ADVERTISEMENT

ಆಹಾರ ಪೊಟ್ಟಣ ಬಲಾಢ್ಯರ ಪಾಲು...

ಬದರಿನಾಥದಲ್ಲಿ ಯಾತ್ರಿಕರ ಅಳಲು

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 19:59 IST
Last Updated 21 ಜೂನ್ 2013, 19:59 IST
ಆಹಾರ ಪೊಟ್ಟಣ ಬಲಾಢ್ಯರ ಪಾಲು...
ಆಹಾರ ಪೊಟ್ಟಣ ಬಲಾಢ್ಯರ ಪಾಲು...   

ವಿಜಾಪುರ:  `ಹೆಲಿಕಾಪ್ಟರ್ ಮೂಲಕ ಪೂರೈಸುತ್ತಿರುವ ಆಹಾರ ಪೊಟ್ಟಣಗಳು ಸ್ಥಳೀಯ ಬಲಾಢ್ಯರ ಪಾಲಾಗುತ್ತಿವೆ. ಆ ಪೊಟ್ಟಣಗಳನ್ನೇ ಅವರು ನಮಗೆ 150 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಚಹಾಕ್ಕೆರೂ 60, ಒಂದು ಲೀಟರ್ ನೀರಿಗೆ ರೂ 100 ಪಡೆಯುತ್ತಿದ್ದಾರೆ. ಎಟಿಎಂಗಳು ಕಾರ್ಯನಿರ್ವಹಿಸದ ಕಾರಣ ನಮ್ಮ ಕೈಯಲ್ಲಿ ಹಣವಿಲ್ಲದಂತಾಗಿದೆ...'

ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿಕೊಂಡು ಬದರಿನಾಥದಲ್ಲಿ ಆಶ್ರಯ ಪಡೆದಿರುವ ವಿಜಾಪುರದ  ಜಯಂತ್ ಕಟ್ಟಿ ಅವರ ವೇದನೆ ಇದು.
`ರಾಜ್ಯದ ಯಾತ್ರಿಗಳ ನೆರವಿಗಾಗಿ ಉತ್ತರಾಖಂಡಕ್ಕೆ ನಿಯೋಜನೆಗೊಂಡಿರುವ ನವೀನ್‌ರಾಜ್ ಸಿಂಗ್ ಅವರು ನಮಗೆ ಕರೆ ಮಾಡಿ ರಕ್ಷಿಸುವುದಾಗಿ ಹೇಳಿದರು.

ಆದರೆ, ಇದುವರೆಗೆ ಯಾವುದೇ ನೆರವು ಸಿಕ್ಕಿಲ್ಲ. ಈವರೆಗೂ ನಮ್ಮ ಬಳಿ ಯಾರೂ ಬಂದಿಲ್ಲ' ಎಂದು ಜಯಂತ್ ಕಟ್ಟಿ ದೂರವಾಣಿ ಮೂಲಕ ಇಲ್ಲಿಯ ತಮ್ಮ ಕುಟುಂಬ ವರ್ಗದವರಿಗೆ ಹೇಳಿದ್ದಾರೆ. ಈ ವಿಷಯವನ್ನು ಜಯಂತ್ ಸೋದರ ರವಿ ಕಟ್ಟಿ `ಪ್ರಜಾವಾಣಿ'ಗೆ ತಿಳಿಸಿದರು.

`ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳನ್ನು ಪೂರೈಸಲಾಗುತ್ತಿದೆ. ಸ್ಥಳೀಯ ಕೆಲ ಕಿಡಿಗೇಡಿಗಳು ಓಡಿ ಹೋಗಿ ಅವುಗಳನ್ನು ಆಯ್ದುಕೊಳ್ಳುತ್ತಾರೆ. ನಮ್ಮ ಬಳಿಗೆ ಬಂದು ಅದೇ ಪೊಟ್ಟಣಗಳನ್ನು ರೂ 150ಕ್ಕೆ ಮಾರಾಟ ಮಾಡುತ್ತಿದ್ದಾರೆ. ಆಹಾರ ಪೂರೈಸಿದ್ದೇವೆ ಎಂದು ಸರ್ಕಾರ ತಿಳಿದುಕೊಳ್ಳುತ್ತಿದ್ದು, ಇಲ್ಲಿಯ ಸ್ಥಿತಿಯೇ ಬೇರೆಯಾಗಿದೆ' ಎಂದು ಹೇಳಿದರು.

ಜಿಲ್ಲೆಯ 30 ಜನ: ಉತ್ತರಾಖಂಡದಲ್ಲಿನ ದುರಂತದಲ್ಲಿ ಜಿಲ್ಲೆಯ 30ರಿಂದ 35 ಯಾತ್ರಿಗಳು ತೊಂದರೆಗೆ ಒಳಗಾಗಿರುವ ಮಾಹಿತಿ ಇದ್ದು, ಅವರನ್ನು ತ್ವರಿತವಾಗಿ ಕರೆತರುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದ್ದಾರೆ.

ವಿಪತ್ತು ನಿರ್ವಹಣೆಗಾಗಿ ರಾಜ್ಯದಿಂದ ಉತ್ತರಾಖಂಡಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಈ ಮಾಹಿತಿ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT