ADVERTISEMENT

ಆರ್‌ಟಿಇ: ದಾಖಲಾತಿ ಪ್ರಮಾಣ ಕಡಿಮೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 19:30 IST
Last Updated 20 ಜೂನ್ 2012, 19:30 IST
ಆರ್‌ಟಿಇ: ದಾಖಲಾತಿ ಪ್ರಮಾಣ ಕಡಿಮೆ
ಆರ್‌ಟಿಇ: ದಾಖಲಾತಿ ಪ್ರಮಾಣ ಕಡಿಮೆ   

ಬೆಂಗಳೂರು: ಕೆಲವು ಖಾಸಗಿ ಶಾಲೆಗಳ ವಿರೋಧ ಹಾಗೂ ಗೊಂದಲದ ನಡುವೆಯೂ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ (ಗುಲ್ಬರ್ಗ ಜಿಲ್ಲೆ ಹೊರತುಪಡಿಸಿ) ಒಟ್ಟಾರೆ 41,663 ಮಕ್ಕಳು ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಪ್ರವೇಶ ಪಡೆದಿದ್ದಾರೆ. ಅಂದರೆ ಈ ವರ್ಷ ಶೇ 37ರಷ್ಟು ಪ್ರಗತಿಯಾಗಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಉಚಿತವಾಗಿ ನೀಡುವುದು ಕಡ್ಡಾಯ. ಆ ಪ್ರಕಾರ ರಾಜ್ಯದಲ್ಲಿ ಈ ವರ್ಷ 1,12,474 ಮಕ್ಕಳಿಗೆ ಪ್ರವೇಶ ನೀಡಬೇಕಾಗಿತ್ತು. ಆದರೆ, ಆರ್‌ಟಿಇ ನಿಯಮಾವಳಿ ರೂಪಿಸುವಲ್ಲಿ ಆದ ವಿಳಂಬ ಮತ್ತು ಕಾಯ್ದೆ ಕುರಿತು ಪೋಷಕರಲ್ಲಿನ ಅರಿವಿನ ಕೊರತೆಯಿಂದ ಗುರಿ ಮುಟ್ಟಲು ಸಾಧ್ಯವಾಗಿಲ್ಲ.

ಶೇ 25ರ ಕೋಟಾದಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಮಕ್ಕಳ ಸಂಖ್ಯೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಗ್ರಹಿಸಿದೆ. ಆ ಪ್ರಕಾರ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿ ಬೆಂಗಳೂರಿನಲ್ಲಿ ಈ ಕೋಟಾದಡಿ ದಾಖಲಾದವರ ಪ್ರಮಾಣ ಕಡಿಮೆ ಇದೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ರಾಜಧಾನಿಯಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗಿದೆ. ಈ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳಿಗೆ ಪ್ರವೇಶ ಸಿಗಬೇಕಾಗಿತ್ತು. ಆದರೆ ಬಹುತೇಕ ಖಾಸಗಿ ಶಾಲೆಗಳು ಕುಂಟು ನೆಪ ಹೇಳಿ ಈ ವರ್ಷ ಪ್ರವೇಶ ನೀಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.


`ನಗರದಲ್ಲಿ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗಿರುವುದು ನಿಜ. ಆದರೆ ಸಿಬಿಎಸ್‌ಇಯ ಬೆರಳೆಣಿಕೆಯಷ್ಟು ಶಾಲೆಗಳು ಮಾತ್ರ ಆರ್‌ಟಿಇ ಪ್ರಕಾರ ಪ್ರವೇಶ ನೀಡಿವೆ. ಉಳಿದ ಶಾಲೆಗಳು ಮುಂದಿನ ವರ್ಷದಿಂದ ನೀಡುವುದಾಗಿ ಹೇಳಿವೆ. ಕೆಲವು ಶಾಲೆಗಳಲ್ಲಿ ಕಾಯ್ದೆ ಜಾರಿಗೆ ಬರುವ ಮೊದಲೇ ದಾಖಲಾತಿ ಪ್ರಕ್ರಿಯೆ ಮುಗಿದಿತ್ತು. ಇದರಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಕ್ಕಿಲ್ಲ~ ಎಂದು ಅವರು ಹೇಳಿದರು.

ಈ ಕೋಟಾದ ಸೀಟುಗಳಿಗೆ ಕೆಲವು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯಲ್ಲಿ ಮೂರು ಸಾವಿರ ಶಾಲೆಗಳಿವೆ. ಎಲ್ಲ ಶಾಲೆಗಳಿಗೂ ಒಂದೇ ರೀತಿ ಬೇಡಿಕೆ ಇಲ್ಲ. ಅರ್ಜಿಗಳು ಬಂದಿರುವ ಶಾಲೆಗಳಲ್ಲಿ ಪ್ರವೇಶ ನೀಡಲಾಗಿದೆ. ದಾಖಲಾತಿ ನಿರಾಕರಿಸಿದ ಬಗ್ಗೆ ದೂರುಗಳು ಬಂದಿಲ್ಲ. ಆರಂಭದಲ್ಲಿ ಸಣ್ಣಪುಟ್ಟ ಗೊಂದಲಗಳು ಇರುವುದು ಸಹಜ. ಈ ವರ್ಷದ ಅನುಭವ, ಸಾಧಕ-ಬಾಧಕಗಳನ್ನು ಆಧರಿಸಿ ಮುಂದಿನ ವರ್ಷ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಶ್ವಾಸವಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದರು.

`ಕುಸ್ಮಾ~ ವಿರೋಧ: ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ (ಕುಸ್ಮಾ ) ವ್ಯಾಪ್ತಿಗೆ ಒಳಪಡುವ ಖಾಸಗಿ ಶಾಲೆಗಳಲ್ಲಿ ಈ ವರ್ಷ ಪ್ರವೇಶ ನೀಡಿಲ್ಲ. ಮುಂದಿನ ವರ್ಷದಿಂದ ಆರ್‌ಟಿಇ ಕಾಯ್ದೆ ಪ್ರಕಾರ ಶೇ 25ರಷ್ಟು ಸೀಟುಗಳನ್ನು ನೀಡಲಾಗುವುದು ಎಂದು ಸರ್ಕಾರಕ್ಕೆ ಒಕ್ಕೂಟ ಪತ್ರ ಬರೆದಿದೆ.
ಸರ್ಕಾರಿ ಶಾಲೆಗಳಿಗೆ ಕಂಟಕ: ಆರ್‌ಟಿಇ ಕಾಯ್ದೆಯಡಿ ಮೊದಲ ವರ್ಷವೇ 41,663 ಮಕ್ಕಳು ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ (ಗುಲ್ಬರ್ಗ ಜಿಲ್ಲೆಯ ಅಂಕಿ-ಅಂಶ ಲಭ್ಯವಾಗಿಲ್ಲ). ಮುಂದಿನ ವರ್ಷ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಪ್ರತಿವರ್ಷ ಸುಮಾರು 80 ಸಾವಿರ ಮಕ್ಕಳು ಈ ಕಾಯ್ದೆಯಡಿ ಪ್ರವೇಶ ಪಡೆದರೂ ಸರ್ಕಾರಿ ಶಾಲೆಗಳಿಗೆ ಕಂಟಕ ಎದುರಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೊಬ್ಬರು ಅಭಿಪ್ರಾಯಪಟ್ಟರು.

ಕಳೆದ 2-3 ವರ್ಷಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯಿಂದಾಗಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ. ಶೇ 25ರಷ್ಟು ಮಕ್ಕಳ ಶಿಕ್ಷಣಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಖಾಸಗಿ ಶಾಲೆಗಳಿಗೆ ನೀಡುವುದರಿಂದ ಅತಂತ್ರ ಸ್ಥಿತಿಯಲ್ಲಿದ್ದ ಖಾಸಗಿ ಶಾಲೆಗಳಿಗೆ ಜೀವ ಬಂದಂತಾಗಿದೆ. ಆದರೆ, ಸರ್ಕಾರಿ ಶಾಲೆಗಳನ್ನು ಉಳಿಸುವ ಬಗ್ಗೆ ಗಂಭೀರವಾಗಿ ಯೋಚನೆ ಮಾಡಬೇಕಾದ ಸ್ಥಿತಿ ಒದಗಿದೆ ಎಂದರು.

ವಿಳಂಬ: ಏಪ್ರಿಲ್ 28ರಂದು ಆರ್‌ಟಿಇ ನಿಯಮಾವಳಿಗಳನ್ನು ಪ್ರಕಟಿಸಿ, ಮೇ ತಿಂಗಳ ಮೊದಲ ವಾರದಲ್ಲಿ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿದ ಆದೇಶಗಳನ್ನು ಹೊರಡಿಸಲಾಯಿತು. ಮೇ 25ರವರೆಗೂ ಸಂಬಂಧಪಟ್ಟ ಶಾಲೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದಲೇ ಅರ್ಜಿಗಳನ್ನು ಪಡೆಯುವಂತೆ ಸೂಚಿಸಲಾಗಿತ್ತು.

ಕಡಿಮೆ ಸಮಯದಲ್ಲಿ ಇಷ್ಟೆಲ್ಲ ಮಾಡಿ ಈ ವರ್ಷವೇ ಕಾಯ್ದೆ ಜಾರಿಯಾಗುವಂತೆ ನೋಡಿಕೊಂಡಿರುವುದು ನಿಜಕ್ಕೂ ಸಾಧನೆ ಎಂದು ಡಿಡಿಪಿಐ ಒಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT