ADVERTISEMENT

ಎಂಜಿನಿಯರ್‌ಗಳ ಸೇವಾಭದ್ರತೆಗೆ ವಿಶೇಷ ಮಸೂದೆ

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಅನ್ವಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:30 IST
Last Updated 2 ಡಿಸೆಂಬರ್ 2013, 19:30 IST

ಸುವರ್ಣಸೌಧ (ಬೆಳಗಾವಿ):  ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದ ೪೧೭ ಎಂಜಿನಿಯರ್‌ ಗಳನ್ನು  ಸೇವೆಯಲ್ಲಿ ಮುಂದುವರಿಸುವ ಉದ್ದೇಶದ ಕರ್ನಾಟಕ ಸಿವಿಲ್ ಸೇವೆಗಳು (ಸಹಾಯಕ ಎಂಜಿನಿಯರ್‌ ಗಳು ಮತ್ತು ಕಿರಿಯ ಎಂಜಿನಿಯರ್‌ಗಳ ವಿಶೇಷ ನೇಮಕಾತಿ) ಮಸೂದೆಗೆ ವಿಧಾನಸಭೆ ಸೋಮವಾರ ಒಪ್ಪಿಗೆ ನೀಡಿತು.

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿ ಯಲ್ಲಿ ಬರುವ ೪೧೭ ಎಂಜಿನಿಯರ್‌ ಗಳು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಈ ತಿಂಗಳ ೧೩ರಿಂದ ಉದ್ಯೋಗ ಕಳೆದುಕೊಳ್ಳುತ್ತಿ ದ್ದರು. ಅವರನ್ನು ರಕ್ಷಿಸುವ ಸಲುವಾಗಿ ಈ ಮಸೂದೆಯನ್ನು  ರೂಪಿಸಲಾಗಿದೆ. ೧೯೯3–-೯೪ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಗೊಂಡಿರುವ ಇವರ ಸೇವೆಯನ್ನು ೨೦೦೨ರಲ್ಲಿ ಕಾಯಂಗೊಳಿಸಲಾಗಿತ್ತು. ಆದರೆ, ಇದನ್ನು  ಪ್ರಶ್ನಿಸಿ ೪೭ ಮಂದಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ನೇಮಕಾತಿಯನ್ನು ರದ್ದುಪಡಿಸಿತ್ತು.

ರಾಜ್ಯ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿ ಸಿತ್ತು. ಆದರೆ, ಹೈಕೋರ್ಟ್ ಆದೇಶ ವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಕಾರಣ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಯಾಗಿತ್ತು. ಡಿ. ೧೩ರ ನಂತರವೂ ಆ ಎಂಜಿನಿಯ ರ್‌ಗಳ ಸೇವೆಯನ್ನು ಮುಂದುವರಿಸುವ ಮತ್ತು ಮುಂದೆ ನಡೆಯಲಿರುವ ವಿಶೇಷ ನೇಮಕಾತಿ ಸಂದರ್ಭದಲ್ಲಿ ಕೃಪಾಂಕ ನೀಡುವ ಸಲುವಾಗಿ ಮಸೂದೆ ತರಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಹಾಲಿ ಸೇವೆಯಲ್ಲಿದ್ದು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿರುವ ೪೧೭ ಮಂದಿ ೧೯೯೯ನೇ ಇಸವಿಗೆ ಅನ್ವಯ ವಾಗುವಂತೆ ಶೈಕ್ಷಣಿಕ ಅರ್ಹತೆ ಹೊಂದಿ ದ್ದರೆ ಮುಂದೆ ನಡೆಯುವ ನೇಮಕಾತಿ ಸಂದರ್ಭದಲ್ಲಿ ಅರ್ಜಿ ಸಲ್ಲಿಸಬಹುದು. ಅವರಿಗೆ ಒಂದು ವರ್ಷದ ಸೇವೆಗೆ ಶೇ ೫ರಂತೆ ಗರಿಷ್ಠ ಶೇ ೩೦ರಷ್ಟು ಕೃಪಾಂಕ ನೀಡಲಾಗುತ್ತದೆ ಎಂದು ವಿವರಿಸಿದರು. ವಿಶೇಷ ನೇಮಕಾತಿ ನಿಯಮದಡಿ ೫೫೦ ಹುದ್ದೆಗಳ ಭರ್ತಿಗೆ ಅವಕಾಶ ಇದೆ. ೪೧೭ ಮಂದಿ ಜೊತೆಗೆ ನ್ಯಾಯಾ ಲಯದ ಮೊರೆ ಹೋಗಿದ್ದ ಅಭ್ಯರ್ಥಿ ಗಳಿಗೂ ಅವಕಾಶ ನೀಡಲಾಗುತ್ತದೆ. ಈಗಿರುವ ೪೧೭ ಮಂದಿ ಸೇವಾ ಹಿರಿತನ ಮತ್ತು ಪಿಂಚಣಿ ಸೌಲಭ್ಯಕ್ಕೆ ಅರ್ಹರಾ ಗುತ್ತಾರೆ ಎಂದರು.

ಕೈಗಾರಿಕಾ ತಿದ್ದುಪಡಿ ಮಸೂದೆ:  ರಾಜ್ಯಮಟ್ಟದ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಮಂಜೂರಾತಿ ನೀಡಿರುವ ಯೋಜನೆಗಳು ತ್ವರಿತವಾಗಿ ಅನು ಷ್ಠಾನಕ್ಕೆ  ಬರುವಂತೆ ನೋಡಿಕೊಳ್ಳುವ ಉದ್ದೇಶದಿಂದ ಮುಖ್ಯಕಾರ್ಯದರ್ಶಿ ಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಪ್ರಾಧಿಕೃತ ಸಮಿತಿ ರಚನೆ, ₨೧೦೦ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡುವ ಯೋಜನೆಗಳ ಪ್ರಸ್ತಾವನೆ ಯನ್ನು ಮಾತ್ರ ಉನ್ನತಾಧಿಕಾರ ಸಮಿತಿ ಮುಂದೆ ಮಂಡಿಸುವುದು ಸೇರಿದಂತೆ ಕೆಲವು ಬದಲಾವಣೆಗಳನ್ನು ಒಳಗೊಂಡ ಕರ್ನಾಟಕ ಕೈಗಾರಿಕೆಗಳ ಸೌಲಭ್ಯ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿತು.

ಮಸೂದೆ ಮಂಡನೆ ನಂತರ ವಿವರಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ₨೧೫ ಕೋಟಿಗಿಂತ ಹೆಚ್ಚು ಹಾಗೂ ₨೧೦೦ ಕೋಟಿಗಿಂತ ಕಡಿಮೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳು ಉನ್ನತಾ ಧಿಕಾರ ಸಮಿತಿಯ ಮುಂದೆ ಬರುವ ಅವಶ್ಯಕತೆ ಇಲ್ಲ. ಏಕಗವಾಕ್ಷಿ ಯೋಜನೆ ಯಡಿ ಒಪ್ಪಿಗೆ ನೀಡಬಹುದು ಎಂದರು.

₨ 3 ಕೋಟಿಯಿಂದ ೧೫ ಕೋಟಿ ವರೆಗಿನ ಯೋಜನೆಗಳಿಗೆ ಜಿಲ್ಲಾಧಿಕಾರಿ ಗಳ ಅಧ್ಯಕ್ಷತೆಯ ಸಮಿತಿ ಒಪ್ಪಿಗೆ ನೀಡ ಲಿದೆ. ಒಮ್ಮೆ ರಾಜ್ಯಮಟ್ಟದ ಉನ್ನತಾ ಧಿಕಾರ ಸಮಿತಿ ಒಪ್ಪಿಗೆ ನೀಡಿದ ನಂತರ, ದೂರು ಅಥವಾ ಅಹವಾಲು ಬಂದರೆ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಹೊಸ ಸರ್ಕಾರ ಬಂದ ನಂತರ ಮೂರು ಬಾರಿ ಉನ್ನತಾಧಿಕಾರ ಸಮಿತಿಯ ಸಭೆ ನಡೆದಿದ್ದು, ₨ ೨೦ ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಇದರ ವಿವರ ಗಳನ್ನು ಒದಗಿಸಲಾಗುವುದು ಎಂದು  ಹೇಳಿದರು.

ADVERTISEMENT

ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ
ಕರ್ನಾಟಕ ಕೊಳಚೆ ನಿರ್ಮೂ ಲನಾ ಮಂಡಳಿಯ ಹೆಸರನ್ನು ಕರ್ನಾಟಕ ಕೊಳಚೆ ಪ್ರದೇಶಾಭಿ ವೃದ್ಧಿ ಮಂಡಳಿ ಎಂದು ಬದಲಾಯಿ ಸಲು ಅವಕಾಶ ಕಲ್ಪಿಸುವ ಕರ್ನಾಟಕ ಕೊಳಚೆ ಪ್ರದೇಶಗಳ (ಮೇಲ್ಪಾಟು ಮತ್ತು ನಿರ್ಮೂ ಲನ) ತಿದ್ದುಪಡಿ ಮಸೂದೆಗೆ ಸದನ ಒಪ್ಪಿಗೆ ನೀಡಿತು.

ಹಿಂದುಳಿದ ವರ್ಗದವರಿಗೆ ಅವಕಾಶ
ರಾಜ್ಯ ಮಹಿಳಾ ಆಯೋಗದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸುವ ಕರ್ನಾಟಕ ರಾಜ್ಯ ಮಹಿಳಾ ಆಯೋಗ (ತಿದ್ದುಪಡಿ) ಮಸೂದೆಗೆ ಸದನ ಒಪ್ಪಿಗೆ ನೀಡಿತು. ಇದುವರೆಗೆ ಪರಿಶಿಷ್ಟ ಜಾತಿ, ಪಂಗಡ ವರ್ಗದ ವರಿಗೆ ಮಾತ್ರ ಮೀಸಲಾತಿ ಇತ್ತು. ತಿದ್ದುಪಡಿಯಿಂದಾಗಿ ಇನ್ನು ಮುಂದೆ ಹಿಂದುಳಿದ ವರ್ಗದವ ರಿಗೂ ಸದಸ್ಯ  ಸ್ಥಾನಗಳಲ್ಲಿ ಮೀಸಲಾತಿ ದೊರೆಯಲಿದೆ.

ಕ್ಷೇತ್ರವಾರು ಬಗರ್‌ ಹುಕುಂ ಸಮಿತಿ
ತಾಲ್ಲೂಕಿನ ಬದಲು ಪ್ರತಿ ಯೊಂದು ವಿಧಾನಸಭಾ ಕ್ಷೇತ್ರ ವಾರು ಬಗರ್‌ಹುಕುಂ ಸಮಿತಿ ಗಳನ್ನು ರಚಿಸಲು ಅವಕಾಶ ಕಲ್ಪಿ ಸುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಸಭೆ ಒಪ್ಪಿಗೆ ನೀಡಿತು.

ಮಸೂದೆ ಮಂಡಿಸಿದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಅನಧಿಕೃತವಾಗಿ ಸಾಗುವಳಿ ಮಾಡು ತ್ತಿರುವ ಭೂಮಿಯನ್ನು ಶಾಸಕರ ಅಧ್ಯಕ್ಷತೆಯ ಸಮಿತಿ ಮಂಜೂರು ಮಾಡುವಾಗ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಪಟ್ಟಂತೆ ಆಗುತ್ತಿರುವ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.