ADVERTISEMENT

ಉಪ ಲೋಕಾಯುಕ್ತ ನೇಮಕಕ್ಕೆ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ಉಪ ಲೋಕಾಯುಕ್ತ ನೇಮಕಕ್ಕೆ ಪ್ರಕ್ರಿಯೆ ಆರಂಭ
ಉಪ ಲೋಕಾಯುಕ್ತ ನೇಮಕಕ್ಕೆ ಪ್ರಕ್ರಿಯೆ ಆರಂಭ   

ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಶನಿವಾರ ನಿವೃತ್ತಿಯಾಗಿದ್ದು, ಅವರ ಉತ್ತರಾಧಿಕಾರಿ ನೇಮಕಕ್ಕೆ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

ಲೋಕಾಯುಕ್ತ ಕಾಯ್ದೆ ಅನ್ವಯ ಮುಖ್ಯಮಂತ್ರಿಗಳು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ತಿನ ಸಭಾಪತಿ, ವಿಧಾನಮಂಡಲ ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ಹೆಸರು ಸೂಚಿಸುವಂತೆ ಕೇಳಬೇಕು.  ಹೆಸರು ಬಂದ ಬಳಿಕ ಸಭೆ ಕರೆಯಬೇಕು. ಬಳಿಕ ಮುಖ್ಯ ನ್ಯಾಯಮೂರ್ತಿ ಜೊತೆ ಖುದ್ದು ಸಮಾಲೋಚಿಸಿದ ಮೇಲೆ ರಾಜ್ಯಪಾಲರಿಗೆ ಕಳುಹಿಸಿ ಅನುಮೋದನೆ ಪಡೆಯಬೇಕು.

ಮುಖ್ಯಮಂತ್ರಿ ಕಚೇರಿಯಿಂದ ಸಮಿತಿ ಸದಸ್ಯರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಅಶೋಕ್ ಬಿ. ಹಿಂಚಗೇರಿ, ಆನಂದ ಬೈರಾರೆಡ್ಡಿ, ಆರ್‌.ಎಸ್‌.ಗುಂಜಾಳ ಸೇರಿದಂತೆ ಕೆಲವು ಹೆಸರು ಚರ್ಚೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ, ‘ಈವರೆಗೆ ಯಾರೂ ನನ್ನನ್ನು ಸಂಪರ್ಕಿಸಿಲ್ಲ. ಆರು ಜನರ ಸಮಿತಿ ಸರ್ವಾನುಮತದಿಂದ ತೀರ್ಮಾನ ಮಾಡಿದರೆ ಮಾತ್ರ ಒಪ್ಪಿಕೊಳ್ಳುತ್ತೇನೆ. ಸಮಿತಿಯಲ್ಲಿ ಒಂದೇ ಒಂದು ಅಪಸ್ವರ ಬಂದರೂ ಒಪ್ಪಿಕೊಳ್ಳುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾನು ಪ್ರಯತ್ನವನ್ನೂ ಮಾಡಿಲ್ಲ, ಯಾರೂ ನನ್ನನ್ನು ಕೇಳಿಯೂ ಇಲ್ಲ. ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕಸಿದುಕೊಂಡು ದುರ್ಬಲಗೊಳಿಸಲಾಗಿದೆ. ಈ ಕುರಿತು ನನ್ನನ್ನು ಸಂಪರ್ಕಿಸಿದ ಬಳಿಕ ಒಪ್ಪಿಕೊಳ್ಳಬೇಕೋ, ಬಿಡಬೇಕೋ ಎಂದು ತೀರ್ಮಾನಿಸುತ್ತೇನೆ’ ಎಂದು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸುಭಾಷ್ ಬಿ. ಅಡಿಗೆ ಬೀಳ್ಕೊಡುಗೆ

ಉಪ ಲೋಕಾಯುಕ್ತ ಸ್ಥಾನದಿಂದ ನಿರ್ಗಮಿಸಿದ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರಿಗೆ ಲೋಕಾಯುಕ್ತ ಕಚೇರಿಯಲ್ಲಿ ಶನಿವಾರ ಬೀಳ್ಕೊಡಲಾಯಿತು.

ನ್ಯಾಯಮೂರ್ತಿ ಭಾಸ್ಕರ ರಾವ್ ಲೋಕಾಯುಕ್ತರಾಗಿದ್ದ ಅವಧಿಯಲ್ಲಿ ಈ ಸಂಸ್ಥೆಯಲ್ಲಿ ನಡೆದಿತ್ತು ಎನ್ನಲಾದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಸೂಚಿಸಿದ್ದರು. ಈ ನಿರ್ಧಾರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿತ್ತು. ಕಾರ್ಯವ್ಯಾಪ್ತಿ ಮೀರಿ ಆದೇಶ ನೀಡಿದ್ದಾರೆ ಎಂಬ ಆರೋಪದಲ್ಲಿ ಅವರ ಪದಚ್ಯುತಿಗೂ ಸರ್ಕಾರ ಪ್ರಯತ್ನಿಸಿತ್ತು. ಆದರೆ, ಹೈಕೋರ್ಟ್ ನ್ಯಾಯಮುರ್ತಿ ಬೂದಿಹಾಳ್ ನೇತೃತ್ವದ ವಿಚಾರಣಾ ತಂಡ ಅಡಿ ಅವರನ್ನು ದೋಷಮುಕ್ತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.