ADVERTISEMENT

ಉಡುಪಿ ಕೃಷ್ಣಮಠ ಪರ್ಯಾಯ ; ವಿಶ್ವವಲ್ಲಭ ಶ್ರೀ ಪೀಠಾರೋಹಣ

ರಾಮಕೃಷ್ಣ ಸಿದ್ರಪಾಲ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST
ಉಡುಪಿ ಕೃಷ್ಣಮಠ ಪರ್ಯಾಯ ; ವಿಶ್ವವಲ್ಲಭ ಶ್ರೀ ಪೀಠಾರೋಹಣ
ಉಡುಪಿ ಕೃಷ್ಣಮಠ ಪರ್ಯಾಯ ; ವಿಶ್ವವಲ್ಲಭ ಶ್ರೀ ಪೀಠಾರೋಹಣ   

ಉಡುಪಿ: ಸೋದೆ ವಾದಿರಾಜ ಮಠದ 36ನೇ ಯತಿಗಳಾದ ವಿಶ್ವವಲ್ಲಭ ತೀರ್ಥರು ಬುಧವಾರ ನಸುಕಿನ 6.20ರ ಮಂಗಲ ಮುಹೂರ್ತದಲ್ಲಿ  ಸರ್ವಜ್ಞ ಪೀಠಾರೋಹಣ ಮಾಡಿ ಎರಡು ವರ್ಷಗಳ ಶ್ರೀಕೃಷ್ಣ ದೇವರ ಪೂಜಾ ಕೈಂಕರ್ಯದ ಅಧಿಕೃತ ದೀಕ್ಷೆ ಪಡೆದರು.

ಎರಡು ವರ್ಷದಿಂದ ಪರ್ಯಾಯ ಪೀಠದಲ್ಲಿದ ಶೀರೂರು ಲಕ್ಷ್ಮೀವರ ತೀರ್ಥರು ಮಧ್ವಾಚಾರ್ಯರು ನೀಡಿದ್ದ ಅಕ್ಷಯ ಪಾತ್ರೆ, ಬೆಳ್ಳಿ ಸಟ್ಟುಗ, ಮಠದ ಕೀಲಿಕೈಗಳನ್ನು ವಿಶ್ವವಲ್ಲಭ ತೀರ್ಥರಿಗೆ ಹಸ್ತಾಂತರಿಸಿದರು. ವಿಶ್ವವಲ್ಲಭರು ಪರ್ಯಾಯ ಕೃಷ್ಣಮಠದ 246ನೇ ಯತಿಗಳಾಗಿದ್ದಾರೆ.

ಪುತ್ತಿಗೆ ಮಠದ ಸುಗುಣೇಂದ್ರ ಸ್ವಾಮೀಜಿ, ಪೇಜಾವರ ವಿಶ್ವೇಶತೀರ್ಥರ `ಉಪವಾಸ ಪರ್ವ~ದ ಜಟಾಪಟಿಯಿಂದ ಪರ್ಯಾಯೋತ್ಸವ ಮುನ್ನಾದಿನ ಕವಿದಿದ್ದ ಆತಂಕ-ಗೊಂದಲ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸಂಧಾನದಿಂದ ಬಗೆಹರಿದಿತ್ತು. ಯತಿಗಳಿಬ್ಬರೂ ಉಪವಾಸ ಕೈಬಿಟ್ಟಿದ್ದರಿಂದ ಪರ್ಯಾಯೋತ್ಸವ ಸಾಂಗವಾಗಿ ನೆರವೇರಿತು.

ಸಾಂಪ್ರದಾಯಿಕ ವಿಧಿ:
ಪೀಠಾರೋಹಣ ವಿಧಿ ನಸುಕಿನಲ್ಲಿಯೇ ಆರಂಭವಾದವು. ವಿಶ್ವವಲ್ಲಭರು ಕಾಪು ಸಮೀಪದ ಕುಂಜಾರುಗಿರಿಯ ದಂಡತೀರ್ಥಕ್ಕೆ ತೆರಳಿ ಸ್ನಾನ ಪೂರೈಸಿ ನಸುಕಿನ 4 ಗಂಟೆಗೆ ಉಡುಪಿ ಜೋಡುಕಟ್ಟೆಗೆ ಬಂದರು. ಪೇಜಾವರ ಮಠದ ವಿಶ್ವೇಶತೀರ್ಥರು, ಕಿರಿಯ ಯತಿ ವಿಶ್ವಪ್ರಸನ್ನರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ವಿಶ್ವಪ್ರಿಯ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಬರಮಾಡಿಕೊಂಡರು.

ತಲೆಗೆ ಪೇಟ, ವಿಶೇಷ ಪೋಷಾಕಿನಲ್ಲಿದ್ದ ವಿಶ್ವವಲ್ಲಭರು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಹೂವುಗಳಿಂದ ಅಲಂಕೃತ ವಿಶೇಷ `ಮೇನೆ~ಯಲ್ಲಿ ಪಟ್ಟದ ದೇವರನ್ನಿಟ್ಟುಕೊಂಡು, ಅಷ್ಟಮಠದ ಯತಿಗಳೊಂದಿಗೆ ರಥಬೀದಿಗೆ ಬಂದು ಕನಕನಕಿಂಡಿಯಲ್ಲಿ ಕೃಷ್ಣದರ್ಶನ ಮಾಡಿದರು. ಅದಮಾರು ಮಠದ ಸ್ವಾಮೀಜಿ ಪಾಲ್ಗೊಂಡಿರಲಿಲ್ಲ. ಆಹ್ವಾನವಿರದ್ದಕ್ಕೆ ಪುತ್ತಿಗೆ ಯತಿಗಳೂ ಬಂದಿರಲಿಲ್ಲ. ಜೋಡುಕಟ್ಟೆ ಸಮೀಪ ಮುಖ್ಯಮಂತ್ರಿ ಸದಾನಂದ ಗೌಡ, ಸಚಿವ ರಾಮದಾಸ್ ಸೇರಿದಂತೆ ಹಲವು ಗಣ್ಯರು ನಸುಕಿನಲ್ಲಿಯೇ ಮೆರವಣಿಗೆ ವೀಕ್ಷಿಸಿದರು. 
ಕನಕನ ಕಿಂಡಿ-ಕೃಷ್ಣದರ್ಶನ:   ಮೆರವಣಿಗೆ ರಥಬೀದಿಗೆ ಬಂದಾಗ ಮಠಾಧೀಶರೆಲ್ಲ ನಡೆಮುಡಿ ಮೇಲೆ ಸಾಗಿ ಕನಕಗೋಪುರ ಬಳಿ ಬಂದರು. ಸೋದೆ ಶ್ರೀಗಳು ಕನಕನ ಕಿಂಡಿ ಮೂಲಕ ಮೊದಲು ಕೃಷ್ಣನ ದರ್ಶನ ಮಾಡಿ ನವಗ್ರಹ ಪ್ರಾರ್ಥನೆ, ನವಗ್ರಹ ದಾನ ನೀಡಿ, ಚಂದ್ರಮೌಳೀಶ್ವರ, ಅನಂತೇಶ್ವರ ದೇಗುಲಗಳಿಗೆ ಭೇಟಿ ನೀಡಿದರು. ಕೃಷ್ಣ ಮಠದ ಮುಂಭಾ  ಗದಲ್ಲಿ ಲಕ್ಷ್ಮೀವರ ತೀರ್ಥರು ಅವರನ್ನು ಸ್ವಾಗತಿಸಿದರು. ಬಳಿಕ ಪಟ್ಟದ ದೇವರೊಂದಿಗೆ ಮಧ್ವಾಚಾರ್ಯರು ಆಸೀನರಾಗಿದ್ದ ಸರ್ವಜ್ಞ ಪೀಠವಿರುವ ಸಿಂಹಾಸನ ಕೋಣೆ ಪ್ರವೇಶಿಸಿ ಬೆಳಿಗ್ಗೆ 6.20ರಲ್ಲಿ `ಸರ್ವಜ್ಞ ಪೀಠಾರೋಹಣ~ ಮಾಡಿದರು.

ನಂತರ ಬಡಗು ಮಾಳಿಗೆ ತೆರಳಿ ಯತಿಗಳಿಗೆ ಅರಳುಗದ್ದುಗೆಯಲ್ಲಿ ಗಂಧದ್ಯುಪಚಾರ ಪೂರೈಸಿ ಗೌರವ ಸಲ್ಲಿಸಿದರು. ರಾಜಾಂಗಣದಲ್ಲಿ ಮೈಸೂರು ಅರಮನೆ ಮಾದರಿಯ ಆಕರ್ಷಕ ವೇದಿಕೆಯಲ್ಲಿ `ಪರ್ಯಾಯ ದರ್ಬಾರ್~ನಡೆಸಿದರು. ತಿರುಪತಿ ಪ್ರಸಾದ, ತಿರುವಾಂಕೂರಿನ ರಾಜಮನೆತನದ ರಾಜಾ ಮಾರ್ತಾಂಡ ವರ್ಮ ಅವರಿಂದ ಅಭಿನಂದನೆ ಸ್ವೀಕರಿಸಿದರು. ಅಷ್ಟ ಮಠದ ಯತಿಗಳಿಂದ ಅನುಗ್ರಹ ಸಂದೇಶ, ಗಣ್ಯರಿಗೆ ಪರ್ಯಾಯ ಪ್ರಶಸ್ತಿ ಪ್ರದಾನ ನಡೆಯಿತು.

ವಿಶ್ವೇಶತೀರ್ಥರು, ವಿಶ್ವಪ್ರಸನ್ನ ತೀರ್ಥರು, ಪಲಿಮಾರು ಮಠ ವಿದ್ಯಾಧೀಶ ತೀರ್ಥರು, ಕೃಷ್ಣಾಪುರ ಮಠ ವಿದ್ಯಾಸಾಗರ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಶೀರೂರು ಲಕ್ಷ್ಮೀವರ ತೀರ್ಥರು ವೇದಿಕೆಯಲ್ಲಿದ್ದರು.  ಸ್ವಾಗತ ಸಮಿತಿ ಗೌರವಾಧ್ಯಕ್ಷ ಡಿ.ವಿ.ಸದಾನಂದ ಗೌಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್, ಸಚಿವರಾದ ರಾಮದಾಸ್,         ವಿ.ಎಸ್.ಆಚಾರ್ಯ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ನಾಗರಾಜ್ ಶೆಟ್ಟಿ, ಗಣೇಶ್ ಕಾರ್ಣಿಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.