ADVERTISEMENT

ಇಂಗ್ಲಿಷ್ ಭಾಷೆಯಿಂದ ದೇಸಿ ಭಾಷೆಗಳಿಗೆ ಕುತ್ತು: ಮನು ಬಳಿಗಾರ

ಇಂದಿನ ಜ್ವಲಂತ ಸಮಸ್ಯೆಗಳಿಗೆ ಕವಿರಾಜ ಮಾರ್ಗದಂತಹ ಕಾವ್ಯಗಳಲ್ಲಿ ಔಷಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 13:38 IST
Last Updated 17 ಜೂನ್ 2018, 13:38 IST
ಮನು ಬಳಿಗಾರ
ಮನು ಬಳಿಗಾರ   

ಬೆಳಗಾವಿ: ‘ಇಂಗ್ಲಿಷ್ ಭಾಷೆಯು ಬಿರುಗಾಳಿಯಾಗಿ, ವಿಷ ಗಾಳಿಯಾಗಿ ಬೀಸುತ್ತಿರುವುರಿಂದ ದೇಸಿ ಭಾಷೆಗಳಿಗೆ ಕುತ್ತು ಉಂಟಾಗಿದೆ’ ಎಂದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಕಳವಳ ವ್ಯಕ್ತಪಡಿಸಿದರು.

ವಿಶ್ವ ಜ್ಯೋತಿ ಪ್ರಕಾಶನದಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಿವೃತ್ತ ಪೊಲೀಸ್‌ ಅಧಿಕಾರಿ, ಕವಿ ಪಿ.ಬಿ. ಯಲಿಗಾರ ವಿರಚಿತ ‘ರಾಗ ರತಿ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕನ್ನಡ ಉಳಿಸಿಕೊಳ್ಳಲು ಎಲ್ಲರೂ ಮುಂದಾಗಬೇಕು. ಕನ್ನಡ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು’ ಎಂದು ಹೇಳಿದರು.

ADVERTISEMENT

‘ಕಾವ್ಯ ಹುಟ್ಟಲು ಉತ್ತಮ ಭಾವನೆ ಮತ್ತು ಸಂಸ್ಕಾರ ಇರಬೇಕು. ಮಾನವೀಯತೆ, ಸಮಾನತೆ, ಪ್ರೀತಿ ಕಾವ್ಯದ ಮೂಲ. ಪಿಎಚ್‌.ಡಿ ಮಾಡಿದವರು, ಪ್ರೊಫೆಸರ್‌ಗಳು ಮಾತ್ರವೇ ಕಾವ್ಯಗಳನ್ನು ಬರೆದಿಲ್ಲ. ವಿವಿಧ ಕ್ಷೇತ್ರದ ಅಧಿಕಾರಿಗಳು, ನೌಕರರು ಹಾಗೂ ಸಾಮಾನ್ಯರೂ ಚೆನ್ನಾಗಿ ಕವನ ರಚಿಸಿದ್ದಾರೆ. ಕನ್ನಡ ಕಾವ್ಯ, ಸಾಹಿತ್ಯ ಕ್ಷೇತ್ರಕ್ಕೆ ಪರಂಪರೆಯಲ್ಲಿ ಕಲಿಸುವವರು ಮಾತ್ರವಲ್ಲದೇ ಕಲಿಗಳೂ ದೊಡ್ಡ ಕೊಡುಗೆ ನೀಡಿದ್ದಾರೆ. ವಿವಿಧ ಕ್ಷೇತ್ರದವರು ಬರೆಯುತ್ತಿದ್ದಾರೆ. ಇದು ಕನ್ನಡ ಸಾಹಿತ್ಯದ ವೈಶಿಷ್ಟ್ಯ’ ಎಂದರು.

ಕವಿರಾಜ ಮಾರ್ಗದಲ್ಲಿ ಉತ್ತರ: ‘ಪರ ಧರ್ಮ, ಸಂಸ್ಕೃತಿ ಹಾಗೂ ವಿಚಾರಗಳನ್ನು ಗೌರವಿಸಬೇಕು ಎನ್ನುವುದನ್ನು ಕನ್ನಡ ಕಾವ್ಯಗಳು ಸಾರಿವೆ. ಜಾತಿ, ಧರ್ಮ, ದ್ವೇಷ, ರಾಷ್ಟ್ರೀಯ ಭಾವನೆಗಳಿಗೆ ಬೇರೆ ಬೇರೆ ಅರ್ಥ ಕೊಡುತ್ತಿರುವ ಈ ಸಂದರ್ಭದಲ್ಲಿ, ಇಂದಿನ ಜ್ವಲಂತ ಸಮಸ್ಯೆಗಳಿಗೆ ಕವಿರಾಜ ಮಾರ್ಗದಂತಹ ಕಾವ್ಯಗಳಲ್ಲಿ ಔಷಧವಿದೆ’ ಎಂದು ತಿಳಿಸಿದರು.

‘ಕುವೆಂಪು, ಬೇಂದ್ರೆ ಸಾಹಿತ್ಯ ಮತ್ತು ವಚನಗಳನ್ನು ಓದಿಕೊಳ್ಳದೆ ಇದ್ದರೆ ಒಳ್ಳೆಯ ಕವನ ರಚನೆ ಸಾಧ್ಯವಾಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಕೃತಿ ಪರಿಚಯಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಂಗರಾಜ ವನದುರ್ಗ, ‘ಕೆಡವುವವರಿಂದ ಕಾವ್ಯ ಕಟ್ಟಲಾಗುವುದಿಲ್ಲ. ಕಟ್ಟುವವರಿಂದ ಕಾವ್ಯ ಕಟ್ಟುವಿಕೆ ಸಾಧ್ಯ. ವಿಕೃತ ಮನೋಭಾವ, ಹೊಟ್ಟೆಕಿಚ್ಚು ಇರುವವರಿಗೆ ಚೆಲುವು ಎನ್ನುವುದು ಅರ್ಥವೇ ಆಗುವುದಿಲ್ಲ. ಆಗ ಚೆಲುವಿನ ಬಗ್ಗೆ ಚೆನ್ನಾಗಿ ಬರೆಯುವುದಕ್ಕೆ ಆಗುವುದಿಲ್ಲ’ ಎಂದರು.

ಪೊಲೀಸ್‌ ಕವಿಗಳನ್ನೂ ಆಹ್ವಾನಿಸಿ: ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಮಾತನಾಡಿ, ‘ಈವರೆಗೆ 4 ಪೊಲೀಸ್‌ ಕವಿ ಸಮ್ಮೇಳನ ನಡೆಸಿದ್ದೇವೆ. ನಮ್ಮಲ್ಲಿ 400 ಮಂದಿ ಕವಿಗಳಿದ್ದಾರೆ. ಅಧಿಕಾರಿಗಳಿಗಿಂತಲೂ ಚೆನ್ನಾಗಿ ಬರೆಯುವ ಸಿಬ್ಬಂದಿ ಇದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಿಗೆ ಆಯಾ ಭಾಗದ ಪೊಲೀಸ್ ಕವಿಗಳನ್ನೂ ಆಹ್ವಾನಿಸಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ, ‘ಸಾಹಿತ್ಯ ಲೋಕ ಇಂದು ಸಂಕ್ರಮಣ ಸ್ಥಿತಿಯಲ್ಲಿದೆ. ಸಂಕೀರ್ಣ ಹಾಗೂ ವೈಚಾರಿಕ ಭಾವನೆಯನ್ನು ಖಚಿತವಾಗಿ ಹೇಳಲಾಗದ ಸ್ಥಿತಿ ಈಗಿನದಾಗಿದೆ. ಭಾವಲೋಕ ಹಾಗೂ ಲೇಖಲೋಕದಲ್ಲಿ ಸಂಕೋಚ ಹಾಗೂ ತಲ್ಲಣಗಳು ಕಂಡುಬರುತ್ತಿವೆ. ಇದರಿಂದಾಗಿ ಸಾಹಿತ್ಯ ಹಾಗೂ ಭಾವ ತಲ್ಲಣಿಸುತ್ತಿವೆ. ಇಂದಿನ ಭಾವ ನಾಳೆಗೆ ಇರುತ್ತದೆಯೋ ಇಲ್ಲವೋ ಎನ್ನುವ ಸ್ಥಿತಿ ಇದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಕವಿ ಪಿ.ಬಿ. ಯಲಿಗಾರ ಇದ್ದರು. ಸಾಹಿತಿ ಯ.ರು. ಪಾಟೀಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.