ADVERTISEMENT

ಇನ್ನೂ ಎರಡು ದಿನ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:30 IST
Last Updated 19 ಮಾರ್ಚ್ 2018, 19:30 IST

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಇನ್ನೂ ಎರಡು ದಿನಗಳು ಸಾಧಾರಣ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಅರಬ್ಬಿಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಕನ್ಯಾಕುಮಾರಿಯಿಂದ ದಕ್ಷಿಣ ಮಧ್ಯ ಮಹಾರಾಷ್ಟ್ರದ ಕಡೆಗೆ ಚಲಿಸುತ್ತಿರುವ ಪರಿಣಾಮ ತಮಿಳುನಾಡು ಹಾಗೂ ರಾಜ್ಯದಲ್ಲಿ ಮಳೆಯಾಗುತ್ತಿದೆ ಎಂದು ರಾಜ್ಯ ಪ್ರಕೃತಿ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ವಿವರಿಸಿದರು.

ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಭಾವ ಕಡಿಮೆಯಾಗಿದೆ. ಗಾಳಿಯ ವೇಗವೂ ತಗ್ಗಿದೆ. ಮೋಡಗಳು ರಾಜ್ಯದ ಕಡೆಯಿಂದ ಚಲಿಸುತ್ತಿರುವುದರಿಂದ ಮಳೆಯಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಬೇಸಿಗೆಯಲ್ಲಿ ಮಳೆಯಾಗುವುದು ಅಪರೂಪದ ಸಂಗತಿಯೇನಲ್ಲ. ಫೆಬ್ರುವರಿಯಲ್ಲಿ ಮಳೆಯಾದರೆ, ಮಾರ್ಚ್‌ ತಿಂಗಳಲ್ಲಿ ಹೆಚ್ಚು ಮಳೆಯಾಗುವುದಿಲ್ಲ. ಈ ಸಲ ಜನವರಿಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ ಫೆಬ್ರುವರಿಯಲ್ಲಿ ಆಗಿರಲಿಲ್ಲ. ಹಾಗಾಗಿ ಈಗ ಉತ್ತಮ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ಹೇಳಿದರು.

ಮಾರ್ಚ್‌– ಏಪ್ರಿಲ್‌ನಲ್ಲಿ ಹೆಚ್ಚು ಮಳೆಯಾದರೂ ಮುಂಗಾರು ಪ್ರವೇಶದಲ್ಲಿ ವ್ಯತ್ಯಯ ಆಗದು. ಮೇ ತಿಂಗಳಲ್ಲಿ ಮಳೆ ಸುರಿದರೆ, ಜೂನ್‌ನಲ್ಲಿ ಪ್ರಾರಂಭವಾಗುವ ಮುಂಗಾರು ಕೈ ಕೊಡುವ ಸಂಭವವಿರುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿ 160 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಮುಂದಿನ ತಿಂಗಳಲ್ಲೂ ಉತ್ತಮ ಮಳೆಯಾಗುವ ಸೂಚನೆ ಇದೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಗಾಳಿಯಲ್ಲಿ ಒತ್ತಡ ಕಡಿಮೆಯಾಗಿ, ಮಳೆ ಮೋಡಗಳು ರಚನೆಯಾಗುತ್ತವೆ. ಬೇಸಿಗೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಈ ಪ್ರಕ್ರಿಯೆ ಪುನರಾವರ್ತನೆ ಆಗುತ್ತಿರುತ್ತದೆ ಎಂದು ತಿಳಿಸಿದರು.

ಈಗ ಮಳೆಯಾಗಿದ್ದರಿಂದ ಗರಿಷ್ಠ ಉಷ್ಣಾಂಶದಲ್ಲಿ 2 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಇನ್ನು ಎರಡು ದಿನ ಮೋಡ ಕವಿದ ವಾತಾವರಣ ಇರುವುದರಿಂದ ಉಷ್ಣಾಂಶದಲ್ಲಿ ಭಾರಿ ಏರಿಕೆ ಕಾಣುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.