ADVERTISEMENT

ಉಪಚುನಾವಣೆ ಫಲಿತಾಂಶದಿಂದ ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 7:39 IST
Last Updated 15 ಮಾರ್ಚ್ 2018, 7:39 IST
ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)
ಎಚ್‌.ಡಿ. ದೇವೇಗೌಡ (ಸಂಗ್ರಹ ಚಿತ್ರ)   

ಹಾಸನ: ‘ದೇಶದಲ್ಲಿ ಕಾಂಗ್ರೆಸ್‌ ಶಕ್ತಿ ಕ್ಷೀಣಿಸುತ್ತಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶದ ಉಪಚುನಾವಣೆಗಳೇ ಇದಕ್ಕೆ ಉದಾಹರಣೆ. ಉತ್ತರ ರಾಜ್ಯಗಳ ಉಪಚುನಾವಣೆಗಳಲ್ಲಿ ಬಿಜೆಪಿಗೂ ಸೋಲಾಗಿದೆ. ಇದು ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲಿದ್ದು, ತೃತೀಯ ಶಕ್ತಿಗೆ ಒಂದು ರೂಪ ಸಿಗಬಹುದು’ ಎಂದು ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು.

‘ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಬಿಎಸ್‌ಪಿ ಮುಖ್ಯಸ್ಥೆ ಮಯಾವತಿ ಪ್ರಭಾವಿ ದಲಿತ ಮಹಿಳೆ ಎಂಬ‌‌ ಕಾರಣಕ್ಕೆ ನಾನೇ ಅವರ ಮನೆಗೆ ಭೇಟಿ ನೀಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ದೂರ ಇಟ್ಟೇ ಜನರ ಬಳಿ ಹೋಗುತ್ತೇವೆ’ ಎಂದು ಅವರು ಹೇಳಿದರು.

ಭಿನ್ನಮತೀಯ ಶಾಸಕರ ಅನರ್ಹತೆ ವಿಷಯಕ್ಕೆ ಸಂಬಂಧಿಸಿ ಹೈಕೋರ್ಟ್ ಮೊರೆ ಹೋಗುತ್ತೇವೆ. ಅವರು ಈ ಬಾರಿಯೂ ಕಾಂಗ್ರೆಸ್‌ಗೆ ಮತ ಎಂದಿರುವುದು ಉದ್ಧಟತನ ಎಂದು ದೇವೇಗೌಡ ಹೇಳಿದರು.

ADVERTISEMENT

‘ಪ್ರತ್ಯೇಕ ಲಿಂಗಾಯತ ಧರ್ಮ ‌‌ವಿಚಾರಕ್ಕೆ ನಾವು ಮುಂದಾಗಿಲ್ಲ. ಎಲ್ಲ ಸ್ವಾಮೀಜಿಗಳ ಜತೆಯೂ ಗೌರವದಿಂದ ನಡೆದುಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿದರೆ ತೊಂದರೆ ಆಗಲಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಅನಂತಕುಮಾರ ಅವರಿಗೆ ಮನವರಿಕೆ ಮಾಡಿದ್ದೇವೆ. ಕೋರ್ಟ್ ನಿರ್ದೇಶನ ಪಾಲಿಸುವುದಾಗಿ ಅವರು ಹೇಳಿದ್ದಾರೆ. ತಮಿಳುನಾಡಿಗೆ ಅನ್ಯಾಯ‌‌ ಮಾಡುವ ಉದ್ದೇಶ ಇಲ್ಲ. ನಮಗೆ ನ್ಯಾಯ ಸಿಗಬೇಕು. ರಾಜ್ಯ ಸರ್ಕಾರವು ತೀರ್ಪಿನ ಕುರಿತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ದೇವೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.