ADVERTISEMENT

ಆರ್‌ಟಿಪಿಎಸ್:ಸಾವಿರ ಮೆಗಾವಾಟ್ ವಿದ್ಯುತ್

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ರಾಯಚೂರು: ಇಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ 8 ಘಟಕಗಳಲ್ಲಿ 6 ಘಟಕಗಳು ಎರಡು ದಿನದಿಂದ ವಿದ್ಯುತ್ ನಿರಂತರ ವಿದ್ಯುತ್ ಉತ್ಪಾದಿಸುತ್ತಿವೆ. 3 ಮತ್ತು 8ನೇ ಘಟಕ ದುರಸ್ತಿ ಮುಂದುವರಿದಿದೆ.

ವಿದ್ಯುತ್ ಉತ್ಪಾದನೆ ಮಾಡುತ್ತಿರುವ 6 ಘಟಕಗಳು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಕಳಪೆ ಕಲ್ಲಿದ್ದಲು ಬಳಕೆ ಮಾಡುತ್ತಿರುವುದು, ತೊಯ್ದ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿರುವುದು, ತಾಂತ್ರಿಕ ಕಾರಣದಿಂದ ಈ ಬಿಕ್ಕಟ್ಟು ಎದುರಿಸುತ್ತಿವೆ.

ತಲಾ 210 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದಿಂದ 6 ಘಟಕಗಳು  ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಿದರೆ 1260 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಬೇಕು. ಆದರೆ ಮೇಲಿನ ತಾಂತ್ರಿಕ, ಕಳಪೆ ಗುಣಮಟ್ಟದ ಕಲ್ಲಿದ್ದಲು ಪೂರೈಕೆಯಿಂದ ಕೇವಲ 1000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾತ್ರ ಸಾಧ್ಯವಾಗಿದೆ.

ಕಲ್ಲಿದ್ದಲು ಸಂಗ್ರಹ:
ಆರ್‌ಟಿಪಿಎಸ್‌ನ ಕಲ್ಲಿದ್ದಲು ಸಂಗ್ರಹಾಲಯದಲ್ಲಿ ಭಾನುವಾರ 1.4 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಎರಡು ದಿನಕ್ಕೊಮ್ಮೆ ತಾಲ್ಚೇರಿ, ವೆಸ್ಟ್ ಕೋಲ್ ಮೈನ್‌ನಿಂದ ಎರಡು ರೇಕ್( ಒಂದು ರೇಕ್‌ನಲ್ಲಿ 3500 ಟನ್) ಪೂರೈಕೆ ಆಗುತ್ತಿರುವುದರಿಂದ ಸದ್ಯ ವಿದ್ಯುತ್ ಉತ್ಪಾದನೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ.

ಸಿಂಗರೇಣಿಯಿಂದ ತೊಯ್ದ ಕಲ್ಲಿದ್ದಲು ಪೂರೈಕೆ ಆರಂಭವಾದರೆ ತಾಂತ್ರಿಕ ಅಡಚಣೆ ಭಯವಿಲ್ಲ. ಪೂರ್ಣ ಪ್ರಮಾಣದಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ಆರ್‌ಟಿಪಿಎಸ್ ಉನ್ನತ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.