ADVERTISEMENT

ಇಂದಿನಿಂದ ರಾಜ್ಯದಲ್ಲಿ ಖಗೋಳ ರಥಯಾತ್ರೆ

ಕೆ.ನರಸಿಂಹ ಮೂರ್ತಿ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಕೋಲಾರ: ಜರ್ಮನಿಯ ಸೌರವ್ಯೆಹ ಅಧ್ಯಯನ ಸಂಸ್ಥೆಗೂ ಕರ್ನಾಟಕದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಿಗೂ ಎತ್ತಣಿಂದೆತ್ತ ಸಂಬಂಧ? ಇದು ಅಚ್ಚರಿಯ ಪ್ರಶ್ನೆ. ಆದರೆ ಉತ್ತರವೂ ಸ್ಪಷ್ಟವಾಗಿದೆ. ಅದಕ್ಕೆ ಟೆಲಿಸ್ಕೋಪ್ ಸಂಶೋಧಕ ಗೆಲಿಲಿಯೊ  ಕಾರಣ ಎಂಬುದು ವಿಶೇಷ.

ಜರ್ಮನಿಯ ಮ್ಯೋಕ್ಸ್ ಫ್ಲಾಂಕ್ ಸೌರವ್ಯೆಹ ಅಧ್ಯಯನ ಸಂಸ್ಥೆಯು ಗೆಲಿಲಿಯೋ ಟೆಲಿಸ್ಕೋಪ್ ಅವಿಷ್ಕರಿಸಿದ 400ನೇ ವರ್ಷಾಚರಣೆ (2009) ಸಂದರ್ಭದಲ್ಲಿ ಖಗೋಳ ವಿಜ್ಞಾನ ಜನಪ್ರಿಯಗೊಳಿಸಲು ಹುಟ್ಟುಹಾಕಿದ ಸಂಶೋಧನಾ ವಿದ್ಯಾರ್ಥಿಗಳ ತಂಡದ `ಗೆಲಿಲಿಯೊ ಮೊಬೈಲ್~ನ ಸದಸ್ಯರು ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಖಗೋಳ ವಿಜ್ಞಾನ  ಪ್ರಚಾರಗೊಳಿಸುತ್ತಿದ್ದಾರೆ.

ತಂಡ ಈಗಾಗಲೆ ಆಂಡೀಸ್ ಪರ್ವತ ಶ್ರೇಣಿಗಳ ದೇಶಗಳಾದ ಪೆರು, ಚಿಲಿ, ಬೊಲಿವಿಯಾಗಳಲ್ಲಿ ಸಂಚರಿಸಿ ಗ್ರಾಮಾಂತರ ಪ್ರದೇಶದ 33 ಶಾಲೆಗಳನ್ನು ಸಂದರ್ಶಿಸಿ ಮಕ್ಕಳಲ್ಲಿ ಹಾಗೂ ಯುವಸಮೂಹದಲ್ಲಿ ಖಗೋಳದ ಬಗ್ಗೆ ಕುತೂಹಲ ಮೂಡಿಸಿತ್ತು. ಪ್ರತಿ ಶಾಲೆಗೂ ಟೆಲಿಸ್ಕೋಪ್ ಮತ್ತು ಆಕರ್ಷಕ ಖಗೋಳ ವಿಜ್ಞಾನ ಕಲಿಕಾ ಉಪಕರಣಗಳನ್ನು ದೇಣಿಗೆಯಾಗಿ ನೀಡಿತ್ತು.

ಈಗ ರಾಜ್ಯಕ್ಕೆ: ಗೆಲಿಲಿಯೊ ಸಂಚಾರಿ (ಮೊಬೈಲ್) ತಂಡ ಈಗ ಎರಡನೇ ಪ್ರವಾಸವನ್ನು ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಹಮ್ಮಿಕೊಂಡಿದೆ. ಕಾರ್ಯಕ್ರಮದ ಹೆಸರು `ಖಗೋಳ ರಥಯಾತ್ರೆ~.

ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿಗಳು, ಸಮಾಜ ಕಾರ್ಯಕರ್ತರು, ಖಗೋಳ ವಿಜ್ಞಾನಿಗಳು ಸೇರಿದಂತೆ 27 ಸದಸ್ಯರು ತಂಡದಲ್ಲಿದ್ದಾರೆ. ಅವರ ಪೈಕಿ 6 ಮಂದಿ ರಾಜ್ಯದಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ತಂಡದ ಸದಸ್ಯರಲ್ಲೊಬ್ಬರಾದ ಡಾ.ಮೇಘ ಭಟ್ ತಿಳಿಸಿದರು.

ಕಾರ್ಯಕ್ರಮಕ್ಕೆಂದು ಕೆಲವು ದಿನಗಳ ಹಿಂದೆಯೇ ಅವರು ಬೆಂಗಳೂರಿಗೆ ಬಂದಿದ್ದಾರೆ. `ಪ್ರಜಾವಾಣಿ~ಯೊಡನೆ ದೂರವಾಣಿಯಲ್ಲಿ ಭಾನುವಾರ ಮಾತನಾಡಿದ ಅವರು, ಗೆಲಿಲಿಯೊ ಮೊಬೈಲ್ ಇಂಡಿಯಲ್ ಇನ್ಸ್‌ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಭಾರತೀಯ ಖಭೌತ ವಿಜ್ಞಾನ ಸಂಸ್ಥೆ) ಹಾಗೂ ಜವಾಹರಲಾಲ್ ನೆಹರೂ ತಾರಾಲಯದ ಸಹಯೋಗಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ರಾಜ್ಯದಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಪ್ರಯಾಣಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯಿಂದ ಪ್ರವಾಸ ಶುರು ಮಾಡಿ ತುಮಕೂರು, ಮಂಡ್ಯದ ಶಾಲೆಗಳಿಗೆ ಭೇಟಿ ನೀಡಲಾಗುವುದು.

ಖಗೋಳ ವಿಜ್ಞಾನಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಆರ್ಯಭಟ, ವರಾಹಮಿಹಿರ, ಬ್ರಹ್ಮಗುಪ್ತ ಮುಂತಾದ ಪ್ರಾಚೀನ ಭಾರತದ ಖಗೋಳಜ್ಞರನ್ನು ಗೌರವಿಸುವುದರ ಭಾಗವಾಗಿ ಭಾರತದಲ್ಲಿ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಭೇಟಿ ನೀಡುವ ಎಲ್ಲ ಶಾಲೆಗಳಿಗೂ ಒಂದೊಂದು ಟೆಲಿಸ್ಕೋಪ್ ಹಾಗೂ ಕೆಲವು ಕಲಿಕಾ ಉಪಕರಣಗಳನ್ನು ತಂಡ ನೀಡಲಿದೆ. ಶಾಲೆಗಳ ಮತ್ತು ಆಸಕ್ತ ಇತರೆ ಶಾಲೆಗಳ ಶಿಕ್ಷಕರಿಗೆ ಖಗೋಳವಿಜ್ಞಾನದ ಬಗ್ಗೆ ಕಿರು ತರಬೇತಿ ನೀಡಲಿದೆ. ಬೆಳಗಿನಿಂದ ಸಂಜೆಯವರೆಗೂ ಮಕ್ಕಳನ್ನು ತಂಡಗಳಲ್ಲಿ ವಿಂಗಡಿಸಿ ಚಟುವಟಿಕೆಗಳನ್ನು ನಡೆಸಲಾಗುವುದು. ಅವಕಾಶವಿದ್ದರೆ ರಾತ್ರಿ ಆಕಾಶ ವೀಕ್ಷಣೆಯೂ ಇರುತ್ತದೆ ಎಂದರು.

ಚಾಲನೆ: ಜುಲೈ 2ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆಯಲ್ಲಿ ಯಾತ್ರೆ ಆರಂಭವಾಗಲಿದೆ. ತಂಡದ ಸದಸ್ಯರು ಮತ್ತು ಸ್ಥಳೀಯರ ನಡುವೆ ಸಂವಹನ ಸರಳಗೊಳಿಸುವ ಸಲುವಾಗಿ ಕೋಲಾರದ ವಿಜ್ಞಾನ ಸಂವಹನಕಾರ ವಿ.ಎಸ್.ಎಸ್.ಶಾಸ್ತ್ರಿ, ಅಕ್ಷಯ್‌ಕುಮಾರ್, ಜಿ.ಚಂದ್ರಶೇಖರ್, ದಿಲೀಪ್‌ಕುಮಾರ್ ಮತ್ತು ಕಥನ್ ಕೊಥಾರಿ ಎಂಬ ಹವ್ಯಾಸಿ ಖಗೋಳಾಸಕ್ತರೂ ಇರುತ್ತಾರೆ. ಜುಲೈ 13ರ ವರೆಗೆ ಯಾತ್ರೆ ನಡೆಯಲಿದೆ.

ಮೊಟ್ಟಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಖಗೋಳ ವಿಜ್ಞಾನದ ಬಗ್ಗೆ ಜಾಗತಿಕ ಮಟ್ಟದ ಪ್ರಾತ್ಯಕ್ಷಿಕೆಗಳು ದೊರಕುತ್ತಿರುವುದು ವಿಶೇಷ. ಅದಕ್ಕಾಗಿಯೇ ನಾವು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇವೆ ಎನ್ನುತ್ತಾರೆ ಕೋಲಾರದ ವಿ.ಎಸ್.ಎಸ್.ಶಾಸ್ತ್ರಿ. ನಮ್ಮ ಶಾಲೆಯನ್ನು ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ ಎಂಬುದು ಚೀಮಂಗಲ ಶಾಲೆಯ ಮುಖ್ಯಶಿಕ್ಷಕ ಎಂ.ಜೆ.ರಾಜೀವಗೌಡ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.