ADVERTISEMENT

ಎಚ್.ಡಿ.ಕೋಟೆ; ಮತ್ತೊಂದು ಹುಲಿ ಸೆರೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2017, 19:30 IST
Last Updated 10 ಅಕ್ಟೋಬರ್ 2017, 19:30 IST
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪ ಮಂಗಳವಾರ ಸೆರೆ ಸಿಕ್ಕ ಹುಲಿ
ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಸಮೀಪ ಮಂಗಳವಾರ ಸೆರೆ ಸಿಕ್ಕ ಹುಲಿ   

ಎಚ್.ಡಿ.ಕೋಟೆ/ಹಂಪಾಪುರ: ತಾಲ್ಲೂಕಿನಲ್ಲಿ ಮಂಗಳವಾರ ಮತ್ತೊಂದು ಹುಲಿಯನ್ನು ಸೆರೆ ಹಿಡಿಯಲಾಗಿದ್ದು, ಈ ಭಾಗದ ಜನರು ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಅಂತಸಂತೆ ಸಮೀಪದಲ್ಲಿ ಸೋಮವಾರ ಹುಲಿ ಕಾಣಿಸಿಕೊಂಡು ಭೀತಿ ಸೃಷ್ಟಿಸಿತ್ತು. ಅರಣ್ಯ ಇಲಾಖೆಯ 50ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಂಗಳವಾರ ಸಂಜೆ 2 ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದಾರೆ.

ಕಾರ್ಯಾಚರಣೆ ಸ್ವರೂಪ ಹೀಗಿತ್ತು: ದಸರೆಯಲ್ಲಿ ಭಾಗವಹಿಸಿದ್ದ ಅರ್ಜುನ, ಅಭಿಮನ್ಯು ಹಾಗೂ ಕೃಷ್ಣ ಆನೆಗಳನ್ನು ಕರೆಸಿಕೊಂಡು ಹುಲಿಗಾಗಿ ಹುಡುಕಾಟ ನಡೆಯಿತು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ, ಡ್ರೋಣ್ ಕ್ಯಾಮೆರಾ ಬಳಸಿ ಪರಿಶೀಲನೆ ನಡೆಸಿದಾಗ ಹೊಲವೊಂದರಲ್ಲಿ ಕರುವೊಂದರ ಮಾಂಸ ತಿನ್ನುತ್ತಿರುವುದು ಗೋಚರಿಸಿದೆ.

ADVERTISEMENT

ತಕ್ಷಣ ಕಾರ್ಯೋನ್ಮುಖರಾದ ಸಿಬ್ಬಂದಿ ಉದಯ್ ಎಂಬುವವರ ಜಮೀನಿನಲ್ಲಿ ಪತ್ತೆಯಾದ ಹುಲಿಯ ಸಮೀಪಕ್ಕೆ ಆನೆಗಳ ಸಹಾಯದಿಂದ  ತೆರಳಿದರು. ಹುಲಿಗೆ ಮೊದಲು ಅರಿವಳಿಕೆ ಚುಚ್ಚುಮದ್ದು ನೀಡಲಾಯಿತು. ಆದರೂ, ಅದು ಅರ್ಧ ಕಿ.ಮೀ ದೂರ ಕ್ರಮಿಸಿತು. ಆನೆ ಮೇಲೆ ಕುಳಿತ ವೈದ್ಯರು ಮತ್ತೊಂದು ಅರಿವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದ ಪ್ರಜ್ಞೆ ತಪ್ಪಿದ ಹುಲಿಗೆ ಬಲೆ ಹಾಕಿ ಸಿಬ್ಬಂದಿ ಹಿಡಿದರು.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಹುಲಿ ಆರೋಗ್ಯವಾಗಿದ್ದು ಒಂದೆರಡು ದಿನಗಳ ಕಾಲ ಅದನ್ನು ಗಮನಿಸಿ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.