ADVERTISEMENT

ಇಂದಿನಿಂದ ದತ್ತ ಜಯಂತಿ

ಭದ್ರತೆಗೆ ಎರಡು ಸಾವಿರ ಪೊಲೀಸರ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಸಂಘ ಪರಿವಾರದ ನೇತೃತ್ವದಲ್ಲಿ ಇದೇ 25ರಿಂದ 27ರವರೆಗೆ ನಡೆಯುವ ದತ್ತ ಜಯಂತಿಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ದತ್ತ ಭಕ್ತರನ್ನು ಸ್ವಾಗತಿಸಲು ನಗರ ಸಜ್ಜಾಗಿದೆ.

ನಗರದ ಪ್ರಮುಖ ರಸ್ತೆಗಳು, ಬೀದಿಗಳಲ್ಲಿ ಕೇಸರಿ ಭಗವಾ ಧ್ವಜಗಳು, ದತ್ತ ಜಯಂತಿಗೆ ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ. ದತ್ತಜಯಂತಿ ಕಾರ್ಯಕ್ರಮಗಳು 25ರಂದು ವಿಧ್ಯುಕ್ತವಾಗಿ ಆರಂಭವಾಗಲಿವೆ. ಮೊದಲ ದಿನ ದತ್ತಾತ್ರೇಯರ ತಾಯಿ ಅನುಸೂಯ ಜಯಂತಿ ನಡೆಯಲಿದೆ. ಅನುಸೂಯ ದೇವಿಯ ಭಕ್ತ ಮಹಿಳೆಯರು, ನಗರದಲ್ಲಿ ಸಂಕೀರ್ತನಾ ಯಾತ್ರೆ ನಡೆಸಲಿದ್ದಾರೆ. ನಂತರ ದತ್ತಪೀಠಕ್ಕೆ ತೆರಳಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆಯುವವರು.

ಮಾಲೆ ಧರಿಸಿ ಒಂದು ವಾರದಿಂದ ವ್ರತಾಚರಣೆಯಲ್ಲಿರುವ ದತ್ತ ಭಕ್ತರು 26ರಂದು ನಗರದ ಎಂ.ಜಿ.ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಲಿದ್ದಾರೆ. 27ರಂದು ದತ್ತಾತ್ರೇಯ ಪೀಠಕ್ಕೆ ತೆರಳಿ ಇರುಮುಡಿ ಅರ್ಪಿಸಿ, ಪಾದುಕೆಗಳ ದರ್ಶನ ಪಡೆದು, ಮಾಲೆ ತೆಗೆದು ವಾಪಸಾಗಲಿದ್ದಾರೆ.

ಬಜರಂಗದಳ ರಾಷ್ಟ್ರೀಯ ಸಂಚಾಲಕ ರಾಜೇಶ್ ಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಎನ್.ಜೀವರಾಜ್, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದತ್ತ ಮಾಲೆ ಧರಿಸಿರುವ ಉನ್ನತ ಶಿಕ್ಷಣ ಸಿ.ಟಿ.ರವಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ವಿ.ಸುನೀಲ್ ಕುಮಾರ್ ಮೊದಲಾದ ಗಣ್ಯರು ದತ್ತಪೀಠಕ್ಕೆ ಆಗಮಿಸಲಿದ್ದಾರೆ.

ಜಿಲ್ಲಾಡಳಿತ ಸಿದ್ಧತೆ: ದತ್ತ ಜಯಂತಿ ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಧಾರ್ಮಿಕ ದತ್ತಿ ಆಯುಕ್ತರ 25/2/1989ರ ಆದೇಶದಂತೆ 1975ಕ್ಕಿಂತ ಮೊದಲು ಇದ್ದ ಪದ್ಧತಿಯಂತೆಯೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ್ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾದುಕೆಗಳಿಗೆ ಹೂವು ಅರ್ಪಿಸುವುದು, ನಂದಾದೀಪ ಬೆಳಗಿಸುವುದು, ತೆಂಗಿನಕಾಯಿ ಒಡೆಯುವುದು, ತೀರ್ಥ, ಪ್ರಸಾದ ವಿನಿಯೋಗ, ಸ್ವಾಮೀಜಿಗಳಿಗೆ ಪಡಿ, ಫಲ ತಾಂಬೂಲ ನೀಡುವುದು ಧಾರ್ಮಿಕ ವಿಧಿಗಳಲ್ಲಿ ಸೇರಿದೆ. ಬೆಳಿಗ್ಗೆ 8ಯಿಂದ ಸಂಜೆ 5 ಗಂಟೆವರೆಗೆ ಪಾದುಕೆಗಳ ದರ್ಶನ ಪಡೆಯಬಹುದು ಎಂದರು.

ದತ್ತ ಜಯಂತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬಿಗಿ  ಬಂದೋಬಸ್ತ್ ಕಲ್ಪಿಸಿದ್ದು, ಈ ಬಾರಿ ಭದ್ರತೆಗೆ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಮತ್ತು ಕಾರವಾರ, ಹಾಸನ, ಶಿವಮೊಗ್ಗ ಜಿಲ್ಲೆಗಳಿಂದ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದರು.

ಆಯಕಟ್ಟಿನ ಸ್ಥಳಗಳಲ್ಲಿ 20 ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, 20 ವಿಡಿಯೊ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ. ಈಗಾಲೇ ಪ್ರಮುಖ ಸ್ಥಳಗಳಲ್ಲಿ 15 ಚೆಕ್‌ಪೋಸ್ಟ್‌ಗಳನ್ನು ತೆರೆದು, ಭದ್ರತೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.