ADVERTISEMENT

ಉತ್ತರಾಖಂಡ ದುರಂತಕ್ಕೆ ಮಿಡಿದ ಕನ್ನಡ ಹೃದಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಬೆಂಗಳೂರು: ಹಿಮಾಲಯದ ತಪ್ಪಲಿನ ಉತ್ತರಾಖಂಡದಲ್ಲಿ ಈಚೆಗೆ ಸಂಭವಿಸಿದ ಪ್ರವಾಹ ರೂಪದ ಪ್ರಳಯಕ್ಕೆ ಕನ್ನಡ ಸಾಂಸ್ಕೃತಿಕ ವಲಯ ಭಾನುವಾರ ಬಲು ಅಂತಃಕರಣದಿಂದ ಸ್ಪಂದಿಸಿತು.

ಹುಚ್ಚೆದ್ದು ಹರಿದ ನದಿಗಳಲ್ಲಿ ಕೊಚ್ಚಿ ಹೋದವರನ್ನು ಸ್ಮರಿಸಿ ದೀಪ ಬೆಳಗಿದ ಸಭಿಕರು, `ಪ್ರಕೃತಿ ಸಂರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲುತ್ತೇವೆ' ಎಂದು ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರಿಂದ ಪ್ರತಿಜ್ಞಾ ವಿಧಿಯನ್ನೂ ಸ್ವೀಕರಿಸಿದರು.

ಸಾಹಿತಿ ಮತ್ತು ಕಲಾವಿದರ ವೇದಿಕೆ ಉತ್ತರಾಖಂಡದ ದುರಂತದ ಕಹಿನೆನಪಿನಲ್ಲಿ ಏರ್ಪಡಿಸಿದ್ದ `ಪ್ರಕೃತಿ ವರವೋ ಅಥವಾ ಶಾಪವೋ' ಇಡೀ ದಿನದ ಕಾರ್ಯಕ್ರಮದಲ್ಲಿ ಭಾವನೆಗಳು ಹೊನಲಾಗಿ ಹರಿದವು. ಮಕ್ಕಳಿಂದ ವೃದ್ಧರವರೆಗೆ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಸಂತ್ರಸ್ತರಿಗಾಗಿ ಮಿಡಿದರು. ಕಣ್ಣಾಲಿಗಳಲ್ಲಿ ಹನಿಗಳು ತುಂಬಿಕೊಂಡವು. ಸಾಹಿತಿಗಳು, ಕವಿಗಳು, ಕಲಾವಿದರು. ಜನಪದ ಗಾಯಕರು, ನೃತ್ಯಪಟುಗಳು ತಮ್ಮದೇ ಕಲಾ ಪ್ರಕಾರದ ಮೂಲಕ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹ ದುರಂತ ಹಾಗೂ ಅದಕ್ಕಿರುವ ಪರಿಹಾರವನ್ನು ಕಟ್ಟಿಕೊಟ್ಟರು.

`ಪ್ರಕೃತಿ-ಮನುಷ್ಯ ಸಂಬಂಧ ಚೆನ್ನಾಗಿರುವವರೆಗೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ' ಎಂಬ ಅನುಭಾವಿಗಳ ಮಾತನ್ನು ಅಲ್ಲಿ ಮತ್ತೆ, ಮತ್ತೆ ಮೆಲುಕು ಹಾಕಲಾಯಿತು. `ಪ್ರಕೃತಿ ಇಲ್ಲದೆ ಬದುಕೇ ಇಲ್ಲ' ಎಂಬುದನ್ನು ತಜ್ಞರು ಸಾರಿ, ಸಾರಿ ಹೇಳಿದರು.

`ಹಿಮಾಲಯ-ಸುನಾಮಿ' ಹೆಸರಿನಲ್ಲಿ ಬೆಳಿಗ್ಗೆ ಪುಟಾಣಿಗಳು ಚಿತ್ರ ಬಿಡಿಸುವ ಮೂಲಕ ದುರಂತಕ್ಕೆ ತಮ್ಮ ಸ್ಪಂದನೆ ವ್ಯಕ್ತಪಡಿಸಿದರು. ಕನ್ನಡದ ಪ್ರಸಿದ್ಧ ಕವಿಗಳು `ತಾಯೆ ನೀ ಮುನಿಯದಿರು' ಎಂದು ತಮ್ಮ ಕವನದ ಪ್ರತಿ ಸಾಲು, ಸಾಲಿನಲ್ಲೂ ಬೇಡಿಕೆ ಇಟ್ಟರು. ವಿವಿಧ ತಂಡಗಳು ಪ್ರಸ್ತುತಪಡಿಸಿದ ರಂಗಗೀತೆಗಳಲ್ಲೂ ಪ್ರಕೃತಿ ಪ್ರೇಮ ಪುಟಿದೆದ್ದು ನಿಂತಿತು.

ದುರಂತದಿಂದ ನೊಂದಿದ್ದ ಜನಪದ ಕಲಾವಿದರ ತಂಡ `ಎಲ್ಲವನೋ ಶಿವನೆಲ್ಲವನೋ' ಎಂಬ ಪ್ರಶ್ನೆ ಹಾಕಿತು. ಹೆಸರಾಂತ ಕಲಾವಿದರ ದೊಡ್ಡ ಪಡೆ ಸಂಜೆ ಸುಗಮ ಸಂಗೀತದ ಹೊಳೆಯನ್ನೇ ಹರಿಸಿತು. ಪ್ರತಿ ಗೀತೆಯೂ ದೇಶಭಕ್ತಿಗೆ ನೀರೆರೆಯುತ್ತಿತ್ತು. ಪರಿಸರ ಪ್ರೇಮವನ್ನು ಬಡಿದೆಬ್ಬಿಸುತ್ತಿತ್ತು. ವೈ.ಕೆ. ಮುದ್ದುಕೃಷ್ಣ, ಶಿವಮೊಗ್ಗ ಸುಬ್ಬಣ್ಣ, ಶ್ರೀನಿವಾಸ ಉಡುಪ ಸೇರಿದಂತೆ ಹಲವು ಹಿರಿಯ ಕಲಾವಿದರೂ ದನಿಗೂಡಿಸಿದರು.

ದುರಂತದ ಶ್ರುತಿ: ನಾದ ರಂಜನಿ ತಂಡದಿಂದ ನಡೆದ ಸಮೂಹ ವೀಣಾವಾದನ ಕೂಡ ದುರಂತದ ಶೃತಿಯನ್ನೇ ಹೊರಡಿಸಿತು. ಶಾಸ್ತ್ರೀಯ ಸಮೂಹ ನೃತ್ಯವು ರುದ್ರ ತಾಂಡವದಿಂದ ವಿಶ್ವಶಾಂತಿವರೆಗೆ ಹರಡಿತು. ಭರತಾಂಜಲಿ ತಂಡ `ಮಹಾದೇವ ಶಂಭೋ' ಎಂಬ ನೃತ್ಯ ಪ್ರದರ್ಶಿಸಿತು. ಸಂಗೀತಾ ಕಟ್ಟಿ ಕುಲಕರ್ಣಿ `ವಂದೇ ಮಾತರಂ' ಗೀತೆ ಮೂಲಕ ಕಹಿ ನೆನಪು ಕಳೆದು, ಮತ್ತೆ ಸಮೃದ್ಧಿ ದಿನ ಬರಲಿವೆ ಎಂದರು.

ಮಕ್ಕಳ ಚಿತ್ರ, ಕವಿಗಳ ಕವನ, ಚಿಂತಕರ ಉಪನ್ಯಾಸ, ಕಲಾವಿದರ ಹಾಡು, ನೃತ್ಯಗಾರರ ಹೆಜ್ಜೆ ಪ್ರತಿಯೊಂದರಲ್ಲೂ ಹಿಮಾಲಯದಲ್ಲಿ ಸಂಭವಿಸಿದ ಜಲ ಮಾರಣ ಹೋಮಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಇತ್ತು. ಪ್ರಕೃತಿ-ಮನುಷ್ಯರ ನಡುವಿನ ಅನುಸಂಧಾನದ ದಾರಿ ಯಾವುದು ಎಂಬ ಸಂಶಯ ಇಣುಕಿ ನೋಡುತ್ತಿತ್ತು. ಸಂಭಾವನೆ ಪಡೆಯದೆ ಕಲಾವಿದರೆಲ್ಲ  ಪಾಲ್ಗೊಂಡಿದ್ದರು.

ಅರ್ಬುದ ರೋಗ: `ಅರ್ಬುದ ರೋಗದಂತೆ ಮಾನವ ಸಂಕುಲವು ಪ್ರಕೃತಿಯನ್ನು ಇಂಚಿಂಚು ಕಿತ್ತು ತಿನ್ನುತ್ತಿರುವುದರಿಂದ ಇಡೀ ಮನುಕುಲವೇ ಪ್ರಕೃತಿಗೆ ಶಾಪವಾಗಿ ಪರಿಣಮಿಸಿದೆ' ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಚಿರಂಜೀವಿ ಸಿಂಗ್ ಅಭಿಪ್ರಾಯಪಟ್ಟರು. ಪ್ರವಾಹದ ಸತ್ಯ ಮತ್ತು ಮಿಥ್ಯ ಕುರಿತು ಮಾತನಾಡಿದರು.

ಹಿರಿಯ ಪತ್ರಕರ್ತ ನಾಗೇಶ ಹೆಗಡೆ, `ವಿರಾಗಿಗಳ ತಾಣವಾಗಿದ್ದ ಹಿಮಾಲಯಕ್ಕೆ ಪ್ರವಾಸಿಗರು ದಾಂಗುಡಿಯಿಡುತ್ತಿದ್ದಾರೆ. ನಾಲ್ಕೂವರೆ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿದ್ದ ಹಿಮಾಲಯದ ಬೆಟ್ಟಗಳು ವರ್ಷದಿಂದ ವರ್ಷಕ್ಕೆ ಕುಸಿಯುತ್ತವೆ. ಮಿತಿಮೀರಿದ ಪ್ರವಾಸಿ ಮಂದಿರ, ಹೋಟೆಲ್ ಮತ್ತು ಅಣೆಕಟ್ಟುಗಳು ಶಾಪವಾಗಿ ಪರಿಣಮಿಸಿದೆ' ಎಂದರು.

ರಂಗಕರ್ಮಿ ಪ್ರಕಾಶ್ ಬೆಳವಾಡಿ, `ನಗರದ ನೀರಿನಲ್ಲಿ ಶೇ 33 ರಷ್ಟು ಭಾಗವು ಸೋರಿ ಹೋಗುತ್ತಿದೆ. ಉಕ್ಕಿನ ಕೊಳವೆಗಳನ್ನು ಅಳವಡಿಸಿ ನೀರು ಸೋರಿಕೆ ತಡೆಗಟ್ಟಲು ರೂ. 26 ಸಾವಿರ ಕೋಟಿಗಳ ಅಗತ್ಯವಿದೆ. ಎರಡನೇ ಹಂತ `ಮೆಟ್ರೊ' ಸಂಚಾರ ನಡೆಸಲು ಇಷ್ಟೆ ಮೊತ್ತದ ಹಣ ಬೇಕಾಗುತ್ತದೆ. ಆದರೆ ಸರ್ಕಾರಕ್ಕೆ ಕುಡಿಯುವ ನೀರು ಪೂರೈಕೆಗಿಂತ `ಮೆಟ್ರೊ' ಸಂಚಾರವೇ ಮುಖ್ಯವಾಗಿದೆ' ಎಂದರು. ಐ.ಎಂ. ವಿಠಲಮೂರ್ತಿ ಸೇರಿದಂತೆ ಹಲವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.