ADVERTISEMENT

ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಕಲ್ಲೋಳ–ಯಡೂರ ಸೇತುವೆ ಜಲಾವೃತ, ಮುಷ್ಟೂರು ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು
ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು   

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿ ನೀರಿನ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಇದರಿಂದ ಆಲಮಟ್ಟಿ ಜಲಾಶಯದ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ.

ಆಲಮಟ್ಟಿ ಜಲಾಶಯಕ್ಕೆ 90 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಯಾಗಿರುವುದರಿಂದ 15 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.

ಕೃಷ್ಣಾ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರ ಕೆಳಮಟ್ಟದ ಸೇತುವೆ ಜಲಾವೃತವಾಗಿದೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿನಿಂದ 20 ಸಾವಿರ ಕ್ಯುಸೆಕ್‌ ನೀರು ಬಿಟ್ಟಿದ್ದು, ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ಜಲಾನಯನ ಪ್ರದೇಶದಲ್ಲಿಯೂ ಮಳೆಯಾಗುತ್ತಿದೆ. ಖಡಕಲಾಟ ಗ್ರಾಮದ ಬಳಿಯ ಹಳ್ಳದ ನೀರಿನಲ್ಲಿ ಏಳು ಜಾನುವಾರು ಕೊಚ್ಚಿ ಹೋಗಿವೆ.

ADVERTISEMENT

ಡೋಣಿ ನದಿಯೂ ಉಕ್ಕಿ ಹರಿಯುತ್ತಿದ್ದು, ಸಾರವಾಡ ಗ್ರಾಮದ ಬಳಿ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಸಿದ್ಧೇಶ್ವರ ಸೂಪರ್ ಬಜಾರದೊಳಕ್ಕೆ ನೀರು ನುಗ್ಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ನೀರು ಪಾಲಾಗಿವೆ. ಧಾರವಾಡ, ಗದಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಹುಬ್ಬಳ್ಳಿಯಲ್ಲೂ ಮಳೆಯಾಗಿದೆ.

ಹಳ್ಳಗಳ ಭೋರ್ಗರೆತ: ಮಾನ್ವಿ ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿವೆ. ತಾಲ್ಲೂಕಿನ ಮುಷ್ಟೂರು ಸಮೀಪದ ಸೇತುವೆ ಮುಳುಗಡೆಯಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ಮಾನ್ವಿ, ಸಿರವಾರ, ಕವಿತಾಳ, ಪಾಮನಕಲ್ಲೂರು ಕುರಕುಂದ ಭಾಗದಲ್ಲಿ ಭಾನುವಾರ ಭಾರಿ ಮಳೆ ಸುರಿದಿದೆ. ಸಿರವಾರದಲ್ಲಿ ನಾಲ್ಕು ಮನೆಗಳು ಕುಸಿದಿವೆ. ಸಿರವಾರ-ಹಟ್ಟಿ ಮುಖ್ಯರಸ್ತೆಯ ಕಿರು ಸೇತುವೆಯ ಡಾಂಬರ್ ಮಳೆ ನೀರಿಗೆ ಕೊಚ್ಚಿ ಹೋಗಿದೆ.

ಕವಿತಾಳ ಸಮೀಪದ ಯಕಲಾಸಪುರ ಗ್ರಾಮದ ಕೆರೆಗೆ ಕೋಡಿ ಬಿದ್ದು ಹೆದ್ದಾರಿಯಲ್ಲಿ ನೀರು ಸಂಗ್ರಹವಾಗಿದೆ. ವಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 600ಕ್ಕೂ ಹೆಚ್ಚು ಮನೆಗಳ ಗೋಡೆಗಳು ಕುಸಿದಿವೆ.

ದೇವದುರ್ಗ ತಾಲ್ಲೂಕು ಜಾಲಹಳ್ಳಿಯಲ್ಲಿ ಅನೇಕ ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ.

***
ಮುದಗಲ್‌ನಲ್ಲಿ 6 ಸೆಂ.ಮೀ. ಮಳೆ
ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ ರಾಜ್ಯದ ವಿವಿಧೆಡೆ ಬಿದ್ದ ಮಳೆ ವಿವರ.

ಅಂಕೋಲಾ 7, ಮುದಗಲ್‌ 6, ಅಥಣಿ, ಲಿಂಗಸಗೂರು ತಲಾ 5, ಹೊನ್ನಾವರ, ಸಂಕೇಶ್ವರ, ಆಲಮಟ್ಟಿ ತಲಾ 4, ಕೋಟ, ಲೋಕಾಪುರ, ಮಹಾಲಿಂಗಪುರ, ತಾಳಿಕೋಟೆ, ಸಿದ್ದಾಪುರ, ಚಿಂತಾಮಣಿ ತಲಾ 3, ಧರ್ಮಸ್ಥಳ, ಕಾರವಾರ, ಹುಮನಾಬಾದ್‌, ಮುದ್ದೇಬಿಹಾಳ, ಕಲಬುರ್ಗಿ, ಆಳಂದ, ಕಮಲಾಪುರ, ನಾರಾಯಣಪುರ, ರಾಯಚೂರು, ಮಸ್ಕಿ ತಲಾ 2, ಕುಮಟಾ, ಕದ್ರಾ, ಚಿಕ್ಕೋಡಿ, ಜಮಖಂಡಿ, ಬಾಗಲಕೋಟೆ, ದೇವದುರ್ಗದಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಕಲಬುರ್ಗಿಯಲ್ಲಿ 32.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಮತ್ತು ಬಾಗಲಕೋಟೆಯಲ್ಲಿ 20 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.