ADVERTISEMENT

ಎಂಡೊಸಲ್ಫಾನ್ ನಿಷೇಧ : ಸಚಿವೆಗೆ ಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 16:40 IST
Last Updated 23 ಫೆಬ್ರುವರಿ 2011, 16:40 IST

ಬೆಂಗಳೂರು: ಎಂಡೊಸಲ್ಫಾನ್ ಕೀಟನಾಶಕದ ಬಳಕೆಗೆ ಎರಡು ತಿಂಗಳವರೆಗೆ ನಿಷೇಧ ಹೇರಿರುವ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಮುಂಬೈ ಮೂಲದ ಇದರ ತಯಾರಕರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿಗೆ ಆದೇಶಿಸಿದೆ.

ಎಂಡೊಸಲ್ಫಾನ್ ತಯಾರಕರ ಕ್ಷೇಮಾಭಿವೃದ್ಧಿ ಸಂಘ, ಎಕ್ಸೆಲ್ ಕ್ರಾಪ್ ಕೇರ್ ಲಿಮಿಟೆಡ್ ಸೇರಿದಂತೆ ಇನ್ನಿತರರು ಸಲ್ಲಿಸಿರುವ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಡೆಸುತ್ತಿದ್ದಾರೆ.

ಈ ರೀತಿ ನಿಷೇಧ ಹೇರುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಈ ಕೀಟನಾಶಕದ ಬಳಕೆ ಕುರಿತಂತೆ ಸರ್ಕಾರದಿಂದ 2004ರಲ್ಲಿ ರಚನೆಗೊಂಡ ತಜ್ಞರ ಸಮಿತಿ ನೀಡಿರುವ ವರದಿಗೆ ಸರ್ಕಾರದ ಈ ಆದೇಶ ವ್ಯತಿರಿಕ್ತವಾಗಿದೆ. ದುರುದ್ದೇಶಪೂರ್ವಕವಾಗಿ ಅದನ್ನು ನಿಷೇಧ ಮಾಡಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಎಂಡೊಸಲ್ಫಾನ್ ಬಳಕೆಯಿಂದ ಯಾವ ಸ್ಥಳದಲ್ಲಿ ದುಷ್ಪರಿಣಾಮ ಉಂಟಾಗಿದೆ ಎಂದು ಹೇಳಲಾಗುತ್ತಿದೆಯೋ (ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳು) ಅಲ್ಲಿ ಇದನ್ನು ಬಳಕೆ ಮಾಡುವವರ ಸಂಖ್ಯೆ ಇಡೀ ರಾಜ್ಯಕ್ಕೆ ಹೋಲಿಸಿದರೆ ಶೇ 0.625 ಮಾತ್ರ.

ಆದರೆ ಹಲವು ವರ್ಷಗಳಿಂದ ವಿವಿಧ ಭಾಗಗಳಲ್ಲಿ ಇದನ್ನು ಮಾರಾಟ ಮಾಡಲಾಗುತ್ತಿದೆ. ವರ್ಷಕ್ಕೆ ಸುಮಾರು ಎಂಟು ಲಕ್ಷ ಲೀಟರ್ ಮಾರಾಟ ಆಗುತ್ತಿದೆ. ಆದರೆ ಎಲ್ಲಿಯೂ ಇದರ ದುಷ್ಪರಿಣಾಮದ ವರದಿಯಾಗಿಲ್ಲ. ಈಗ ಸರ್ಕಾರ ನಿಷೇಧ ಮಾಡಿರುವುದರಿಂದ ಇದರ ತಯಾರಕರ ಹಕ್ಕನ್ನು ಕಸಿದುಕೊಂಡಂತಾಗಿದೆ. ಇದರಿಂದ ಇದನ್ನು ತಯಾರಿಸುವ 5ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೀದಿ ಪಾಲಾಗಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳ ತಾಲ್ಲೂಕುಗಳಲ್ಲಿ ಪ್ರತಿ ವರ್ಷ ಇದರ ಬಳಕೆ ಮಾಡುತ್ತಿರುವ ಕಾರಣ, ಮಕ್ಕಳು, ವಯಸ್ಕರು ಮತ್ತು ವಯೋವೃದ್ಧರು ತೀವ್ರ ಸ್ವರೂಪದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ ಎಂದು ಗಮನಿಸಿದ ಸರ್ಕಾರ ಅದನ್ನು ತಾತ್ಕಾಲಿಕವಾಗಿ ನಿಷೇಧ ಮಾಡಿದ್ದು, ಕಾಯಂ ಆಗಿ ನಿಷೇಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.