ADVERTISEMENT

ಎಂ.ವೈ. ಘೋರ್ಪಡೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಬಳ್ಳಾರಿ: ಜಿಲ್ಲೆಯ ಸಂಡೂರು ರಾಜ ಮನೆತನದವರಾದ ಮುತ್ಸದ್ದಿ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ, ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಮುರಾರಿರಾವ್ ಯಶವಂತರಾವ್ ಘೋರ್ಪಡೆ (80) ಅನಾರೋಗ್ಯದಿಂದಾಗಿ ಶನಿವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಘೋರ್ಪಡೆ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಬೆಳಿಗ್ಗೆವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ನಂತರ ಹೆಲಿಕಾಪ್ಟರ್ ಮೂಲಕ ಅವರ ಹುಟ್ಟೂರಾದ ಸಂಡೂರಿಗೆ ತರಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಘೋರ್ಪಡೆ ಅವರಿಗೆ ಪತ್ನಿ ವಸುಂಧರಾ, ಮೂವರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.
 

ಡಿಸೆಂಬರ್ 7, 1931 ರಂದು ಬೆಂಗಳೂರಿನಲ್ಲಿ ಜನಿಸಿದ್ದ ಮುರಾರಿರಾವ್ ಬೆಂಗಳೂರು ಮತ್ತು ಸಂಡೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರಲ್ಲದೆ, 1950ರಲ್ಲಿ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ, 1952ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1953ರಲ್ಲಿ ವಸುಂಧರಾ ಅವರನ್ನು ಮದುವೆಯಾಗಿದ್ದ ಇವರು, 1954ರಲ್ಲಿ ತಂದೆ ಯಶವಂತರಾವ್ ಆರಂಭಿಸಿದ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಕಂಪೆನಿಯ ನಿರ್ದೇಶಕರಾಗಿ ನೇಮಕಗೊಂಡರಲ್ಲದೆ, ಅದೇ ವರ್ಷ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಸಕ್ರಿಯ ರಾಜಕಾರಣದಲ್ಲಿ  ತೊಡಗಿಸಿಕೊಂಡರು.

1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು 7 ಬಾರಿ (1959, 1962, 1967, 1972, 1989, 1994, 1999) ಶಾಸಕರಾಗಿದ್ದರು. 1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು.

ರಾಜ್ಯ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾದವರಲ್ಲಿ ಎಸ್. ನಿಜಲಿಂಗಪ್ಪ ಅವರೊಂದಿಗೆ ಘೋರ್ಪಡೆ ಅವರೂ ಒಬ್ಬರು. 1967ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸಂಡೂರು ಶಾಸಕರಾಗಿ ಪ್ರತಿಸ್ಫರ್ಧಿಗಳಿಲ್ಲದೆ ಆಯ್ಕೆಯಾದುದು ವಿಶೇಷ.

1972ರಿಂದ 77ರವರೆಗೆ ದೇವರಾಜ್ ಅರಸ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ, 1990ರಿಂದ 94ರವರೆಗೆ ವೀರೇಂದ್ರ ಪಾಟೀಲ್, ಎಸ್.ಬಂಗಾರಪ್ಪ ಹಾಗೂ ವೀರಪ್ಪ ಮೊಯಿಲಿ ಸಂಪುಟದಲ್ಲಿ ಸಚಿವರಾಗಿ ಹಾಗೂ 1999ರಿಂದ 2004ರವರೆಗೆ ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪರಿಸರ ಪ್ರೇಮಿಯಾಗಿದ್ದ ಘೋರ್ಪಡೆ ವನ್ಯಜೀವಿ ಛಾಯಾಗ್ರಾಹಕರಾಗಿ ಅಂತರರಾಷ್ಟ್ರೀಯ ಪುರಸ್ಕಾರಗಳಿಗೂ ಭಾಜನರಾಗಿದ್ದರು.

ಶಿಕ್ಷಣ, ಸಮುದಾಯ ಸಂಘಟನೆಯಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಇವರು, ಲೇಖಕರಾಗಿಯೂ ಕೆಲವು ಪುಸ್ತಕಗಳನ್ನು ರಚಿಸಿದ್ದಾರೆ.

ವನ್ಯಜೀವಿ ಛಾಯಾಚಿತ್ರಗಳ ಸಂಕಲನ `ಸನ್‌ಲೈಟ್ ಅಂಡ್ ಶ್ಯಾಡೋಸ್~ ಹಾಗೂ `ಡೆವಲಪ್‌ಮೆಂಟ್ ಎಥೋಸ್ ಅಂಡ್ ಎಕ್ಸ್‌ಪೀರಿಯನ್ಸ್~, `ಗ್ರಾಂಡ್ ರೆಸಿಸ್ಟೆನ್ಸ್~, `ಪರಮಾಚಾರ್ಯ ಆಫ್ ಕಂಚಿ~ ಇವರ ಪ್ರಮುಖ ಕೃತಿಗಳು.
ಇವರ ಸಾಧನೆಯನ್ನು ಪರಿಗಣಿಸಿ 1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಇತ್ತೀಚೆಗಷ್ಟೇ ಇವರ ತಾಯಿ ಸುಶೀಲಾದೇವಿ ಗೋವಾದಲ್ಲಿ ನಿಧನರಾಗಿದ್ದರು.

ಗಣಿ ಕಂಪೆನಿಗಳನ್ನೂ ಹೊಂದಿದ್ದ ಇವರು, ಸ್ಮಯೋರ್ ಕಂಪೆನಿಯನ್ನು ಸಾರ್ವಜನಿಕ ಉದ್ದಿಮೆಯನ್ನಾಗಿ ಪರಿವರ್ತಿಸಿ ಕಾರ್ಮಿಕ ಕಲ್ಯಾಣಕ್ಕೂ ಒತ್ತು ನೀಡಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT