ADVERTISEMENT

ಇಲ್ಲಿ ವಲಸಿಗರ ಪಾರುಪತ್ಯ

ಎಂ.ಜೆ.ಶ್ರೀನಿವಾಸ
Published 7 ಏಪ್ರಿಲ್ 2013, 19:59 IST
Last Updated 7 ಏಪ್ರಿಲ್ 2013, 19:59 IST

ಗಂಗಾವತಿ: ಕ್ಷೇತ್ರ ಪುನರ್‌ವಿಂಗಡಣೆ(1978) ಬಳಿಕ ಇಲ್ಲಿವರೆಗೆ ಒಟ್ಟು ಎಂಟು ಚುನಾವಣೆ ಎದುರಿಸಿರುವ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಲಸಿಗರೇ ಪ್ರಾಬಲ್ಯ ಮೆರೆದಿದ್ದಾರೆ.

ಎಂಟು ಚುನಾವಣೆಗಳ ಪೈಕಿ 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದ ಸಾಲೋಣಿ ನಾಗಪ್ಪ ಅವರನ್ನು ಬಿಟ್ಟರೆ ಮಿಕ್ಕುಳಿದವರೆಲ್ಲರೂ ರಾಜಕೀಯ ಆಶ್ರಯಕ್ಕೆಂದು ಕ್ಷೇತ್ರಕ್ಕೆ ಕಾಲಿಟ್ಟರು.

ಕ್ಷೇತ್ರವು ಇದೀಗ ಒಂಬತ್ತನೇ ಹಣಾಹಣಿಗೆ ಸಜ್ಜಾಗಿದೆ. ಈ ಸಲ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿರುವ ಬಹುತೇಕ ಅಭ್ಯರ್ಥಿಗಳು ಹೊರಗಿನವರು. ರಾಷ್ಟ್ರೀಯ ಪಕ್ಷಗಳಷ್ಟೇ ಅಲ್ಲ, ಪ್ರಾದೇಶಿಕ ಪಕ್ಷಗಳೂ ಈ ಬಾರಿಯೂ ವಲಸಿಗರಿಗೇ ಆದ್ಯತೆ ನೀಡುವ ಮೂಲಕ ಕ್ಷೇತ್ರಕ್ಕಿರುವ ಇತಿಹಾಸವನ್ನು ಮುಂದುವರಿಸಿವೆ.

ಇತಿಹಾಸದ ಮೆಲುಕು: 1978ರಲ್ಲಿ ಕ್ಷೇತ್ರ ರಚನೆಯಾದ ಬಳಿಕ ಮೊದಲ ಚುನಾವಣೆಯಲ್ಲಿ ಎಂ. ನಾಗಪ್ಪ, 1983, 1985ರಲ್ಲಿ (ಉಪ ಚುನಾವಣೆ) ಶ್ರೀರಂಗದೇವರಾಯಲು, 1989ರಲ್ಲಿ ಮಲ್ಲಿಕಾರ್ಜುನ ನಾಗಪ್ಪ ಕ್ಷೇತ್ರದಿಂದ ಆಯ್ಕೆಯಾದರು.

1978ರಿಂದ 1989ರವರೆಗೆ ಸ್ಪರ್ಧಿಸಿದ್ದ ಮೂವರು ಗಂಗಾವತಿ ಕ್ಷೇತ್ರದವರು ಎನ್ನುವುದು ಒಂದು ವಿಶೇಷವಾದರೆ, ಎಲ್ಲರೂ ಕಾಂಗ್ರೆಸ್ಸಿಗರು ಎನ್ನುವುದು ಮತ್ತೊಂದು ವಿಶೇಷ. ಬಳಿಕ 1994ರಲ್ಲಿ ನಡೆದ ಚುನಾವಣೆಯಲ್ಲಿ ಸ್ಥಳೀಯರಾದ ಸಾಲೋಣಿ ನಾಗಪ್ಪ ಆಯ್ಕೆಯಾದರು.

1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ನಾಗಪ್ಪ ಹಾಗೂ 2004ರಲ್ಲಿ ನಡೆದ ಚುನಾವಣೆಯಲ್ಲಿ ಜಿ. ವೀರಪ್ಪ ಎಂಬುವವರು ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಇಬ್ಬರ್ದ್ದದೂ ಗಂಗಾವತಿ ಮತ ಕ್ಷೇತ್ರ.

ಮೀಸಲು ಕ್ಷೇತ್ರ: ಮೀಸಲು ಕ್ಷೇತ್ರವಾದ ಬಳಿಕ ಕ್ಷೇತ್ರಕ್ಕೆ ವಲಸಿಗರ ಹಾವಳಿ ಮತ್ತಷ್ಟು ಹೆಚ್ಚಾಗಿದೆ. 2008ರಲ್ಲಿ ಇಲಕಲ್ ಮೂಲದ ಉದ್ಯಮಿ ಶಿವರಾಜ ತಂಗಡಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಸಚಿವರಾಗಿ ಮತ್ತೆ ಇತಿಹಾಸ ಮರುಕಳಿಸುವಂತೆ ಮಾಡಿದ್ದಾರೆ.

ರಾಮಾನಾಯ್ಕ-ಬಿಜೆಪಿ, ಮುಕುಂದ್‌ರಾವ್ ಭವಾನಿಮಠ -ಬಿಎಸ್‌ಆರ್ (ಗಂಗಾವತಿ), ಶಿವರಾಜ ತಂಗಡಗಿ-ಕಾಂಗ್ರೆಸ್ (ಇಲಕಲ್), ಬಸವರಾಜ ದಢೇಸ್ಗೂರು-ಕೆಜೆಪಿ (ಸಿರುಗುಪ್ಪ) ಹಾಗೂ ಪ್ರಕಾಶ ರಾಠೋಡ-ಜೆಡಿಎಸ್ (ಕುಷ್ಟಗಿ) ಈ ಬಾರಿ ಕಣದಲ್ಲಿದ್ದು ಕುತೂಹಲ ಮೂಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.