ADVERTISEMENT

ಇಂದಿರಾಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 7:27 IST
Last Updated 14 ಡಿಸೆಂಬರ್ 2017, 7:27 IST
ಇಂದಿರಾಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ: ಸಿಎಂ ಸಿದ್ದರಾಮಯ್ಯ
ಇಂದಿರಾಗಾಂಧಿ ಲಂಚ ತೆಗೆದುಕೊಂಡು ಜೈಲಿಗೆ ಹೋಗಿಲ್ಲ: ಸಿಎಂ ಸಿದ್ದರಾಮಯ್ಯ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಇಂದಿರಾಗಾಂಧಿ ಅವರು ಯಡಿಯೂರಪ್ಪ ಅವರಂಥೆ ಲಂಚ ತೆಗೆದುಕೊಂಡ ಕಾರಣಕ್ಕೆ ಜೈಲಿಗೆ ಹೋಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿನ ಹೆಲಿಪ್ಯಾಡ್‌ನಲ್ಲಿ  ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಸಂದರ್ಭ ಜೈಲಿಗೆ ಹೋಗಬೇಕಾಯಿತು. ಯಡಿಯೂರಪ್ಪ ಚೆಕ್ ಮೂಲಕ ಲಂಚ ತೆಗೆದುಕೊಂಡ ಕಾರಣಕ್ಕೆ ಜೈಲಿಗೆ ಹೋದರು. ಇದೇ ಕಾರಣಕ್ಕೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂಡಾ ಜೈಲಿಗೆ ಹೋದರು. ನಮ್ಮಲ್ಲಿ ಏನಾದರೂ ಹಗರಣಗಳಿದ್ದಾವೆಯೇ? ಎಂದು ಪ್ರಶ್ನಿಸಿದರು.

ADVERTISEMENT

10 ದಿನಗಳ ಕಾಲ ವಿಧಾನಸಭಾ ಅಧಿವೇಶನದಲ್ಲಿ ಯಡಿಯೂರಪ್ಪ ಅವರು ಹಾವು ಬಿಡ್ತೀವಿ ಅಂದರು. ಬುಟ್ಟಿಯಲ್ಲಿ ಹಾವೇ ಇಲ್ಲ. ಬರೀ ಬಿಡ್ತೀವಿ ಎಂದು ಹೆದರಿಸುತ್ತಿದ್ದಾರೆ. ಅವರ ವಿರುದ್ಧ 42 ಎಫ್ಐಆರ್‌ಗಳು ಇವೆ. ಅವುಗಳಿಂದ ಹೊರಬರಲಿ ಎಂದರು.

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಸಿದ್ಧ. ಆದರೆ ಕೇಂದ್ರ ಸರ್ಕಾರದವರು ಅನುದಾನ ಕೊಡಬೇಕು. ಆದರೆ ನೀವೇ ಖರೀದಿಸಿ ಪಡಿತರ ವ್ಯವಸ್ಥೆ ಮೂಲಕ ಮಾರಾಟ ಮಾಡಿ ಅನ್ನುತ್ತಾರೆ. ಕರ್ನಾಟಕದಲ್ಲಿ ಯಾರಾದರೂ ಮೆಕ್ಕೆಜೋಳ ಹೆಚ್ಚು ಬಳಸುತ್ತಾರೆಯೇ ಎಂದು ಕೇಳಿದರು.

ಹೊನ್ನಾವರದಲ್ಲಿ ಕೋಮು ಗಲಭೆಗಳ ಮೂಲಕ ಬಿಜೆಪಿ ಮತದ್ರುವೀಕರಣ ಮಾಡಲು ಯತ್ನಿಸುತ್ತಿದೆ. ಸದ್ಯ ಅಲ್ಲಿ ಎಲ್ಲವೂ ಶಾಂತವಾಗಿದೆ. ಯಾರೂ ವದಂತಿ ಹರಡಬಾರದು ಎಂದು ಕೋರಿದರು.

ವೀರಶೈವ-ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಸಮಾಜವನ್ನು ಒಡೆಯುವ ಯತ್ನ ಮಾಡಿಲ್ಲ‌. ಅದಕ್ಕಾಗಿ ಯಾವ ಸಚಿವರನ್ನೂ ನೇಮಿಸಿಲ್ಲ. ವೀರಶೈವ-ಲಿಂಗಾಯತ ಸಮಾಜದ ಮುಖಂಡರು ಒಟ್ಟಾಗಿ ಬನ್ನಿ ಎಂದು ಕರೆದಿದ್ದೆ. ಅವರು ಬಂದಿಲ್ಲ. ಬರುವುದೂ ಇಲ್ಲ. ನೀವೇ (ಪತ್ರಕರ್ತರು) ಅವರನ್ನು ಒಟ್ಟಾಗಿ ಕರೆದುಕೊಂಡು ಬನ್ನಿ ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.