ADVERTISEMENT

ಉತ್ತಮ ಮಳೆ: ತುಂಗಾ ಜಲಾಶಯ ಭರ್ತಿ

ಲಿಂಗನಮಕ್ಕಿ, ಭದ್ರಾ ಒಳಹರಿವು ಏರಿಕೆ, ಕಬಿನಿಗೆ 7 ಅಡಿ ನೀರು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

ಬೆಂಗಳೂರು: ಜಲಾನಯನ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ತುಂಗಾ, ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ಶುಕ್ರವಾರ ಒಳ ಹರಿವು ಹೆಚ್ಚತೊಡಗಿದೆ. ಕರಾವಳಿ ಮತ್ತು ಇತರೆಡೆ ಮಳೆ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯ ತೆಂಕ ಎರ್ಮಾಳು ಬಳಿ ಕಡಲ್ಕೊರೆತ ಆರಂಭವಾಗಿದೆ.

ತುಂಗಾ ಜಲಾಶಯದ ಜಲಾನಯನ ಪ್ರದೇಶವಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸುತ್ತಮುತ್ತ ಚೆನ್ನಾಗಿ ಮಳೆಯಾಗುತ್ತಿದೆ. 588.24 ಅಡಿ ಎತ್ತರದ ತುಂಗಾ ಜಲಾಶಯಕ್ಕೆ 22 ಕ್ರೆಸ್ಟ್‌ಗೇಟ್‌ಗಳಿವೆ. ಶುಕ್ರವಾರ ಬೆಳಿಗ್ಗೆ ನಾಲ್ಕು ಕ್ರೆಸ್ಟ್‌ಗೇಟ್‌ಗಳನ್ನು ತೆರೆದು 4,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿತ್ತು. ಒಳ ಹರಿವು ಹೆಚ್ಚುತ್ತಿರುವುದರಿಂದ ಮಧ್ಯಾಹ್ನದ ಮೇಲೆ 12 ಗೇಟ್‌ಗಳನ್ನು ತೆರೆದು 8,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ತುಂಗಾ ಮೇಲ್ದಂಡೆ ಯೋಜನೆ ಉಪ ವಿಭಾಗದ ಸಹಾಯಕ ಎಂಜಿನಿಯರ್ ಕೆ.ಕರಿಯಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಜಿಲ್ಲೆಯಾದ್ಯಂತ ಗುರುವಾರ ರಾತ್ರಿ ಬಿರುಸಿನ ಮಳೆಯಾಗಿದೆ. ತೀರ್ಥಹಳ್ಳಿ- ಶಿವಮೊಗ್ಗ ರಸ್ತೆಯಲ್ಲಿ ಅಲ್ಲಲ್ಲಿ ಮರಗಳು ಬಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹೊಸನಗರದ `ನಗರ'ದಲ್ಲಿ ಗರಿಷ್ಠ 23.3 ಸೆ.ಮೀ. ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ಒಳ ಹರಿವಿನಲ್ಲಿ ದಿಢೀರ್ ಹೆಚ್ಚಳವಾಗಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಒಳಹರಿವು 8,988 ಕ್ಯೂಸೆಕ್ ಇತ್ತು. ಜಲಾಶಯದ ನೀರಿನ ಮಟ್ಟ 1,755.30 ಅಡಿಗೆ ಏರಿದೆ.

ಹಾಗೆಯೇ, ಭದ್ರಾ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಭದ್ರಾ ಜಲಾಶಯದ ನೀರಿನ ಮಟ್ಟ 116.11 ಅಡಿಗೆ ಏರಿದೆ. ಒಳಹರಿವು 2,896 ಕ್ಯೂಸೆಕ್‌ನಷ್ಟಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಶುಕ್ರವಾರ ಜಿಟಿಜಿಟಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಗ್ರಾಮೀಣ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಇದಲ್ಲದೆ ಉ.ಕ. ಜಿಲ್ಲೆಯ ಜೋಯಿಡಾ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಶಿರಸಿ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಆದರೆ ಕರಾವಳಿಯಲ್ಲಿ ಮಳೆ ಕ್ಷೀಣಿಸಿದೆ. ಕಾರವಾರ ನಗರದ ಬೈತಖೋಲ ಜೈಲ್‌ವಾಡಾದಲ್ಲಿ ಮಾವಿನಮರದ ಟೊಂಗೆಯೊಂದು ವಿದ್ಯುತ್ ತಂತಿಗಳ ಮೇಲೆ ಬಿದ್ದು ಎರಡು ವಿದ್ಯುತ್ ಕಂಬ ಧರೆಗುರುಳಿವೆ.

ಮನೆಗಳಿಗೆ ಹಾನಿ: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮುಂಗಾರಿನ ಆರ್ಭಟ ಶುಕ್ರವಾರ ಬಹುತೇಕ ಕಡಿಮೆಯಾಗಿದೆ. ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ ಜಿಲ್ಲೆಯ ಉಳಿದೆಡೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನಗರದಲ್ಲಿ ಬೆಳಿಗ್ಗಿನಿಂದ ಸಂಜೆಯವರೆಗೂ ಬಿಸಿಲಿನ ವಾತಾವರಣ ಇತ್ತು.

ಆದರೆ, ಹವಾಮಾನ ಇಲಾಖೆಯ ಪ್ರಕಾರ ಮುಂದಿನ 24 ಗಂಟೆಗಳ ಅವಧಿಯಲ್ಲಿ ಮತ್ತೆ ಮಳೆ ಬಿರುಸಾಗಲಿದೆ. ನಗರದ ಹೊರ ಭಾಗದಲ್ಲಿ ಮಳೆ ಪೂರ್ತಿ ಬಿಡುವು ಕೊಟ್ಟಿಲ್ಲ. ಸುಳ್ಯದಲ್ಲಿ ಭಾರಿ ಗಾಳಿ ಬೀಸಿ, ಜಡಿ ಮಳೆ ಸುರಿದಿದ್ದು ಮರಗಳು ಉರುಳಿಬಿದ್ದಿವೆ. ವಿದ್ಯುತ್ ವ್ಯತ್ಯಯವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಶುಕ್ರವಾರ ಉಡುಪಿ ತಾಲ್ಲೂಕಿನಲ್ಲಿ 17.2 ಮಿ.ಮೀ, ಕಾರ್ಕಳ ತಾಲ್ಲೂಕಿನಲ್ಲಿ 38.5 ಮಿ.ಮೀ ಮತ್ತು ಕುಂದಾಪುರದಲ್ಲಿ 35.4 ಮಿ.ಮೀ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಮಲೆನಾಡು ಭಾಗಗಳಲ್ಲಿ ಮಳೆ ಬಿರುಸಾಗಿ ಬಿದ್ದಿದೆ. ಶೃಂಗೇರಿಯಲ್ಲಿ ಉತ್ತಮ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಕೂಡ ಸಾಧಾರಣ ಮಳೆ ಸುರಿಯಿತು. ಮಡಿಕೇರಿ ನಗರಕ್ಕೆ ನೀರು ಪೂರೈಸುವ ಕೂಟು ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಚೆಕ್‌ಡ್ಯಾಂನಿಂದ ನೀರು ಹೊರ ಹರಿಯತೊಡಗಿದೆ.

ನೀರಿನಮಟ್ಟ:  ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನಮಟ್ಟ 2,808.37 ಅಡಿಗಳು. ಕಳೆದ ವರ್ಷ ಇದೇ ದಿನ 2,802.68 ಅಡಿ ನೀರು ಇತ್ತು.
 
ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಜಲಾನಯನ ಪ್ರದೇಶವಾದ ಕೇರಳದ ವೈನಾಡಿನಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು ಜಲಾಶಯಕ್ಕೆ ಒಂದು ವಾರದಲ್ಲಿ 7 ಅಡಿ ನೀರು ಬಂದಿದೆ.

ಮಾನಂದವಾಡಿ, ಸುಲ್ತಾನ್ ಬತೇರಿ, ಕಲ್ಪೆಟ್ಟ ಮತ್ತು ವೈಥಿಲಿಗಳಲ್ಲಿ ಮಳೆ ಬೀಳುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ.  ಶುಕ್ರವಾರ ಮಧ್ಯಾಹ್ನದ ವೇಳೆಗೆ 2,750 ಕ್ಯೂಸೆಕ್ ಒಳಹರಿವು ದಾಖಲಾಗಿದೆ.

ಜಲಾಶಯದ ಗರಿಷ್ಠ ಮಟ್ಟ 2,284 ಅಡಿ. ವಾರದ ಹಿಂದೆ 2,245.5 ಅಡಿ ನೀರಿತ್ತು. ಶುಕ್ರವಾರ  ನೀರಿನಮಟ್ಟ 2,252.5 ಅಡಿಗೆ ಏರಿದೆ. ಕುಡಿಯುವ ನೀರಿಗಾಗಿ 100 ಕ್ಯೂಸೆಕ್ ನೀರನ್ನು ಮಾತ್ರ ನದಿಯ ಮೂಲಕ ಬಿಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.