ADVERTISEMENT

ಉಳಿದಿರುವ ಕೆರೆಗಳ ರಕ್ಷಣೆಗೆ ಎಸ್‌ಟಿಪಿ ಅಳವಡಿಕೆ: ಡಾ.ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 11:10 IST
Last Updated 11 ಜೂನ್ 2018, 11:10 IST
ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿ ನೀಡಿದರು.
ಬೆಳ್ಳಂದೂರು ಕೆರೆ ಪ್ರದೇಶಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭೇಟಿ ನೀಡಿದರು.   

ಬೆಂಗಳೂರು: ಬೆಂಗಳೂರು ಬೆಳೆದಂತೆ ಕೆರೆ ಅಭಿವೃದ್ಧಿ ಕಡೆಗಣಿಸಿದ್ದು ದೌರ್ಭಾಗ್ಯ. ಕೆರೆಗಳಿಗೆ ಕಲುಷಿತ ನೀರು ಬಿಡುವ ಮೂಲಕ ಹಾಳು ಮಾಡಿದ್ದೇವೆ.‌ ಮುಂದೆ ಈ ರೀತಿ ಆಗದಂತೆ ತಡೆಯುವ ಜವಾಬ್ದಾರಿ ಇದೆ. ಮುಂದಿನ ಮೂರು ತಿಂಗಳೊಳಗೆ ಪರಿವರ್ತನೆ ಹಾದಿಗೆ ಒಂದು ರೂಪ ಕೊಡುವ ವಿಶ್ವಾಸವಿದೆ ಎಂದು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಸೋಮವಾರ ಅಧಿಕಾರಿಗಳೊಂದಿಗೆ ಕಗ್ಗದಾಸಪುರ, ಬೆಳ್ಳಂದೂರು ಕೆರೆ ಪರಿಶೀಲಿಸಿದರು.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಬೆಂಗಳೂರಲ್ಲಿ ಸುಮಾರು 300-350 ಕೆರೆಗಳಿದ್ದವು. ಆದರೆ ಕಾಲ ಕ್ರಮೇಣ ವಿವಿಧ ಕಾರಣಕ್ಕೆ ನಮ್ಮ ಪೂರ್ವಜರು ನಿರ್ಮಿಸಿದ ಕೆರೆಗಳನ್ನು ಕಳೆದುಕೊಂಡಿದ್ದೇವೆ. ಈಗ ಉಳಿದಿರುವ ಕೆರೆಗಳ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ಹಾಗಾಗಿ ಹೆಚ್ಚು ಕೆರೆಗಳಿಗೆ ಎಸ್‌ಟಿಪಿ (ತ್ಯಾಜ್ಯ ನೀರು ಸಂಸ್ಕರಣಾ ಘಟಕ) ಅಳವಡಿಸಬೇಕೆಂದು ಹೇಳಿದ್ದೇನೆ. ಕಗ್ಗದಾಸಪುರದಲ್ಲಿ ಎಸ್‌ಟಿ‍ಪಿ ಸ್ಥಾಪಿಸಲು ಜಾಗ ಹುಡುಕಾಟ ನಡೆದಿದೆ. ಎಲ್ಲ ಕಡೆಯೂ ಎಸ್‌ಟಿಪಿ ಸ್ಥಾಪಿಸಿ ಕೊಳಚೆ ನೀರು ಸಂಸ್ಕರಿಸಿ ಶುದ್ಧ ನೀರನ್ನು ಬಳಸಿಕೊಳ್ಳಬೇಕಿದೆ ಎಂದರು.

ADVERTISEMENT

ಬಿಬಿಎಂಪಿಯ ಕೆಲವು ಪ್ರಮುಖ ವಿಷಯ ಕುರಿತು ಅಧಿಕಾರಿಗಳೊಂದಿಗೆ ತಕ್ಷಣವೇ ಸಭೆ ನಡೆಸಿ ಪರಿಹಾರ ಕೈಗೊಳ್ಳಲಾಗುತ್ತದೆ. ಪೌರ ಕಾರ್ಮಿಕರ ವೇತನ ಬಾಕಿ, ಎಸ್‌ಟಿಪಿ ಪ್ಲಾಂಟ್ ಕುರಿತು ವಿವಿಧ ವಿಚಾರದ ಬಗ್ಗೆ ವಿಷಯ ಗಮನದಲ್ಲಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಕಸ ವಿಲೇವಾರಿ ನಿಲ್ಲಬಾರದೆಂದು ಸೂಚಿಸಿದ್ದೇನೆ. ಬಿಬಿಎಂಪಿಯಿಂದ ಬಿಡುಗಡೆಯಾಗಬೇಕಾದ ಹಣವನ್ನು ತಕ್ಷಣವೇ ಬಿಡುಗಡೆಗೊಳಿಸಲು ಬಿಬಿಎಂಪಿ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.