ADVERTISEMENT

ಉದ್ಯೋಗ: ಐಬಿಎಂ ಇಂಡಿಯಾ ಜತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:35 IST
Last Updated 4 ಮಾರ್ಚ್ 2011, 19:35 IST
ಉದ್ಯೋಗ: ಐಬಿಎಂ ಇಂಡಿಯಾ ಜತೆ ಒಪ್ಪಂದ
ಉದ್ಯೋಗ: ಐಬಿಎಂ ಇಂಡಿಯಾ ಜತೆ ಒಪ್ಪಂದ   

ಬೆಂಗಳೂರು:  ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮವು ಐಬಿಎಂ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಮತ್ತು ಕೌಶಲ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ನಿಗಮದ ಕಾರ್ಯಕಾರಿ ನಿರ್ದೇಶಕ ಡಾ.ವಿಷ್ಣುಕಾಂತ್ ಎಸ್.ಚಟಪಲ್ಲಿ, ‘ವಿಶ್ವದ ಬೃಹತ್ ತಂತ್ರಜ್ಞಾನ ಸಂಸ್ಥೆ ಐಬಿಎಂ, ನಮ್ಮೊಡನೆ ಈ ಈ ಒಪ್ಪಂದಕ್ಕೆ ಬಂದಿರುವುದರಿಂದ ಇನ್ನಷ್ಟು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ’ ಎಂದು ನುಡಿದರು.

ಸಂಸ್ಥೆಯ ಭಾರತೀಯ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಮನೀಷ್ ಗುಪ್ತಾ ಮಾತನಾಡಿ, ‘ನಿಗಮದೊಂದಿಗೆ ಕೆಲಸ ಮಾಡುವುದರಿಂದ ಸಮಾಜದ ಬಹುದೊಡ್ಡ ವರ್ಗಕ್ಕೆ ಲಾಭ ನೀಡುತ್ತದೆ ಮತ್ತು ಹೆಚ್ಚು ಕೌಶಲಯುತ ದೇಶವನ್ನು ನಿರ್ಮಿಸುತ್ತದೆ ಎನ್ನುವುದು ನಮ್ಮ ಆಶಯ’ ಎಂದು ಆಶಿಸಿದರು. ಮೊದಲ ಹಂತದಲ್ಲಿ ಉತ್ಕೃಷ್ಟ ಉದ್ಯೋಗ ಅಭಿವೃದ್ಧಿ ವೇದಿಕೆಯನ್ನು ಮಂಡ್ಯ ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುತ್ತದೆ. ನಂತರ ರಾಜ್ಯದ ಎಂಟು ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಐಬಿಎಂನ ಉದ್ಯೋಗಾಂಕ್ಷಿಗಳು, ಉದ್ಯೋಗದಾತರು ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿನ ತರಬೇತಿ ಮತ್ತು ಪ್ರಮಾಣೀಕರಣ ಸಂಸ್ಥೆಗಳೊಡನೆ, ಸ್ಥಳೀಯ ಮತ್ತು ಪ್ರಾಂತೀಯ ಭಾಷೆಗಳಲ್ಲಿ ಮೊಬೈಲ್ ದೂರವಾಣಿ ಮೂಲಕ ಪರಿಣಾಮಕಾರಿಯಾಗಿ ಸಂಪರ್ಕಿಸಲು ಈ ಒಪ್ಪಂದ ವೇದಿಕೆಯನ್ನು ನಿರ್ಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.