ADVERTISEMENT

ಈರುಳ್ಳಿ ಬೆಲೆ ಕುಸಿತ: ರಸ್ತೆಗಿಳಿದ ರೈತರು

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST
ಈರುಳ್ಳಿ ಬೆಲೆ ಕುಸಿತ ವಿರೋಧಿಸಿ ಬೆಳೆಗಾರರು ಮಂಗಳವಾರ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಪ್ರಾಂಗಣದ ಎದುರು ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.
ಈರುಳ್ಳಿ ಬೆಲೆ ಕುಸಿತ ವಿರೋಧಿಸಿ ಬೆಳೆಗಾರರು ಮಂಗಳವಾರ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಪ್ರಾಂಗಣದ ಎದುರು ರಸ್ತೆಗೆ ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.   

ಹುಬ್ಬಳ್ಳಿ: ಈರುಳ್ಳಿ ಬೆಲೆ ಕುಸಿತದಿಂದ ಆಕ್ರೋಶಗೊಂಡ ಬೆಳೆಗಾರರು ಮೂರು ಗಂಟೆ ಕಾಲ ಇಲ್ಲಿನ ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ಇಲ್ಲಿನ ಅಮರಗೋಳದ ಎಪಿಎಂಸಿ ಪ್ರಾಂಗಣದಲ್ಲಿ ನಡೆಯಿತು.

ಕಳೆದ ವಾರ ಕ್ವಿಂಟಲ್‌ಗೆ ಗರಿಷ್ಠ ರೂ.3,000ದವರೆಗೆ ಇದ್ದ ಈರುಳ್ಳಿ ಬೆಲೆ, ಮಂಗಳವಾರ ಕ್ವಿಂಟಲ್‌ಗೆ ಗರಿಷ್ಠ ರೂ. 2,200ಕ್ಕೆ ಕುಸಿದಿತ್ತು. ಇದು ಬೆಳೆಗಾರರನ್ನು ಕೆರಳಿಸಿತು.  ನವಲಗುಂದ ಹಾಗೂ ನರಗುಂದ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ಫಸಲು ತಂದಿದ್ದ ಬೆಳೆಗಾರರು ಮಧ್ಯಾಹ್ನ 2 ಗಂಟೆಯ ವೇಳೆ ದಿಢೀರನೆ ಪ್ರತಿಭಟನೆಗೆ ಮುಂದಾದರು. ಚಿಲ್ಲರೆ ಮಾರುಕಟ್ಟೆ­ಯಲ್ಲಿ ಈಗಲೂ ಈರುಳ್ಳಿ ಕಿಲೋಗೆ ರೂ. 35ರಿಂದ 40 ಇದ್ದು, ಕ್ವಿಂಟಲ್‌ಗೆ ಕನಿಷ್ಠ ರೂ. 2,000 ಹಾಗೂ ಗರಿಷ್ಠ ರೂ. 3,000 ನೀಡುವಂತೆ ಆಗ್ರಹಿಸಿ ರಸ್ತೆಗೆ ಇಳಿದರು.

ಎಪಿಎಂಸಿ ಪ್ರಾಂಗಣದಲ್ಲಿ ಖರೀದಿದಾರರು ಲೋಡ್‌ ಮಾಡಿ ನಿಲ್ಲಿಸಿದ್ದ ಲಾರಿಗಳನ್ನು ತಡೆದು ಅವುಗಳಲ್ಲಿನ ಈರುಳ್ಳಿ ಪ್ಯಾಕೆಟ್‌ಗಳನ್ನು ಕೆಳಗೆ ಸುರಿದ ಪ್ರತಿಭಟನಾಕಾರರು,  ರಸ್ತೆಗೆ ಕಲ್ಲುಗಳನ್ನು ಅಡ್ಡ ಇಟ್ಟು, ಬೆಂಕಿ ಹಾಕಿ ಪ್ರತಿಭಟನೆ ಆರಂಭಿಸಿದರು. ಇದರಿಂದ ರಸ್ತೆಯ ಎರಡೂ ಭಾಗದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸುಭಾಷ್ ಗುಡಿಮನಿ ಹಾಗೂ ಸಿಬ್ಬಂದಿ, ಪ್ರತಿಭಟನಾಕಾರರ ಮನ ವೊಲಿಸಲು ಹರಸಾಹಸಪಟ್ಟರು. ತಹಸೀಲ್ದಾರ್ ಎಚ್.ಡಿ.ನಾಗಾವಿ ಹಾಗೂ ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ ಬಂದು ಮನವಿ ಮಾಡಿದರೂ ರೈತರು ಪ್ರತಿಭಟನೆ ಹಿಂದಕ್ಕೆ ಪಡೆಯಲಿಲ್ಲ.

ರಸ್ತೆಯ ಮಧ್ಯೆಯೇ ಕುಳಿತ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲಿ ಎಂದು ಆಗ್ರಹಿಸಿದರು. ಸಂಜೆ 5.30ರ ವೇಳೆಗೆ ಪ್ರತಿಭಟನಾಕಾರರ ಮನ ವೊಲಿಸುವಲ್ಲಿ ಪೊಲೀಸರು ಯಶಸ್ವಿಯಾದರು. ನಂತರ ತಹಸೀಲ್ದಾರ್ ನೇತೃತ್ವದಲ್ಲಿ ಈರುಳ್ಳಿ ಬೆಳೆಗಾರರು ಹಾಗೂ ವರ್ತಕರ ನಡುವೆ ಸಂಧಾನ ಸಭೆ ನಡೆಯಿತು. ಬೆಳೆಗಾರರಿಗೆ ಅನ್ಯಾಯವಾಗದಂತೆ ವರ್ತಕರ ಮನವೊಲಿಸಿ, ಸೂಕ್ತ ಬೆಲೆ ಕೊಡಿಸುವು­ದಾಗಿ ತಹಸೀಲ್ದಾರ್ ನೀಡಿದ ಭರ­ವಸೆಯ ಹಿನ್ನೆಲೆ ಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.