ADVERTISEMENT

ಉದ್ಯೋಗ ಖಾತ್ರಿ ಅಕ್ರಮ: ಎಫ್‌ಐಆರ್ ದಾಖಲಿಸಲು ಓಂಬುಡ್ಸ್‌ಮನ್‌ಗೆ ಅಧಿಕಾರ

ಕೆ.ನರಸಿಂಹ ಮೂರ್ತಿ
Published 10 ಫೆಬ್ರುವರಿ 2011, 19:30 IST
Last Updated 10 ಫೆಬ್ರುವರಿ 2011, 19:30 IST

ಕೋಲಾರ: ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಜನರಿಗೆಂದೇ ರೂಪಿಸಲಾಗಿರುವ ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕ್ರಮ ಎಸಗುವ ಮಂದಿ ಇನ್ನು ಮುಂದೆ ನಿಯಮ ಮೀರುವುದು ಅಪಾಯಕಾರಿಯಾಗಲಿದೆ. ಆರೋಪ ಸಾಬೀತಾದರೆ ಇಲಾಖಾವಾರು ಕ್ರಮವಷ್ಟೆ ಜಾರಿಯಾಗುವುದಿಲ್ಲ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಲಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯ ಸರ್ಕಾರವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ನೇಮಕಗೊಂಡಿರುವ ಓಂಬುಡ್ಸ್‌ಮನ್‌ಗಳೇ ಅಕ್ರಮ ಎಸಗಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದಾರೆ. ಉದ್ಯೋಗಖಾತ್ರಿ ಯೋಜನೆಯ ಸೆಕ್ಷನ್ 27ರ ಅಡಿಯಲ್ಲಿ ಈ ಅಧಿಕಾರವನ್ನು ನೀಡಲಾಗಿದೆ. ಯೋಜನೆ ಜಾರಿಯ ಯಾವುದೇ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಕಂಡು ಬರುವ ಕಾನೂನು ಬಾಹಿರವಾದ ಗಂಭೀರ ಸಂಗತಿಗಳನ್ನು ಕ್ರಿಮಿನಲ್ ಕೋರ್ಟ್‌ನಲ್ಲಿ ತನಿಖೆ ನಡೆಸುವ ಅಗತ್ಯ ಕಂಡುಬಂದರೆ ಆ ಕುರಿತು ಅಭಿಯೋಜನೆಗೆ (ಕ್ರಿಮಿನಲ್ ಪ್ರಾಸಿಕ್ಯೂಷನ್) ಒಳಪಡಿಸಲು ಸಕ್ಷಮ ಪ್ರಾಧಿಕಾರಕ್ಕೆ ಅವರು ಮನವಿ ಸಲ್ಲಿಸಲು ಅವಕಾಶವಿದೆ. ಇದರ ಪರಿಣಾಮವಾಗಿ ಯೋಜನೆಯ ಜಾರಿಯಲ್ಲಿ ಅಕ್ರಮಗಳು ಮತ್ತು ಅಕ್ರಮದ ಕುರಿತ ದೂರುಗಳು ಕಡಿಮೆಯಾಗಬಹುದು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವು.

15 ದಿನದಲ್ಲಿ ಕ್ರಮ: ಸಂಕೀರ್ಣ ವಿಷಯಗಳನ್ನು ಒಳಗೊಂಡ ಪ್ರಕರಣಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ದೂರು, ಅಹವಾಲುಗಳನ್ನು 15 ದಿನದೊಳಗೆ ಇತ್ಯರ್ಥ ಪಡಿಸಬೇಕಾದ ಪ್ರಮುಖ ಜವಾಬ್ದಾರಿಯೂ ಓಂಬುಡ್ಸ್‌ಮನ್‌ಗಳ ಮೇಲಿದೆ. ಇತರೆ ಪ್ರಕರಣಗಳನ್ನು 45 ದಿನದೊಳಗೆ ಅವರು ಇತ್ಯರ್ಥ ಪಡಿಸಬೇಕು.

ADVERTISEMENT

ಸುಳ್ಳು ದೂರಿಗೂ ಕ್ರಮ: ಸುಳ್ಳು ದೂರು ನೀಡುವವರ ವಿರುದ್ಧವೂ ಓಂಬುಡ್ಸ್‌ಮನ್‌ಗಳು ಕ್ರಮ ಕೈಗೊಳ್ಳಬಹುದು. ನೀಡಿದ ದೂರು ಸುಳ್ಳು ಎಂಬುದು ಪತ್ತೆಯಾದರೆ ದೂರನ್ನು ರದ್ದುಗೊಳಿಸಬಹುದು. ಅದರ ಜೊತೆಗೆ, ಯಾರ ವಿರುದ್ಧ ದೂರು ನೀಡಿರುವರೋ ಅವರಿಗೆ ದೂರುದಾರರಿಂದ ದಂಡವನ್ನು ಪಾವತಿಸುವಂತೆ ಸೂಚಿಸುವ ಅಧಿಕಾರವೂ ಓಂಬುಡ್ಸ್‌ಮನ್‌ಗಳಿಗಿದೆ. ಇತ್ಯರ್ಥಪಡಿಸಿದ ದೂರುಗಳ ಕುರಿತು ಓಂಬುಡ್ಸ್‌ಮನ್‌ಗಳು ರಾಜ್ಯ ಉದ್ಯೋಗ ಖಾತರಿ ಮಂಡಳಿಗೆ ಸಲ್ಲಿಸಿದ ವರದಿಯನ್ನು ರಾಜ್ಯ ಅಭಿವೃದ್ಧಿ ನೋಡಲ್ ಕಾರ್ಯದರ್ಶಿಯು ಸಭೆಗಳಲ್ಲಿ ಮಂಡಿಸುತ್ತಾರೆ. ಅಲ್ಲದೆ, ವಾರ್ಷಿಕ ವರದಿಯ ಪ್ರಮುಖ ಅಂಶಗಳನ್ನು ವಿಧಾನಸಭೆಯಲ್ಲೂ ಮಂಡಿಸಲಾಗುತ್ತದೆ. ಓಂಬುಡ್ಸ್‌ಮನ್‌ಗಳ ಮೂಲಕ ರೂಪಿತವಾಗಿರುವ ಈ ವ್ಯವಸ್ಥೆಯು ಖಾತರಿ ಯೋಜನೆಯ ಅಕ್ರಮಗಳಿಗೆ ಹೇಗೆ ಪಾಠ ಕಲಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.