ADVERTISEMENT

ಈಶಾನ್ಯ ಪದವೀಧರ ಕ್ಷೇತ್ರ ' ಕೈ ' ವಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 5:13 IST
Last Updated 13 ಜೂನ್ 2018, 5:13 IST
ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ
ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ   

ಕಲಬುರ್ಗಿ: ತೀವ್ರ ಕುತೂಹಲ ಕೆರಳಿಸಿದ್ದ ಈಶಾನ್ಯ ಪದವೀಧರ ಕ್ಷೇತ್ರದ ಮತ ಎಣಿಕೆ ಕಾರ್ಯಬುಧವಾರ ಬೆಳಿಗ್ಗೆ 4ಗಂಟೆಗೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಚ್ಚರಿಯ ಗೆಲುವು ಸಾಧಿಸಿದೆ.

ಬೀದರ್ ಜಿಲ್ಲೆ ಹುಮನಾಬಾದ್‌ನ  ಕಾಂಗ್ರೆಸ್ ಅಭ್ಯರ್ಥಿ, ವೃತ್ತಿಯಿಂದ ವೈದ್ಯರಾಗಿರುವ ಡಾ. ಚಂದ್ರಶೇಖರ ಪಾಟೀಲ ಅವರು 321 ಮತಗಳ ಅಂತರದಿಂದ, ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ್ ಪರ ಗೆಲುವಿನ ನಗೆ ಬೀರಿದರು.

ಮಂಗಳವಾರ ಬೆಳಿಗ್ಗೆ 8ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ನಡೆಯಿತು. ಆ ಬಳಿಕ ಮತಪೆಟ್ಟಿಗೆಯಲ್ಲಿನ ಮತಕ್ಕೂ, ಮತಗಟ್ಟೆ ಅಧಿಕಾರಿ ನಮೂದಿಸಿದ್ದ ಮತಗಳಿಗೂ ಕೆಲವೆಡೆ ವ್ಯತ್ಯಾಸ ಕಂಡು ಬಂದಿತ್ತು. ಈ ವಿಷಯ ಮತ ಎಣಿಕೆ ಸಿಬ್ಬಂದಿ ಮತ್ತು ಏಜೆಂಟರ ಮಧ್ಯೆ ವಾಗ್ವಾದಕ್ಕೂ ಕಾರಣವಾಯಿತು.

ADVERTISEMENT

ಸ್ಥಳದಲ್ಲಿದ್ದ ಚುನಾವಣಾ ಅಧಿಕಾರಿ ಪಂಕಜ ಕುಮಾರ್ ಪಾಂಡೆ ಅವರು, 'ಮತಪೆಟ್ಟಿಗೆಯಲ್ಲಿನ ಮತಗಳನ್ನು ಮಾತ್ರ ಎಣಿಕೆಗೆ ಪರಿಗಣಿಸಲಾಗುವುದು' ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆದರು. ಹೀಗಾಗಿ ಮತ ಎಣಿಕೆ ತೀರಾ ವಿಳಂಬವಾಗಿ ಅಂದರೆ ಮಧ್ಯಾಹ್ನ 3ಗಂಟೆಗೆ ಆರಂಭವಾಯಿತು.

ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆಯ ಆರಂಭಿಕ ಎರಡು ಸುತ್ತುಗಳಲ್ಲಿ ಜೆಡಿಎಸ್ ಅಭ್ಯರ್ಥಿ ಎನ್.ಪ್ರತಾಪ್ ರೆಡ್ಡಿ ಮುನ್ನಡೆ ಸಾಧಿಸಿದ್ದರು. ಆದರೆ ಮೂರು ಮತ್ತು ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ್ 650 ಮತಗಳ ಮುನ್ನಡೆ ಸಾಧಿಸಿದರು. ನಿಗದಿ ಪಡಿಸಿದ ಕೋಟಾ 24,414 ಮತಗಳನ್ನು ಯಾವೊಬ್ಬ ಅಭ್ಯರ್ಥಿಯೂ ಪಡೆಯಲಿಲ್ಲ. ಹೀಗಾಗಿ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯನ್ನು ಆರಂಭಿಸಲಾಯಿತು. ಮಧ್ಯ ರಾತ್ರಿ 12.20 ಗಂಟೆಗೆ ಆರಂಭವಾದ ಎಣಿಕೆ ಎಲಿಮಿನೇಷನ್ ಸುತ್ತಿನೊಂದಿಗೆ ಬೆಳಿಗ್ಗೆ 4 ಗಂಟೆಗೆ ಮುಕ್ತಾಯವಾಯಿತು.

ಡಾ.ಚಂದ್ರಶೇಖರ ಪಾಟೀಲ ಅವರು 18,768 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ಕೆ.ಬಿ. ಶ್ರೀನಿವಾಸ್ 18,447 ಮತಗಳನ್ನು ಪಡೆದು ಎರಡನೇ ಸ್ಥಾನ ಹಾಗೂ
ಜೆಡಿಎಸ್‌ನ ಪ್ರತಾಪ್ ರೆಡ್ಡಿ  13,311 ಮತಗಳನ್ನು ಪಡೆದು ತೃತೀಯ ಮೂರನೇ ಸ್ಥಾನ ಪಡೆದರು. ಮೊದಲ‌ ಸುತ್ತಿನಿಂದ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌‌ಗೆ ಎರಡನೇ ಪ್ರಾಶಸ್ತ್ಯದ ಮತಗಳು ಗೆಲುವಿನ ದಡ ಸೇರಿಸಿದವು.

ಬಿಜೆಪಿ ಭದ್ರ ಕೋಟೆ
ಈಶಾನ್ಯ ಪದವೀಧರ ಕ್ಷೇತ್ರ ಬಿಜೆಪಿ ಭದ್ರ ಕೋಟೆಯಾಗಿತ್ತು. ಈ ಹಿಂದಿನ ಅನೇಕ ಚುನಾವಣೆಯಲ್ಲಿ ಬಿಜೆಪಿಗೆ ನಿರಾಯಾಸವಾಗಿ ಗೆಲುವು ಒಲಿದಿತ್ತು. ಆದರೆ ಈಗ ಭದ್ರ ಕೋಟೆ ಕೈ ವಶವಾಗಿದೆ.

ಈ ಬಾರಿ ಬಿಜೆಪಿ, ಹಾಲಿ ಸದಸ್ಯ ಅಮರನಾಥ ಪಾಟೀಲ ಅವರಿಗೆ ಟಿಕೆಟ್ ತಪ್ಪಿಸಿ ಕೆ.ಬಿ.ಶ್ರೀನಿವಾಸ್ ಅವರಿಗೆ ನೀಡಿತ್ತು. ಇದರಿಂದ ಆರಂಭದಲ್ಲಿ ತೀವ್ರ ಮುನಿಸಿಕೊಂಡಿದ್ದ ಅಮರನಾಥ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪಕ್ಷದ ಯಾವ ಸಭೆ-ಸಮಾರಂಭಗಳಲ್ಲೂ ಭಾಗವಹಿಸಿರಲಿಲ್ಲ. ನಂತರದ ದಿನಗಳಲ್ಲಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

ಸಮಸ್ಯೆ ಬಗೆಹರಿಸಲು ಪ್ರಯತ್ನ
ಕಲಬುರ್ಗಿ:
ಶಿಕ್ಷಕರು, ಉಪನ್ಯಾಸಕರು, ವೈದ್ಯರು ಹಾಗೂ ಪದವೀಧರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಈಶಾನ್ಯ ಪದವೀಧರ ಕ್ಷೇತ್ರದ ವಿಜೇತ ಅಭ್ಯರ್ಥಿ, ಕಾಂಗ್ರೆಸ್ ನ ಡಾ. ಚಂದ್ರಶೇಖರ ಪಾಟೀಲ ಹೇಳಿದರು.

ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರುದ್ಯೋಗ ನಿವಾರಣೆಗೆ ಈ ಭಾಗಕ್ಕೆ ಕೈಗಾರಿಕೆಗಳನ್ನು ತರಲು ಯತ್ನಿಸುತ್ತೇನೆ. ನಿರುದ್ಯೋಗಿ ಪದವೀಧರರಿಗೆ ಕೌಶಲ ಅಭಿವೃದ್ಧಿ ತರಬೇತಿ ಕೊಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.