಸಿದೆ ಎಂದೂ ಗೊತ್ತಾಗಿದೆ.
**
ಭ್ರಷ್ಟರಿಗೆ ರಕ್ಷಣೆ: ಜಗದೀಶ ಶೆಟ್ಟರ್‌
‘ಗೃಹ ಇಲಾಖೆಯಲ್ಲಿ ಕೆಂಪಯ್ಯನಂಥವರ ಹಸ್ತಕ್ಷೇಪ ಹೆಚ್ಚಾಗಿದೆ. ರಾಮಲಿಂಗಾ ರೆಡ್ಡಿ ನೆಪಮಾತ್ರಕ್ಕೆ ಗೃಹ ಸಚಿವರಾಗಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದರು.

‘ಶರ್ಮಾ ಬರೆದಿರುವ ಪತ್ರ ರಾಜ್ಯ ಸರ್ಕಾರದ ಆಡಳಿತಕ್ಕೆ ಕೈಗನ್ನಡಿ. ಶಾಸಕ ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್, ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಹೊಣೆ ಮಾಡಿ ಎಸಿಪಿ ಮಂಜುನಾಥ್‍ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಈಗ ಮತ್ತೆ ಅದೇ ಜಾಗಕ್ಕೆ ಮಂಜುನಾಥ್ ಅವರನ್ನು ಮರು ನಿಯುಕ್ತಿ ಮಾಡಲಾಗಿದೆ. ಮೊಹಮದ್‌ಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಅದಕ್ಕೂ ಮೊದಲೇ ಎಸಿಪಿಯನ್ನು ಮರು ನಿಯುಕ್ತಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.