ADVERTISEMENT

ಈಗಲೂ ನಮ್ಮದು ಸ್ವಚ್ಛ ಸಂಪುಟ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಬೆಂಗಳೂರು: ‘ನಮ್ಮ ಸಚಿವ ಸಂಪುಟ ಶುದ್ಧ ವರ್ಚಸ್ಸು ಹೊಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ‘ಸಚಿವರಾದ ರೋಷನ್‌ ಬೇಗ್‌ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇವಲ ಆರೋಪಗಳಿವೆ. ಆರೋಪಗಳಿದ್ದ ಮಾತ್ರಕ್ಕೆ ಅವರು ಅಪರಾಧಿಗಳೂ ಅಲ್ಲ, ಕಳಂಕಿತರೂ ಅಲ್ಲ’ ಎಂದು ಗುರುವಾರ  ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿ­ಕೊಂಡರು.

ಸಂತೋಷ್‌ ಲಾಡ್‌ ಸ್ವಯಂ ಇಚ್ಛೆ­ಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಮೇಲೆ ಯಾರೂ ಒತ್ತಡ ಹೇರಲಿಲ್ಲ ಎಂದರು.
ಬಿಜೆಪಿ ಮುಖಂಡರ ಟೀಕೆಗಳಿಗೆ  ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಜನರು ನಮಗೆ ಅಧಿಕಾರ ನಡೆಸಲು ಆದೇಶ ನೀಡಿದ್ದಾರೆ. ಅದರಂತೆ ನಾವು ನಡೆದುಕೊಳ್ಳುತ್ತೇವೆ. ನಮ್ಮನ್ನು ಪ್ರಶ್ನಿಸುವ ನೈತಿಕತೆ ಅವರಿಗಿಲ್ಲ. ಭ್ರಷ್ಟ ಆಡಳಿತ ನಡೆಸಿದ ಬಿಜೆಪಿ ಸರ್ಕಾರಕ್ಕೂ ಈಗಿನ ಬೆಳವಣಿಗಳಿಗೆ ಹೋಲಿಕೆ ಮಾಡಬೇಡಿ’ ಎಂದು ಪ್ರತಿಕ್ರಿಯಿಸಿದರು.

‘ಸಂಪುಟ ವಿಸ್ತರಣೆ ಹಾಗೂ ಆಡಳಿತ ನಿರ್ವಹಣೆ ಕುರಿತಂತೆ ನಾನು ಮುಕ್ತ­ವಾಗಿ ನಿರ್ಧಾರಗಳನ್ನು ತೆಗೆದು­ಕೊಳ್ಳುತ್ತಿ­ದ್ದೇನೆ. ನನಗೆ ಯಾರ ಅಡೆತಡೆಯೂ ಇಲ್ಲ. ಯಾರೂ ನನ್ನ ನಿರ್ಧಾರಗಳಲ್ಲಿ ಮಧ್ಯ ಪ್ರವೇಶಿಸುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಅವರ ಮೇಲೂ ಆರೋಪ
ಬಿಜೆಪಿ ಮುಖಂಡರಾದ ಆರ್‌.­ಅಶೋಕ್‌ ಹಾಗೂ ಕೆ.ಎಸ್‌. ಈಶ್ವ­ರಪ್ಪ ಅವರ ವಿರುದ್ಧವೂ ಆರೋಪ­ಗಳಿವೆ. ಈಶ್ವರಪ್ಪ ಮನೆ ಮೇಲೆ ಲೋಕಾ­ಯುಕ್ತ ದಾಳಿ ನಡೆದಾಗ ಹಣ ಎಣಿಸುವ ಯಂತ್ರವೇ ಸಿಕ್ಕಿತ್ತು. ಇಷ್ಟಾದರೂ ಆಗ ಯಾರೂ ರಾಜೀ­ನಾಮೆ ಕೊಟ್ಟಿರಲಿಲ್ಲ.
ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.