ADVERTISEMENT

ಉಪಲೋಕಾಯುಕ್ತಕ್ಕೂ ಕಂಟಕ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST
ಉಪಲೋಕಾಯುಕ್ತಕ್ಕೂ ಕಂಟಕ
ಉಪಲೋಕಾಯುಕ್ತಕ್ಕೂ ಕಂಟಕ   

ಬೆಂಗಳೂರು: ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆಯದೆ ನೇಮಕಗೊಂಡಿರುವ ಎರಡನೇ ಉಪಲೋಕಾಯುಕ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಕೂಡಲೇ ಕೆಳಕ್ಕಿಳಿಸಿ, ಆ ಸ್ಥಾನಕ್ಕೆ ಅರ್ಹ ವ್ಯಕ್ತಿಯನ್ನು ನೇಮಕ ಮಾಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಂಗಳವಾರ ಆದೇಶಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಶಂಕರ ಬಿದರಿ ಅವರನ್ನು ನಿಯಮಬಾಹಿರವಾಗಿ ನೇಮಕ ಮಾಡಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸರ್ಕಾರ, ಈ ಆದೇಶದಿಂದ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದೆ.

ಲೋಕಾಯುಕ್ತ ಹಾಗೂ ಉಪಲೋಕಾಯುಕ್ತ ಸ್ಥಾನಕ್ಕೆ ನೇಮಕ ಮಾಡುವ ಮುನ್ನ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಕಡ್ಡಾಯ ಎಂದು ಕಾನೂನಿನಲ್ಲಿ ಉಲ್ಲೇಖಗೊಂಡಿದ್ದರೂ, ಈ ಕುರಿತು ಸುಪ್ರೀಂಕೋರ್ಟ್ ಕೆಲವು ತೀರ್ಪುಗಳಲ್ಲಿ ಉಲ್ಲೇಖಿಸಿದ್ದರೂ ಅದನ್ನು ಕಡೆಗಣಿಸಿರುವ ಸರ್ಕಾರದ ಕ್ರಮಕ್ಕೆ ನ್ಯಾಯಮೂರ್ತಿಗಳಾದ ಎನ್.ಕುಮಾರ್ ಹಾಗೂ ಎಚ್.ಎಸ್.ಕೆಂಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಈ ಹಿನ್ನೆಲೆಯಲ್ಲಿ ಅವರ ನೇಮಕವು ಕಾನೂನುಬಾಹಿರ, ಅಸಾಂವಿಧಾನಿಕ, ನಿಯಮ ಉಲ್ಲಂಘನೆ ಆಗಿದೆ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಸಂಬಂಧ ಆದೇಶಕ್ಕೆ ಎಂಟು ವಾರಗಳ ಕಾಲ ತಡೆ ನೀಡುವಂತೆ ನ್ಯಾ. ಚಂದ್ರಶೇಖರಯ್ಯನವರ ಪರ ವಕೀಲರು ಮಾಡಿಕೊಂಡ ಮನವಿಯನ್ನೂ ನ್ಯಾಯಮೂರ್ತಿಗಳು ತಿರಸ್ಕರಿಸಿದರು.

 `ಅವರನ್ನು ನೇಮಕ ಮಾಡಿರುವ ಸರ್ಕಾರದ ಆದೇಶವೇ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿದ್ದು, ಕಾನೂನುಬಾಹಿರ ಎಂದ ಮೇಲೆ, ಅವರು ಹುದ್ದೆಯನ್ನು ಏರಿದ ದಿನದಿಂದಲೇ ಅವರು ಉಪಲೋಕಾಯುಕ್ತ ಸ್ಥಾನಕ್ಕೆ ಅರ್ಹರಲ್ಲ ಎಂದು ಅರ್ಥ. ಆದುದರಿಂದ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ~ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಮುಖ್ಯ ನ್ಯಾಯಮೂರ್ತಿಗಳಿಗೇ ಚೆನ್ನಾಗಿ ಗೊತ್ತು: ಸೋಮವಾರ ಮತ್ತು ಮಂಗಳವಾರ ಸೇರಿ ಸುಮಾರು ಆರು ಗಂಟೆ ಕಾಲ ಈ ತೀರ್ಪಿನ ಕುರಿತಾಗಿ ನ್ಯಾಯಮೂರ್ತಿಗಳು ಉಕ್ತಲೇಖನ (ಡಿಕ್ಟೇಷನ್) ನೀಡಿದ್ದಾರೆ.

`ಲೋಕಾಯುಕ್ತ ಅಥವಾ ಉಪಲೋಕಾಯುಕ್ತ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಿಗೆ ಮುಖ್ಯಮಂತ್ರಿಗಳಿಗಿಂತ ಚೆನ್ನಾಗಿ ತಿಳಿದಿರುತ್ತದೆ. ಕಾರಣ ಈ ಹುದ್ದೆಗೆ ನೇಮಕಗೊಳ್ಳುವವರು ಕ್ರಮವಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು. ಮುಖ್ಯ ನ್ಯಾಯಮೂರ್ತಿಯಾದವರೊಬ್ಬರು ನ್ಯಾಯಾಂಗದಲ್ಲಿ ಕನಿಷ್ಠ 20-25 ವರ್ಷ ಹಾಗೂ ನ್ಯಾಯಮೂರ್ತಿಗಳಾಗಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುತ್ತಾರೆ.
 
ಆದುದರಿಂದ ನಿವೃತ್ತ ನ್ಯಾಯಮೂರ್ತಿಯೊಬ್ಬರ ಪೂರ್ವಾಪರ ರಾಜಕೀಯದಲ್ಲಿ ಇರುವ ವ್ಯಕ್ತಿಗಳಿಗಿಂತ ಅವರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೈಕೋರ್ಟ್, ಸುಪ್ರೀಂಕೋರ್ಟ್ ಅಥವಾ ಇನ್ನಾವುದೇ ಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ವೈಯಕ್ತಿಕ ವಿಷಯಗಳು ಉಲ್ಲೇಖಗೊಂಡಿರುತ್ತವೆ. ಆದುದರಿಂದ ಒಬ್ಬ ನ್ಯಾಯಮೂರ್ತಿಯಾಗಿ ಆ ವ್ಯಕ್ತಿ ಎಷ್ಟು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು ಎನ್ನುವುದು ಮುಖ್ಯ ನ್ಯಾಯಮೂರ್ತಿಯೊಬ್ಬರಿಗೆ ಮಾತ್ರ ಗೊತ್ತಿರಲು ಸಾಧ್ಯ. ಆದುದರಿಂದ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಕಡ್ಡಾಯ.

`ಈ ಹಿಂದೆ ಲೋಕಾಯುಕ್ತರನ್ನು ನೇಮಿಸುವಾಗಲೂ ಆಗಿನ ಮುಖ್ಯಮಂತ್ರಿಗಳು ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದಿರಲಿಲ್ಲ. ನಂತರ ತಮ್ಮಿಂದ ತಪ್ಪಾಗಿದೆ ಎಂದು ತಿಳಿದು ಕ್ಷಮೆ ಕೋರಿ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದರು. ಮುಂದೆಂದೂ ಈ ರೀತಿ ಆಗದು ಎಂದು ಅವರು ವಾಗ್ದಾನ ಕೂಡ ಮಾಡಿದ್ದರು. ಅಂದರೆ ಮುಖ್ಯ ನ್ಯಾಯಮೂರ್ತಿಗಳ ಸಲಹೆ ಪಡೆದುಕೊಳ್ಳುವುದು ಕಡ್ಡಾಯ ಎಂದು ಸರ್ಕಾರಕ್ಕೆ ಗೊತ್ತಿದೆ ಎಂದಾಯಿತು. ಆದರೆ ಅಚ್ಚರಿ ಎಂಬಂತೆ ಅದೇ ತಪ್ಪು ಪುನರಾವರ್ತನೆ ಆಗಿದೆ.

`ಮುಖ್ಯ ನ್ಯಾಯಮೂರ್ತಿಗಳು ನ್ಯಾ. ರಂಗವಿಠಲಾಚಾರ್ ಅವರ ಹೆಸರನ್ನು ಉಪಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದ್ದರು. ಆ ಹೆಸರನ್ನು ಉಳಿದ ಶಿಫಾರಸುದಾರರ ಮುಂದೆ ಮುಖ್ಯಮಂತ್ರಿಗಳು ಕಳುಹಿಸಿಯೇ ಇಲ್ಲ. ಅಷ್ಟೇ ಅಲ್ಲದೇ ಈ ಹೆಸರನ್ನು ಪರಿಗಣಿಸಿಲ್ಲ ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳಿಗೂ ಮಾಹಿತಿ ನೀಡಲಿಲ್ಲ.

ಉಳಿದ ಶಿಫಾರಸುದಾರರು ಬೇರೆಯವರ ಹೆಸರನ್ನು ಶಿಫಾರಸು ಮಾಡಿದರು. ಅದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೂ ತಾರದೆ ಮುಖ್ಯಮಂತ್ರಿಗಳು ಅಂತಿಮಗೊಳಿಸಿದರು. ನ್ಯಾ.ಚಂದ್ರಶೇಖರಯ್ಯ ಅವರನ್ನು ನೇಮಕ ಮಾಡಿ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ಮುಖ್ಯ ನ್ಯಾಯಮೂರ್ತಿಗಳಿಗೆ ಈ ಬಗ್ಗೆ ತಿಳಿದು ಬಂತು. ಸರ್ಕಾರ ಈ ರೀತಿಯಾಗಿ ನಡೆದುಕೊಂಡಿರುವುದು ವಿಷಾದನೀಯ~ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ನೆನಪು ಹೋಯಿತೆ?: ನ್ಯಾ. ಚಂದ್ರಶೇಖರಯ್ಯ ಅವರ ಹೆಸರನ್ನು ಹಿಂದಿನ ಮುಖ್ಯ ನ್ಯಾಯಮೂರ್ತಿಗಳು ಉಪಲೋಕಾಯುಕ್ತ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಆಗ ಮುಖ್ಯಮಂತ್ರಿಗಳಾಗಲೀ, ಉಳಿದ ಶಿಫಾರಸುದಾರರಾಗಲೀ ಇವರ ಹೆಸರಿನ ಬಗ್ಗೆ ಚಕಾರವೇ ಎತ್ತಲಿಲ್ಲ.
 
ಆದುದರಿಂದ ಈಗಿನ ಮುಖ್ಯ ನ್ಯಾಯಮೂರ್ತಿಗಳು ಅವರ ಹೆಸರನ್ನು ಪುನಃ ಶಿಫಾರಸು ಮಾಡಲಿಲ್ಲ. ಆದರೆ ಹಿಂದೆ ಈ ಹೆಸರಿನ ಬಗ್ಗೆ ಚಕಾರ ಎತ್ತದೇ ಇರುವವರಿಗೆ ಅದು ಮರೆತಂತೆ ಕಾಣುತ್ತಿದೆ. ಅವರ ಹೆಸರನ್ನು ಈಗ ಶಿಫಾರಸು ಮಾಡಿದ್ದಾರೆ. ಇದು ಈ ಹುದ್ದೆಗೆ ಶಿಫಾರಸು ಮಾಡಲು ಕುಳಿತಿರುವವರ ಮನಃಸ್ಥಿತಿಯನ್ನು ತೋರಿಸುತ್ತದೆ.
 
ಇದು ಲೋಕಾಯುಕ್ತ ಸಂಸ್ಥೆಗೆ ಕೆಟ್ಟ ಹೆಸರು ತರುವಂಥಾದ್ದು. ಇದೇ ರೀತಿ ಮುಂದುವರಿದರೆ ಸಂವಿಧಾನದ ಮೂಲ ಆಶಯಕ್ಕೇ ಭಂಗ ಉಂಟಾಗುತ್ತದೆ~ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ನೇಮಕಕ್ಕೆ ಹೊಸ ಮಾನದಂಡಗಳು
ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಇದುವರೆಗೂ ಸರಿಯಾದ ಮಾರ್ಗಸೂಚಿ ಇಲ್ಲ. ನೇಮಕ ನಿಯಮದಲ್ಲಿ ಕೆಲವು ಗೊಂದಲಗಳೂ ಇವೆ. ಆದುದರಿಂದ ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸುವವರೆಗೂ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಕೆಳಕಂಡ ನಿರ್ದೇಶನ ಪಾಲನೆ ಮಾಡಬೇಕು ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ. ನಿರ್ದೇಶನ ಇಂತಿದೆ-

 * ತೆರವುಗೊಂಡಿರುವ ಈ ಎರಡು ಸ್ಥಾನಗಳನ್ನು ಭರ್ತಿ ಮಾಡುವ ಮೊದಲು ಸೂಕ್ತ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗಳು ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿಕೊಳ್ಳಬೇಕು. 

 * ಅಂತಹ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಸೂಕ್ತ ಎನಿಸಿದ ಒಬ್ಬರೇ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಬೇಕು. ಇಲ್ಲಿ ಬಹಳ ವ್ಯಕ್ತಿಗಳ ಹೆಸರು ಶಿಫಾರಸು ಮಾಡಲು ಅವಕಾಶ ಇಲ್ಲ. ಸೂಕ್ತ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡುವ ಮುನ್ನ ಅಂತಹ ವ್ಯಕ್ತಿಯ ಕುರಿತು ನ್ಯಾಯಾಲಯಗಳಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಅಭ್ಯರ್ಥಿಯ ಹಿನ್ನೆಲೆ ತಿಳಿದುಕೊಳ್ಳಬೇಕು.

 * ಮುಖ್ಯ ನ್ಯಾಯಮೂರ್ತಿಗಳು ಶಿಫಾರಸು ಮಾಡಿರುವ ಹೆಸರನ್ನು ಮುಖ್ಯಮಂತ್ರಿಗಳು ಇತರ ನಾಲ್ವರು ಶಿಫಾರಸುದಾರರ (ವಿಧಾನಸಭೆಯ ಸ್ಪೀಕರ್ ಮತ್ತು ವಿರೋಧ ಪಕ್ಷದ ನಾಯಕ; ವಿಧಾನ ಪರಿಷತ್ ಸಭಾಪತಿ ಮತ್ತು ಪರಿಷತ್ತಿನ ಪ್ರತಿಪಕ್ಷದ ನಾಯಕ) ಮುಂದೆ ಇಡಬೇಕು.

 * ಆ ಸಂದರ್ಭದಲ್ಲಿ ಅಭ್ಯರ್ಥಿಯ ಹೆಸರಿಗೆ ಸಮ್ಮತಿ ಸೂಚಿಸುವ ಅಥವಾ ಬಿಡುವ ಅಧಿಕಾರ ಉಳಿದ ಶಿಫಾರಸುದಾರರಿಗೆ ಇದೆ. ಆದರೆ ಈ ಹೆಸರಿಗೆ ಸಮ್ಮತಿ ಇರದೇ ಇದ್ದ ಪಕ್ಷದಲ್ಲಿ ಅದಕ್ಕೆ ಕಾರಣವನ್ನು ಲಿಖಿತ ರೂಪದಲ್ಲಿ ಅವರು ಮುಖ್ಯಮಂತ್ರಿಗಳಿಗೆ ನೀಡಬೇಕು.

 * ಸಮ್ಮತಿ ಇಲ್ಲದ ಬಗ್ಗೆ ನೀಡಿರುವ ಕಾರಣಗಳನ್ನು ಮುಖ್ಯಮಂತ್ರಿ ಕೂಲಂಕಷವಾಗಿ ಪರಿಶೀಲಿಸಬೇಕು. ಒಂದು ವೇಳೆ ಅಭ್ಯರ್ಥಿಯ ವಿರುದ್ಧ ಮಾಡಿದ ಆರೋಪಗಳಲ್ಲಿ ಸತ್ಯಾಂಶ ಇದೆ ಎಂದು ಮುಖ್ಯಮಂತ್ರಿಗಳಿಗೆ ಮನವರಿಕೆಯಾದರೆ ಅದನ್ನು ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದು ಬೇರೊಬ್ಬರ ಹೆಸರು ಶಿಫಾರಸು ಮಾಡುವಂತೆ ಕೋರಬೇಕು. ಪುನಃ ಪ್ರಕ್ರಿಯೆ ಮೊದಲಿನಿಂದ ಆರಂಭಗೊಳ್ಳಬೇಕು. 

 * ಎಲ್ಲರೂ ಸಮ್ಮತಿ ಸೂಚಿಸಿದರೆ ಆ ಹೆಸರನ್ನು ಅಂತಿಮಗೊಳಿಸಿ ಮುಂದಿನ ಕ್ರಮಕ್ಕೆರಾಜ್ಯಪಾಲರ ಮುಂದಿಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.