ADVERTISEMENT

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಳ

ಕೃಷ್ಣಾ ನದಿಯಲ್ಲಿ ಪ್ರವಾಹ: ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST
ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನಮಟ್ಟ ಗುರುವಾರ 2,269 ಅಡಿಗಳಿಗೆ ತಲುಪಿದೆ
ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನಮಟ್ಟ ಗುರುವಾರ 2,269 ಅಡಿಗಳಿಗೆ ತಲುಪಿದೆ   

ಬೆಂಗಳೂರು:  ರಾಜ್ಯದಲ್ಲಿ ಮಳೆ ಗುರುವಾರ ಕಡಿಮೆಯಾಗಿದೆ. ಆದರೆ, ಮಹಾರಾಷ್ಟ್ರದಲ್ಲಿನ ಭಾರಿ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು 25,133 ಕ್ಯೂಸೆಕ್‌ಗೆ ಏರಿದೆ. `ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ನದಿ ತೀರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಸರ್ಕಾರ ವಾಡಿಕೆಯಂತೆ ಮಾಹಿತಿ ನೀಡಿದೆ.

ಆದರೆ, ನದಿಗೆ ಹೆಚ್ಚುವರಿ ನೀರು ಬಿಡುವ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಆದರೂ, ಮೀನುಗಾರಿಕೆ ನಿಷೇಧಿಸಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನದಿ ತೀರದ ಜನತೆಗೆ ಸೂಚಿಸಿದ್ದೇವೆ' ಎಂದು ವಿಜಾಪುರ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದ್ದಾರೆ. ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.6 ಮೀ. ಈಗ 508.2 ಮೀ.ವರೆಗೆ ನೀರು ಸಂಗ್ರಹವಾಗಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸಮೀಪದ ಹಿಪ್ಪರಗಿ ಜಲಾಶಯದ ಒಳಹರಿವು ಗುರುವಾರ 35,000 ಕ್ಯೂಸೆಕ್ ಇದ್ದು, ಇಷ್ಟೇ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ.
ನೀರಿನ ಮಟ್ಟ ಇನ್ನೂ ಹೆಚ್ಚಾಗುವ ಸಂಭವ ಇದ್ದು, ನದಿ ಪಾತ್ರದ ಜನರು ತಮ್ಮ ಜಾನುವಾರು ಹಾಗೂ ಸರಂಜಾಮುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು ಎಂದು ತಿಳಿಸಲಾಗಿದೆ.

ಬಾಗಲಕೋಟೆ ಜಿಲ್ಲೆಯಿಂದ ಬೆಳಗಾವಿ ಜಿಲ್ಲೆಯ ಹಳ್ಳಿಗಳಾದ ಸತ್ತಿ, ಮಹಿಷವಾಡಗಿ, ನಂದೇಶ್ವರ ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿದ್ದ ಮಹಿಷವಾಡಗಿ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ಸೇತುವೆಯ ಮೇಲಿಂದ ನೀರು ಹರಿಯುತ್ತಿದೆ. ಈ ಊರುಗಳ ನಡುವೆ ಸಂಚಾರಕ್ಕೆ ಜನರು ದೋಣಿ ಬಳಸುತ್ತಿದ್ದಾರೆ.ಜಿಟಿ ಜಿಟಿ ಮಳೆ: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆಯಾಗಿದೆ. ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲೂ ಮಳೆ ತುಂಬ ಕಡಿಮೆಯಾಗಿದೆ.

ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಗುರುವಾರ ಕೊಂಚ ಬಿಡುವು ನೀಡಿತ್ತು. ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ದಿನವಿಡೀ ಮೋಡ ಕವಿದ ವಾತಾವರಣವಿತ್ತು.
ಕಾವೇರಿಯ ಉಗಮಸ್ಥಾನ ಭಾಗಮಂಡಲದಲ್ಲಿಯೂ ಮುಂಗಾರು ಆರ್ಭಟ ಕಡಿಮೆಯಾಗಿದೆ. ಕೊಡಗಿನಲ್ಲಿ ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ 37.69 ಮಿ.ಮೀ. ಮಳೆಯಾಗಿದೆ. ಜೂನ್ 1 ರಿಂದ ಇದುವರೆಗೆ 542.08 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯಕ್ಕೆ 1,320 ಕ್ಯೂಸೆಕ್ ಒಳಹರಿವು ಇದ್ದು, 2,825.21 ಅಡಿ ನೀರು ಸಂಗ್ರಹವಾಗಿದೆ (ಗರಿಷ್ಠ ಮಟ್ಟ 2,859 ಅಡಿ). ಹಾರಂಗಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಕ್ಷೀಣಿಸಿರುವುದರಿಂದ 24 ಗಂಟೆಗಳ ಅವಧಿಯಲ್ಲಿ ಕೇವಲ 1.78 ಅಡಿ ನೀರು ಸಂಗ್ರಹವಾಗಿದೆ. 

ಕಬಿನಿ: ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನಮಟ್ಟ 24 ಗಂಟೆಗಳಲ್ಲಿ 2 ಅಡಿ ಹೆಚ್ಚಿ 2,269 ಅಡಿಗೆ ಏರಿದೆ. ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿ. ಒಟ್ಟಾರೆ ಮುಂಗಾರು ಆರಂಭವಾದಂದಿಂದ ಇದುವರೆಗ 24 ಅಡಿ ನೀರು ಬಂದಿದೆ.

ಕೆಆರ್‌ಎಸ್:  ಕೊಡಗಿನಲ್ಲಿ ಮಳೆ ಕಡಿಮೆಯಾದ ಕಾರಣ, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆಯ ಒಳಹರಿವಿನಲ್ಲಿ ಇಳಿಕೆಯಾಗಿದೆ. ಅಣೆಕಟ್ಟೆಯ ನೀರಿನಮಟ್ಟ 77 ಅಡಿಗೆ ಮುಟ್ಟಿದೆ.ಬುಧವಾರ 12 ಸಾವಿರ ಕ್ಯೂಸೆಕ್‌ನಷ್ಟಿದ್ದ ಒಳಹರಿವು ಗುರುವಾರ 10,295 ಕ್ಯೂಸೆಕ್‌ಗೆ ಇಳಿದಿದೆ. ಹೊರಹರಿವು 1,152 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 72.46 ಅಡಿ ಇತ್ತು. ಒಳಹರಿವು 504 ಇದ್ದರೆ, ಹೊರಹರಿವು 204 ಕ್ಯೂಸೆಕ್ ಇತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಹೊಸನಗರ ತಾಲ್ಲೂಕು ಬಿಟ್ಟು ಉಳಿದೆಡೆ ಮಳೆ ಕಡಿಮೆಯಾಗಿದೆ. ಜಲಾಶಯಗಳಿಗೆ ಒಳ ಹರಿವು ಗಣನೀಯ ಕುಸಿತ ಕಂಡಿದೆ. ಹೊಸನಗರದ ಮಾಸ್ತಿಕಟ್ಟೆಯಲ್ಲಿ 106.6 ಮಿ.ಮೀ, ಯಡೂರಿನಲ್ಲಿ 95 ಮಿ.ಮೀ, ಮಾಣಿಯಲ್ಲಿ 94 ಮಿ.ಮೀ ಹಾಗೂ ಹುಲಿಕಲ್‌ನಲ್ಲಿ 85 ಮಿ.ಮೀ. ಮಳೆ ಆಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಬುಧವಾರ 13,541ಕ್ಯೂಸೆಕ್ ಇದ್ದ ಒಳಹರಿವು ಗುರುವಾರ  5,351 ಕ್ಯೂಸೆಕ್‌ಗೆ ಇಳಿದಿದೆ.

ನೀರಿನಮಟ್ಟ ಗುರುವಾರ ಬೆಳಿಗ್ಗೆ 8 ಗಂಟೆಗೆ 1,759.95  (ಗರಿಷ್ಠ 1,819 ಅಡಿ) ಅಡಿ ತಲುಪಿತ್ತು. ಭದ್ರಾ ಜಲಾಶಯದ ನೀರಿನಮಟ್ಟ 123.3 (ಗರಿಷ್ಠ 186) ಅಡಿ ಇದ್ದು, ಒಳಹರಿವು 4,731 ಕ್ಯೂಸೆಕ್‌ಗೆ ಇಳಿದಿದೆ. ಜಲಾಶಯದ ಒಳಹರಿವು ಬುಧವಾರ 6,894 ಕ್ಯೂಸೆಕ್ ಇತ್ತು. ತುಂಗಾ ಜಲಾಶಯದ ಒಳಹರಿವು 9,000 ಕ್ಯೂಸೆಕ್‌ಗೆ ಕುಸಿದಿದೆ. ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.