ADVERTISEMENT

ಇಕ್ರಲಾ, ಒದಿರಲಾ ಕವಿತೆ ನೋವಿನ ಸಾಹಿತ್ಯ!

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 19:30 IST
Last Updated 8 ಜನವರಿ 2014, 19:30 IST

ಭಾರತೀಸುತ ವೇದಿಕೆ (ಮಡಿಕೇರಿ): ‘ನಾನು ಇಕ್ರಲಾ, ಒದಿರಲಾ ಎಂದು ಬರೆದಿದ್ದು ನೋವಿನ ಸಾಹಿತ್ಯವೇ ವಿನಾ ದ್ವೇಷದ ಸಾಹಿತ್ಯ ಅಲ್ಲ’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದ್ದಾರೆ.

ಇಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಬುಧವಾರ ’ಕನ್ನಡ ಸಾಹಿತ್ಯದಲ್ಲಿ ದಲಿತ ಸಂವೇದನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು ದಲಿತೇತರರಲ್ಲಿ ಪಾಪ ಪ್ರಜ್ಞೆ ಮೂಡಿಸುವುದು ದಲಿತ ಸಾಹಿತ್ಯದ ಮುಖ್ಯ ಉದ್ದೇಶ ಎಂದರು.

ಕನ್ನಡಿಗರು ಕೋಮುವಾದಿಗಳೂ ಅಲ್ಲ, ಜಾತಿವಾದಿಗಳೂ ಅಲ್ಲ. ಬಸವಣ್ಣ, ಪಂಪ ಮುಂತಾದ ಮಹಾನುಭಾವರ ಪರಂಪರೆ ಕನ್ನಡಕ್ಕಿದೆ. ಎಲ್ಲ ಜಾತಿಯ ಪ್ರಗತಿಪರರೂ ದಲಿತ ಹೋರಾಟವನ್ನು ಬೆಂಬಲಿಸಬೇಕು. ದಲಿತ ಸಾಹಿತ್ಯ ಕನ್ನಡ ಸಾಹಿತ್ಯದ ಮುಖ್ಯಭಾಗ. ದುಃಖದ ಭಾಗವೂ ಹೌದು. ದಲಿತರ ನೋವು­ಗಳನ್ನು ಇತರರು ಅರ್ಥ ಮಾಡಿಕೊಳ್ಳ­ಬೇಕು. ದಲಿತರ ಸಮಸ್ಯೆ ಕೇವಲ ದಲಿತರ ಸಮಸ್ಯೆ ಅಲ್ಲ. ಅದು ಸಾಮಾ­ಜಿಕ ಸಮಸ್ಯೆ ಎಂದು ಬಣ್ಣಿಸಿದರು

ಆಶಯ ಭಾಷಣ ಮಾಡಿದ ಕವಿ ಮೂಡ್ನಾಕೂಡು ಚಿನ್ನಸ್ವಾಮಿ, ದಲಿತರು ಮೇಲ್ವರ್ಗದವರನ್ನು ದ್ವೇಷಿಸದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು. ದಲಿತರು ಪರಂಪರೆಯ ವಕ್ತಾರರೂ ಆಗಬೇಕು, ಬದಲಾವಣೆಯ ಹರಿಕಾ­ರರೂ ಆಗಬೇಕು ಎಂದು ಬಯಸಿದರು.

ದೇಶದಲ್ಲಿ ಅಸ್ಪೃಶ್ಯತೆ ಒಂದು ಸಮ­ಸ್ಯೆಯೇ ಅಲ್ಲ ಎನ್ನುವಂತಾಗಿದೆ. ಅಂಬೇ­ಡ್ಕರ್‌ ಅವರು ಕೊಟ್ಟ ಸಂವಿಧಾನ ಜಾರಿ­ಯಲ್ಲಿದ್ದರೂ ಮನು ಪ್ರೇರಿತವಾದ ಜಾತಿ ಸಂವಿಧಾನ ಇನ್ನೂ ಇದೆ. ನಮ್ಮ ದೇಶ ಈಗಲೂ ನಿಂತಿರುವುದು ಜಾತಿ ಸಂವಿಧಾನದ ಮೇಲೆ ಎಂದರು.

ದಲಿತ ಸಾಹಿತ್ಯದ ಉತ್ಕೃಷ್ಟ ಕೃತಿ ಇನ್ನೂ ಬಂದಿಲ್ಲ. ಆದರೆ ಈವರೆಗಿನ ದಲಿತ ಸಾಹಿತ್ಯಕ್ಕೆ ವಿಮರ್ಶೆಯ ಕೊರತೆ ಕಾಡುತ್ತಿದೆ. ವಿವೇಕ ಹುಟ್ಟೋದು ನೋವಿನಲ್ಲಿ, ಅವಮಾನದಲ್ಲಿ. ಇಂತಹ ಅನುಭವದ ಸಾಕಷ್ಟು ಕೃತಿಗಳನ್ನು ಕನ್ನಡದಲ್ಲಿ ಬಂದಿವೆ. ಇನ್ನು ಮುಂದೆ ದಲಿತ ಲೇಖಕರು ಆಧ್ಯಾತ್ಮದ ಹಸಿವಿನ ಬಗ್ಗೆ ಬರೆಯ ಬೇಕು ಎಂದು ಹೇಳಿದರು.

ಬೇಡಿಕೆಯಲ್ಲ, ಹಕ್ಕು: ದಲಿತರ ಕೈಗೆ ರಾಜ್ಯ ಕೊಡಿ ಎಂದರೆ ಅದು ಬೇಡಿಕೆಯಲ್ಲ. ಹಕ್ಕು ಎಂದು ಡಾ.ಪ್ರಶಾಂತ್‌ ಜಿ.ನಾಯಕ್‌ ಹೇಳಿದರು.

  ದಲಿತ ಸಾಹಿತ್ಯ ಮತ್ತು ರಾಜಕೀಯ ದೃಷ್ಟಿಕೋನದ ಬಗ್ಗೆ ಪ್ರಬಂಧ ಮಂಡಿಸಿದ ಅವರು ನಮ್ಮ ದೇಶ ಭ್ರಷ್ಟತೆಯಿಂದ ನಲುಗಿದ್ದಕ್ಕಿಂತ ಜಾತಿಯಿಂದ ನಲುಗಿದ್ದೇ ಹೆಚ್ಚು ಎಂದು ಹೇಳಿದರು.

ಡಾ.ಎಚ್‌.ದಂಡಪ್ಪ ದಲಿತ ಸಾಹಿತ್ಯ ಮತ್ತು ಚಳವಳಿ ಕುರಿತು ಪ್ರಬಂಧ ಮಂಡಿಸಿದರು.

ನಂಜುಡೇಶ್ವರನಿಗೆ ಲುಕ್ಸಾನು!

ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ ಸಾಹಿತಿಯೊಬ್ಬರು ನಂಜನಗೂಡಿನ ನಂಜುಂಡೇ­ಶ್ವರ­ನನ್ನು ನೋಡಲು ಹೋದರು. ಆದರೆ, ದೇವಾಲಯದ ಬಾಗಿಲಿನಲ್ಲಿಯೇ ಅವರನ್ನು ತಡೆದು ದಲಿತರಿಗೆ ಒಳಗೆ ಪ್ರವೇಶವಿಲ್ಲ ಎಂದು ಹೇಳಲಾಯಿತು. ಆ ಸಾಹಿತಿಗಳು ಬೇಸರ ಮಾಡಿಕೊಳ್ಳಲಿಲ್ಲ. ದೇವಾಲಯದ ಆವರಣದಲ್ಲಿ ನಿಂತು ‘ದೇವರ ದರ್ಶನ ನನಗೆ ಇಲ್ಲ. ನನ್ನ ದರ್ಶನದ ಭಾಗ್ಯವೂ ದೇವರಿಗೆ ಸಿಗಲಿಲ್ಲ. ಇದರಿಂದ ನಂಜುಂಡೇಶ್ವರನಿಗೇ ಲುಕ್ಸಾನು’ ಎಂದು ಉದ್ಗರಿಸಿದರು. ಕವಿ ಸಿದ್ದ­ಲಿಂಗಯ್ಯ ಈ ಕತೆಹೇಳಿ ದಲಿತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಹೃದಯದಲ್ಲಿ ನೋವಿದೆ, ಮುಖದಲ್ಲಿ ನಗುವಿದೆ!
ಒಮ್ಮೆ ದಲಿತನ ಮೇಲೆ ಮೇಲ್ವರ್ಗದವರು ಹಲ್ಲೆ ನಡೆಸಿದರು. ಆತನಿಗೆ ಸಾಕಷ್ಟು ಪೆಟ್ಟಾಗಿತ್ತು. ಕವಿ ಸಿದ್ದಲಿಂಗಯ್ಯ ಮತ್ತು ಇತರರು ಆತನನ್ನು ಆಸ್ಪತ್ರೆಗೆ ಸೇರಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಪೆಟ್ಟು ತಿಂದ ದಲಿತನ ಫೋಟೊ ಇದ್ದರೆ ಒಳ್ಳೆಯದು ಎಂದು ತೀರ್ಮಾನಿಸಿ ಅಲ್ಲಿರುವ ಕಾರ್ಯಕರ್ತರಿಗೆ ಫೋಟೊ ತೆಗೆಸಲು ಹೇಳಿದರು. ಮಾರನೇ ದಿನ ಆ ದಲಿತನ ಫೋಟೊ ನೋಡಿದರೆ ಆತನ ತಲೆಗೆ ಬ್ಯಾಂಡೇಜ್‌ ಇತ್ತು. ಆದರೆ ಮುಖದಲ್ಲಿ ನಗು ಇತ್ತು. ಅದನ್ನು ನೋಡಿ ದಂಗಾದ ಸಿದ್ದಲಿಂಗಯ್ಯ ’ಯಾಕಯ್ಯ ನಗುತ್ತಿದ್ದೀಯಾ? ಈ ಫೋಟೊ ನೀಡಿದರೆ ಪೊಲೀಸರು ದೂರು ಸ್ವೀಕರಿಸುವುದಿಲ್ಲ’ ಎಂದರು. ಅದಕ್ಕೆ ಪೆಟ್ಟು ತಿಂದ ದಲಿತ ‘ಫೋಟೊ ತೆಗೆಯುವಾಗ ಫೋಟೊಗ್ರಾಫರ್‌ ಸ್ಮೈಲ್‌ ಎಂದ. ಅದಕ್ಕೆ ನಕ್ಕೆ ಸ್ವಾಮಿ’ ಎಂದು ಉತ್ತರಿಸಿದನಂತೆ. ಈ ಘಟನೆಯನ್ನೂ ಸಿದ್ದಲಿಂಗಯ್ಯ ವಿವರಿಸಿ ದಲಿತರು ಇನ್ನೂ ಮುಗ್ಧತೆಯಿಂದ ಹೊರಬಂದಿಲ್ಲ. ಅವರ ಮುಖದಲ್ಲಿ ನಗೆ ಇದೆ. ಆದರೆ ಹೃದಯದಲ್ಲಿ ನೋವು ತುಂಬಿ ಕೊಂಡಿದೆ ಎಂದರು.

ಗಾಂಧಿ ನಂತರ ಯಾರು?
ಟಿವಿ ಚಾನೆಲ್‌ವೊಂದು ಮಹಾತ್ಮಾ ಗಾಂಧಿ ನಂತರ ಯಾರು ಶ್ರೇಷ್ಠರು ಎನ್ನುವುದರ ಬಗ್ಗೆ ಸಮೀಕ್ಷೆ ಮಾಡಿತು. ಜವಾಹರಲಾಲ್‌ ನೆಹರೂ ಅವರಿಗೆ 8 ಸಾವಿರ ಮತ ಬಂತು. ಇಂದಿರಾ ಗಾಂಧಿ ಅವರಿಗೆ 19 ಸಾವಿರ ಮತ ಬಂದರೆ ಅಂಬೇಡ್ಕರ್‌ ಅವರಿಗೆ 19 ಲಕ್ಷ ಮತ ಬಂತು. ದಲಿತರನ್ನು ಭಾರತೀಯ ಸಮಾಜ ಸ್ವೀಕರಿಸಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಕೇವಲ ದಲಿತರು ಮಾತ್ರ ಮತ ಚಲಾಯಿಸಿದ್ದರೆ ಅಂಬೇಡ್ಕರ್‌ ಅವರಿಗೆ ಇಷ್ಟೊಂದು ಮತ ಬರುತ್ತಿರಲಿಲ್ಲ ಎಂದೂ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT