ADVERTISEMENT

ಉಪ ಚುನಾವಣೆ: ಕಾಂಗ್ರೆಸ್ ಸಭೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಬೆಂಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನೇ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಹೆಗ್ಡೆ ಅವರಿಗೇ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮತ್ತೊಮ್ಮೆ ಶಿಫಾರಸು ಮಾಡಲು ಭಾನುವಾರ ನಡೆದ ಕೆಪಿಸಿಸಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಉಪ ಚುನಾವಣೆ ತಯಾರಿ ಕುರಿತು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಸಂಸದ ಎಚ್.ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು. ಅಭ್ಯರ್ಥಿ ಆಯ್ಕೆ, ಚುನಾವಣಾ ತಯಾರಿ, ಕಾರ್ಯಕರ್ತರ ಸಂಘಟನೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಟಿಕೆಟ್ ಆಕಾಂಕ್ಷಿಗಳಾದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಂಸದರಾದ ತಾರಾದೇವಿ ಸಿದ್ಧಾರ್ಥ ಮತ್ತು ವಿನಯಕುಮಾರ್ ಸೊರಕೆ ಅವರಲ್ಲಿ ಹೆಗ್ಡೆ ಅವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ಬಹುತೇಕರು ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಹೈಕಮಾಂಡ್‌ಗೆ ನಾಲ್ಕು ಹೆಸರುಗಳ ಪಟ್ಟಿ ರವಾನಿಸಿದ್ದರೂ, ಹೆಗ್ಡೆ ಅವರನ್ನೇ ಪರಿಗಣಿಸುವಂತೆ ಮತ್ತೊಮ್ಮೆ ಶಿಫಾರಸು ಪತ್ರ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಮೂಲಗಳ ಪ್ರಕಾರ, ಬುಧವಾರ ಅಭ್ಯರ್ಥಿಯ ಹೆಸರು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆ ಇದೆ. ಚುನಾವಣೆಯನ್ನು ಎದುರಿಸಲು ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ತಕ್ಷಣದಿಂದಲೇ ಕಾರ್ಯಕರ್ತರನ್ನು ಸಂಪರ್ಕಿಸಿ, ಪಕ್ಷದ ಪರ ಪ್ರಚಾರಕ್ಕೆ ತೊಡಗಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.