ಬೆಂಗಳೂರು: `ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಸಿ.ಡಿ.ದ್ಯಾವಯ್ಯ ಮನೆಯಲ್ಲಿ ನಾಲ್ಕು ಆನೆ ದಂತಗಳನ್ನು ಸಿಬಿಐ ಇತ್ತೀಚೆಗೆ ವಶಪಡಿಸಿಕೊಂಡಿದೆ. ಕಾನೂನುಬಾಹಿರವಾಗಿ ಆನೆದಂತಗಳನ್ನು ಇರಿಸಿಕೊಂಡಿರುವ ಅಧಿಕಾರಿಯ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ವಾರ್ಡನ್ ಅವರಲ್ಲಿ ವೈಲ್ಡ್ ಲೈಫ್ ಫಸ್ಟ್ ಆಗ್ರಹಿಸಿದೆ.
`ಅರಣ್ಯ ಇಲಾಖೆಯ ಅಧಿಕಾರಿಯೂ ಸೇರಿದಂತೆ ಯಾವುದೇ ವ್ಯಕ್ತಿ ಆನೆ ದಂತ ಮನೆಯಲ್ಲಿ ಇರಿಸಿಕೊಳ್ಳುವ ಮುನ್ನ ಮುಖ್ಯ ವನ್ಯಜೀವಿ ವಾರ್ಡನ್ ಅವರಿಂದ ಪರವಾನಗಿ ಪಡೆದಿರಬೇಕು. ಆದರೆ, ದ್ಯಾವಯ್ಯ ಅವರು ಈ ಪರವಾನಗಿಯನ್ನು ಇಟ್ಟುಕೊಂಡಿರಲಿಲ್ಲ. ಇದು ಕರ್ನಾಟಕ ಅರಣ್ಯ ಕಾಯ್ದೆಯ ಸೆಕ್ಷನ್ 40, 48, 48-ಎ, 52 ರ ಸ್ಪಷ್ಟ ಉಲ್ಲಂಘನೆ' ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
`ಆರೋಪಿ ಸ್ಥಾನದಲ್ಲಿರುವ ಹಿರಿಯ ಅಧಿಕಾರಿಯ ವಿರುದ್ಧ ಪಾರದರ್ಶಕವಾಗಿ ಕಠಿಣ ಕ್ರಮ ಕೈಗೊಂಡು ಅರಣ್ಯ ಇಲಾಖೆ ಮಾದರಿಯಾಗಬೇಕು. ಈ ಮೂಲಕ ಸ್ಪಷ್ಟ ಸಂದೇಶ
ರವಾನಿಸಬೇಕು. ಇದರಿಂದ ವನ್ಯಜೀವಿಗಳ ಸಂರಕ್ಷಣೆಯಲ್ಲಿ ತೊಡಗಿರುವ ಇಲಾಖೆಯ ಪ್ರಾಮಾಣಿಕ ಅಧಿಕಾರಿಗಳ ನೈತಿಕತೆ ಹೆಚ್ಚಲಿದೆ' ಎಂದು ಸಂಘಟನೆ ಪ್ರತಿಪಾದಿಸಿದೆ.
`ರಾಜಕೀಯ ಒತ್ತಡ ಮತ್ತಿತರ ಕಾರಣಗಳಿಂದಾಗಿ ಡಿಸಿಎಫ್ ದರ್ಜೆಯ ಅಧಿಕಾರಿಗೆ ಪ್ರಾಮಾಣಿಕವಾಗಿ ತನಿಖೆ ನಡೆಸಲು ಕಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಯೊಬ್ಬರ ಮೂಲಕ ತನಿಖೆ ನಡೆಸಬೇಕು. ಇದಕ್ಕೆ ವನ್ಯಜೀವಿ ಕಾಯ್ದೆಯ ಸೆಕ್ಷನ್ 5ರ ಸಬ್ ಸೆಕ್ಷನ್ 3ರಲ್ಲಿ ಅವಕಾಶ ಕಲ್ಪಿಸಲಾಗಿದೆ' ಎಂದು ಟ್ರಸ್ಟಿಗಳಾದ ಕೆ.ಎಂ. ಚಿಣ್ಣಪ್ಪ ಹಾಗೂ ಪ್ರವೀಣ್ ಭಾರ್ಗವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.