ADVERTISEMENT

ಈ ಬಾರಿ ತೆರಿಗೆ ಹೊರೆ ಭಾಗ್ಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2016, 19:30 IST
Last Updated 18 ಮಾರ್ಚ್ 2016, 19:30 IST
ಮೊಬೈಲ್ ಬೆಳಕಲ್ಲಿ ಬಜೆಟ್... ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಜೆಟ್ ಮಂಡಿಸುವ ವೇಳೆ ವಿದ್ಯುತ್ ಕೈಕೊಟ್ಟಾಗ, ಮಾರ್ಷಲ್‌ ಒಬ್ಬರು ಮೊಬೈಲ್‌ ಟಾರ್ಚ್ ಮೂಲಕ ಬಜೆಟ್‌ ಪುಸ್ತಕಕ್ಕೆ ಬೆಳಕು ಹಾಯಿಸಿದರು     	ಪ್ರಜಾವಾಣಿ ಚಿತ್ರ/ಎಂ.ಎಸ್‌. ಮಂಜುನಾಥ್‌
ಮೊಬೈಲ್ ಬೆಳಕಲ್ಲಿ ಬಜೆಟ್... ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಬಜೆಟ್ ಮಂಡಿಸುವ ವೇಳೆ ವಿದ್ಯುತ್ ಕೈಕೊಟ್ಟಾಗ, ಮಾರ್ಷಲ್‌ ಒಬ್ಬರು ಮೊಬೈಲ್‌ ಟಾರ್ಚ್ ಮೂಲಕ ಬಜೆಟ್‌ ಪುಸ್ತಕಕ್ಕೆ ಬೆಳಕು ಹಾಯಿಸಿದರು ಪ್ರಜಾವಾಣಿ ಚಿತ್ರ/ಎಂ.ಎಸ್‌. ಮಂಜುನಾಥ್‌   

ಬೆಂಗಳೂರು: ‘ಭಾಗ್ಯ’ಗಳ ಸರಮಾಲೆಯನ್ನೇ ನೀಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯದ ಜನರಿಗೆ ತೆರಿಗೆ ಹೊರೆಯ ಭಾಗ್ಯವನ್ನು  ಕರುಣಿಸಿದ್ದಾರೆ. ಮೂರು ವರ್ಷಗಳಿಂದ ರಾಜ್ಯ ಬಜೆಟ್‌ ಅನ್ನು ‘ಅಹಿಂದ ಕಲ್ಯಾಣ’ ಹಳಿ ಮೇಲೆಯೇ ಓಡಿಸುತ್ತಿದ್ದ  ಅವರು,  ಶುಕ್ರವಾರ ಮಂಡಿಸಿದ 2016–17ನೇ ಸಾಲಿನ ಬಜೆಟ್‌ನಲ್ಲಿ   ‘ಅಭಿವೃದ್ಧಿ’ಯ  ಹಳಿ ಮೇಲೆ ಓಡಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ತೆರಿಗೆ ಭಾರ ಹೊರಿಸಿದ್ದಾರೆ.

ಮೌಲ್ಯವರ್ಧಿತ ತೆರಿಗೆಗೆ (ವ್ಯಾಟ್‌) ಕೈಹಾಕದಿದ್ದರೂ ಪೆಟ್ರೋಲ್‌, ಡೀಸೆಲ್‌, ಮದ್ಯ, ಬಿಯರ್‌, ತಂಪು ಪಾನೀಯ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸುವುದರ ಮೂಲಕ ₹7,658 ಕೋಟಿ ಹೆಚ್ಚುವರಿ ವರಮಾನ ನಿರೀಕ್ಷೆ ಮಾಡಿದ್ದಾರೆ. ಇದರಲ್ಲಿ ವಿವಿಧ ರೀತಿಯ ಖಾಸಗಿ ಪ್ರಯಾಣಿಕ ವಾಹನಗಳ ಸೀಟು ತೆರಿಗೆ ಹೆಚ್ಚಳದಿಂದ ಬರುವ ಆದಾಯವೂ ಸೇರಿದೆ.

ಕಳೆದ ವರ್ಷ ₹ 600 ಕೋಟಿ ಹೆಚ್ಚುವರಿ ತೆರಿಗೆ ವಿಧಿಸಲಾಗಿತ್ತು.  ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಅವುಗಳ ಮೇಲಿನ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಿದ್ದು, ಅವು ಏಪ್ರಿಲ್‌ 1ರಿಂದ ಅಗ್ಗವಾಗಲಿವೆ.

ಕಾಫಿ, ಟೀ, ರಬ್ಬರ್‌ ಮತ್ತು ಇತರೆ ತೋಟದ ಬೆಳೆಗಳ ಮೇಲಿನ ಕೃಷಿ ವರಮಾನ ತೆರಿಗೆ ರದ್ದಾಗಲಿದೆ.
ಹೊಸ ಭಾಗ್ಯ ಇಲ್ಲ:  ಕೃಷಿ, ನೀರಾವರಿ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿರುವ ಮುಖ್ಯಮಂತ್ರಿಯವರು, ಈ ಹಿಂದಿನ ಎಲ್ಲ ‘ಭಾಗ್ಯ’ ಯೋಜನೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.






ಆದರೆ ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆಗಳು ಇಲ್ಲದ ಕಾರಣ ಈ ಸಲದ ಬಜೆಟ್‌ನಲ್ಲಿ ಯಾವುದೇ ಹೊಸ ‘ಭಾಗ್ಯ’ಗಳನ್ನು ಘೋಷಿಸಿಲ್ಲ.
ಈ ಸಾಲಿನ ಬಜೆಟ್‌ ಗಾತ್ರ ₹1,63,419 ಕೋಟಿಗೆ ಏರಿದೆ. ವಿತ್ತೀಯ ಕೊರತೆ ₹25,657 ಕೋಟಿಯಾಗಲಿದೆ. ಸರ್ಕಾರ ₹31,123 ಕೋಟಿ ಸಾಲ ಎತ್ತಲಿದೆ.

ರೈತರ ಕಲ್ಯಾಣ ಸಮಿತಿ: ಸರಣಿ ಆತ್ಮಹತ್ಯೆ ಪ್ರಕರಣಗಳಿಂದ ಕಂಗಾಲಾಗಿರುವ ರೈತ ಸಮುದಾಯದಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನವನ್ನೂ ಮುಖ್ಯಮಂತ್ರಿ ಮಾಡಿದ್ದಾರೆ. ರೈತರ ಸಂಕಷ್ಟ ನಿವಾರಣೆಗೆ ತಮ್ಮ (ಮುಖ್ಯಮಂತ್ರಿ) ಅಧ್ಯಕ್ಷತೆಯಲ್ಲಿ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ.

ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ವಿತರಣೆ  ಮುಂದುವರಿಸುವುದಾಗಿ ಹೇಳಿದ್ದಾರೆ. ಕಳೆದ ವರ್ಷ 21 ಲಕ್ಷ ರೈತರಿಗೆ ಇದರ ಉಪಯೋಗ ಆಗಿದ್ದು, ಮುಂದಿನ ವರ್ಷ ಕನಿಷ್ಠ 23 ಲಕ್ಷ ಜನರಿಗೆ ₹11 ಸಾವಿರ ಕೋಟಿ ಸಾಲ ನೀಡುವ ಗುರಿ  ಘೋಷಿಸಿದ್ದಾರೆ.

‘ನವೋದ್ಯಮ’ (ಸ್ಟಾರ್ಟ್‌ಅಪ್‌) ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಅದರ ಉಪಯೋಗ ಕೃಷಿ ಕ್ಷೇತ್ರಕ್ಕೂ ಆಗಬೇಕೆಂದು ‘ಕೃಷಿ ನವೋದ್ಯಮ’ ಸ್ಥಾಪಿಸುವುದಾಗಿಯೂ ಪ್ರಕಟಿಸಿದ್ದಾರೆ. ಇದರಡಿ ಕೈಗಾರಿಕಾ ಅಭಿವೃದ್ಧಿಯ ವಿಶೇಷ ಆರ್ಥಿಕ ವಲಯಗಳ ಮಾದರಿಯಲ್ಲೇ  ರಾಜ್ಯದ ವಿವಿಧೆಡೆ ‘ವಿಶೇಷ ಕೃಷಿ ವಲಯ’ಗಳನ್ನು ಸ್ಥಾಪಿಸಲಾಗುತ್ತದೆ.

ನೀರಾವರಿಗೆ ಪ್ರಸಕ್ತ ಸಾಲಿನಲ್ಲಿ ₹14,477 ಕೋಟಿ ಮೀಸಲಿಟ್ಟಿದ್ದು, ವಿವಿಧ ನಾಲೆಗಳ ಆಧುನೀಕರಣಕ್ಕೆ ₹ 3 ಸಾವಿರ ಕೋಟಿ ಹಂಚಿಕೆ ಮಾಡಿದ್ದಾರೆ. ನೀರಾವರಿಗೆ 5 ವರ್ಷದಲ್ಲಿ ₹50 ಸಾವಿರ ಕೋಟಿ ಖರ್ಚು ಮಾಡುವುದಾಗಿ ಮೊದಲ ವರ್ಷ ಹೇಳಿದ್ದ ಸಿದ್ದರಾಮಯ್ಯ, ಇದುವರೆಗೂ 46,931 ಕೋಟಿ ವೆಚ್ಚ ಮಾಡಿದಂತಾಗುತ್ತದೆ ಎಂದಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಹಣ ನೀರಾವರಿಗೆ ವ್ಯಯ ಮಾಡುವುದು ಅನಿವಾರ್ಯ ಎಂದೂ ವಿವರಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಗೆ ವಿಪರೀತ ಹಣ ವ್ಯಯ ಮಾಡುತ್ತಿದ್ದು, ಅದು ನಿಜಕ್ಕೂ ಸದ್ವಿನಿಯೋಗ ಆಗುತ್ತಿದೆಯೇ ಎಂಬುದನ್ನು ತಿಳಿಯಲು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಮೊರೆ ಹೋಗುವುದಾಗಿ ವಿವರಿಸಿದ್ದಾರೆ.

ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸುವ ಸಲುವಾಗಿ  ಅಂಗನವಾಡಿ ಮಕ್ಕಳಿಗೆ ಕೆನೆರಹಿತ ಹಾಲಿನ ಬದಲಿಗೆ ಕೆನೆಸಹಿತ ಹಾಲು ನೀಡುವುದಾಗಿ ಪ್ರಕಟಿಸಿದ್ದಾರೆ.

ಅಹಿಂದ ವರ್ಗಗಳ ಕಲ್ಯಾಣಕ್ಕೆ ಈ ಹಿಂದೆ ಘೋಷಿಸಿದ್ದ ಕಾರ್ಯಕ್ರಮಗಳನ್ನು ಮುಂದುವರಿಸಲಾಗಿದೆ. ಅಗತ್ಯ ಇರುವ ಕಡೆ ಹಾಸ್ಟೆಲ್‌ ನಿರ್ಮಾಣಕ್ಕೂ ಒತ್ತು ಕೊಟ್ಟಿದ್ದಾರೆ. ಈ ವರ್ಗಗಳ ಮಕ್ಕಳು ಇರುವ ಹಾಸ್ಟೆಲ್‌ಗಳಲ್ಲಿನ ಭೋಜನಾ ವೆಚ್ಚವನ್ನೂ ಹೆಚ್ಚಿಸಿದ್ದಾರೆ.

ಮಹಿಳಾ ಸಬಲೀಕರಣ ನೀತಿ ರೂಪಿಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳ ಮಾದರಿಯಲ್ಲೇ ಜಿಲ್ಲಾ ಮಹಿಳಾ ಕಲ್ಯಾಣ ಸಮಿತಿಗಳನ್ನು ರಚಿಸಲಾಗುವುದು ಎಂದಿದ್ದಾರೆ.

ಜೆನರ್ಮ್ ಯೋಜನೆ ಜಾರಿ ನಂತರ ನಗರ ಪ್ರದೇಶಗಳಲ್ಲಿ ಹೆಚ್ಚಿನ ಅಭಿವೃದ್ಧಿ ಆಗಿದೆ. ಆದರೆ, ಇತ್ತೀಚೆಗೆ ಈ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಕಡಿತ ಮಾಡಿದ್ದು, ಅದನ್ನು ರಾಜ್ಯದ ಅನುದಾನದಿಂದಲೇ ಮುಂದುವರಿಸುವುದಾಗಿ ಹೇಳಿದ್ದಾರೆ. ಮೂರು ವರ್ಷಗಳಲ್ಲಿ ₹972 ಕೋಟಿ ಖರ್ಚು ಮಾಡುವ ಭರವಸೆ ನೀಡಿದ್ದಾರೆ.

ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಪಾಠ ಕಲಿತಂತಿರುವ ಮುಖ್ಯಮಂತ್ರಿಯವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಯೋಜನೆ ಜಾರಿ ಮಾಡುವುದಾಗಿ ಹೇಳಿದ್ದು, ₹75 ಕೋಟಿ ಮೀಸಲಿಟ್ಟಿದ್ದಾರೆ.

ನೇಕಾರರ ಸಾಲ ಮನ್ನಾ: ನೇಕಾರರಿಗೆ ಮನೆ ಮತ್ತು ಕೆಲಸದ ಶೆಡ್‌ಗಳ ನಿರ್ಮಾಣಕ್ಕೆ ವಿವಿಧ ಯೋಜನೆಗಳಡಿ ಕೊಟ್ಟಿದ್ದ ₹17 ಕೋಟಿ ಸಾಲ ಮತ್ತು ಅದರ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಹಣೆಪಟ್ಟಿ ಅಳಿಸುವ ಯತ್ನ: ತಮ್ಮ ವಿರುದ್ಧ ಇರುವ ‘ಐ ಟಿ ವಿರೋಧಿ’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ.
ಐ ಟಿ (ಮಾಹಿತಿ ತಂತ್ರಜ್ಞಾನ), ಎಲೆಕ್ಟ್ರಾನಿಕ್ಸ್‌್ ಮತ್ತು ಅನಿಮೇಷನ್‌ ಇತ್ಯಾದಿ ವಲಯಗಳಲ್ಲಿ ಶ್ರೇಷ್ಠತಾ ಕೇಂದ್ರಗಳು ಮತ್ತು ಫಿನಿಷಿಂಗ್ ಶಾಲೆಗಳನ್ನು ವಿಶ್ವವಿದ್ಯಾಲಯ ಮತ್ತಿತರ ಶೈಕ್ಷಣಿಕ ಸಂಸ್ಥೆಗಳ ಜತೆ ಸೇರಿ ಸ್ಥಾಪಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಇದೇ ರೀತಿ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದ್ದು, ಈ ಸಲುವಾಗಿ ₹222 ಕೋಟಿ ಮೀಸಲಿಟ್ಟಿದ್ದಾರೆ. 

ಗೌರವ ಧನ ಹೆಚ್ಚಳ: ಗ್ರಾಮ ಸಹಾಯಕರ ಮಾಸಿಕ ಗೌರವ ಧನವನ್ನು ₹7 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಲಾಗಿದೆ.

ADVERTISEMENT






ಕೈ ಕೊಟ್ಟ ಕರೆಂಟ್‌!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಆಯವ್ಯಯ   ಮಂಡಿಸುತ್ತಿರುವಾಗ  ಸದನದಲ್ಲಿ ಎರಡು ಬಾರಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತು.

ಬಜೆಟ್‌ ಮಂಡಿಸಲು ಆರಂಭಿಸಿದ ಸ್ವಲ್ಪ ಹೊತ್ತಿನಲ್ಲೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತಾದರೂ, ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು. ಮಧ್ಯಾಹ್ನ 2.03 ನಿಮಿಷಕ್ಕೆ ಮತ್ತೊಮ್ಮೆ  ಕೈಕೊಟ್ಟ ವಿದ್ಯುತ್‌ ಸುಮಾರು ಮೂರು ನಿಮಿಷವಾದರೂ ಬರಲಿಲ್ಲ.  ಮಾರ್ಷಲ್‌ ಒಬ್ಬರು ಮೊಬೈಲ್‌ ಟಾರ್ಚ್‌ ಬೆಳಕಿನ ಮೂಲಕ ಮುಖ್ಯಮಂತ್ರಿಗೆ ನೆರವಾಗಲು ಯತ್ನಿಸಿದರು. ವಿದ್ಯುತ್‌ ಸ್ಥಗಿತದಿಂದಾಗಿ ಮೈಕ್‌ ಕೂಡಾ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಹಾಗಾಗಿ ಮುಖ್ಯಮಂತ್ರಿ ವಿಧಿ ಇಲ್ಲದೆ ಆಯವ್ಯಯ ಪತ್ರ ಓದುವುದನ್ನು ನಿಲ್ಲಿಸಬೇಕಾಯಿತು.   ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ವಿರೋಧ ಪಕ್ಷದ ಸದಸ್ಯರು ಸರ್ಕಾರವನ್ನು ಛೇಡಿಸಿದರು.

ಮೂರೂಕಾಲು ತಾಸು ಭಾಷಣ
ಸಿದ್ದರಾಮಯ್ಯನವರು 162 ಪುಟಗಳ ಬಜೆಟ್‌ ಓದಲು 3 ತಾಸು 15 ನಿಮಿಷ ತೆಗೆದುಕೊಂಡರು. ಮಧ್ಯದಲ್ಲಿ ಒಂದೇ ಒಂದು ಗುಟುಕು ನೀರು ಕೂಡ ಕುಡಿಯಲಿಲ್ಲ.

ಕೌಶಲ್ಯಾಭಿವೃದ್ಧಿಗೆ ಪ್ರತ್ಯೇಕ ಇಲಾಖೆ
ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಎಲ್ಲ ರೀತಿಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಇಲಾಖೆಯಡಿ ತರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಕಾರಣಕ್ಕೆ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯನ್ನು ಸ್ಥಾಪಿಸಲಾಗುತ್ತದೆ. ಇದು ಮುಖ್ಯಮಂತ್ರಿಗಳ ನೇರ ನಿಯಂತ್ರಣದಲ್ಲಿ ಇರುತ್ತದೆ. ಈ ಉದ್ದೇಶಕ್ಕಾಗಿ ₹500 ಕೋಟಿ ಮೀಸಲಿಡಲಾಗಿದೆ.

ಕೈಗಾರಿಕೆಗಳ ಸಲುವಾಗಿ ಭೂಮಿ ಕಳೆದುಕೊಳ್ಳುವ ರೈತರ ಮಕ್ಕಳು ಹಾಗೂ ಸ್ಥಳೀಯ ಯುವಕರಲ್ಲಿ ಉದ್ಯೋಗ ಕೌಶಲ್ಯ ಹೆಚ್ಚಿಸುವ ಬಗ್ಗೆಯೂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

ಅಗ್ಗ
* ಜೋಳ ಮತ್ತು ರಾಗಿ ರೊಟ್ಟಿ

* ಶೇಂಗಾ, ಗುರೆಳ್ಳು, ಅಗಸಿ, ಪುಟಾಣಿ,ಕೊಬ್ಬರಿ, ಕಡಲೆಬೇಳೆ, ಬೆಳ್ಳುಳ್ಳಿಗಳಿಂದ ತಯಾರಿಸಿದ ಚಟ್ನಿ ಪುಡಿ
* ವಯಸ್ಕರ ಡೈಪರ್‌ಗಳು
* ಕಾಗದದಿಂದ ತಯಾರಿಸಿದ ಕಚೇರಿ ಕಡತಗಳು
* ಅಲ್ಯುಮಿನಿಯಂ ಗೃಹೋಪಯೋಗಿ ಪಾತ್ರೆಗಳು
* ಕೈಯಿಂದ ತಯಾರಿಸಿದ ಕಾಗದದ ಉತ್ಪನ್ನಗಳು
* ಕೈ ಚಾಲಿತ ರಬ್ಬರ್‌ಶೀಟ್‌ ತಯಾರಿಕಾ ಮಷೀನ್‌
* ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಬಳಸುವ ಗೌನ್‌, ಕೋಟ್‌, ಮುಖಗವಸು, ಟೊಪ್ಪಿಗೆ
* ಬಹುಮಾಧ್ಯಮ ಸ್ಪೀಕರ್‌ಗಳು
* ನಿಕ್ಕಲ್‌ ಮತ್ತು ಟೈಟಾನಿಯಂ ವಸ್ತುಗಳು

ತುಟ್ಟಿ
ಮದ್ಯರಹಿತ ತಂಪು / ಲಘು ಪಾನೀಯಗಳು

ಹೊಸ ಯೋಜನೆಗಳು
ಇಂದಿರಾ ಸುರಕ್ಷಾ
ಆರೈಕೆ
ಆಪದ್ಬಾಂಧವ
ಅಭಯ
ಸ್ಪರ್ಧಾ ಚೇತನ
ಸ್ತ್ರೀ ಶಕ್ತಿ ಕೌಶಲ್ಯ

ಸಾಮಾಜಿಕ ನ್ಯಾಯ
ಪರಿಶಿಷ್ಟರ ಯೋಜನೆಗೆ ₹17,706 ಕೋಟಿ ಮೀಸಲು
ಪರಿಶಿಷ್ಟರ 100 ಹಾಸ್ಟೆಲ್‌, 125 ವಸತಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.