ADVERTISEMENT

ಎಚ್.ಡಿ.ದೇವೇಗೌಡರ ಪುತ್ರನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹಿರಿಯ ಪುತ್ರ ಎಚ್.ಡಿ.ಬಾಲಕೃಷ್ಣೇಗೌಡ ಅವರು ಕೆಎಎಸ್ ಅಧಿಕಾರಿಯಾಗಿದ್ದ ಅವಧಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ ಭದ್ರಾವತಿಯ ಎಸ್.ಎನ್.ಬಾಲಕೃಷ್ಣ ಎಂಬುವರು ಗುರುವಾರ `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದಾರೆ.

ಕೆಎಎಸ್ ಅಧಿಕಾರಿಯಾಗಿದ್ದ ಆರೋಪಿ 2005ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ತಕ್ಷಣವೇ 77 ಕೋಟಿ ರೂಪಾಯಿ ಮೊತ್ತದ ಆಸ್ತಿ ಖರೀದಿಸಿದ್ದು, ಅದರ ಈಗಿನ ಮೌಲ್ಯ ನೂರಾರು ಕೋಟಿ ರೂಪಾಯಿ ಎಂಬ ಆರೋಪ ದೂರಿನಲ್ಲಿದೆ. ದೂರಿನ ವಿಚಾರಣೆ ಶನಿವಾರ ನಡೆಯಲಿದೆ.

72 ವರ್ಷ ವಯಸ್ಸಿನ ಎಸ್.ಎನ್.ಬಾಲಕೃಷ್ಣ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಹೈಕೋರ್ಟ್‌ನ ಹಿರಿಯ ವಕೀಲ ಎಸ್.ಜಿ.ಭಗವಾನ್ ಅವರೊಂದಿಗೆ ವಿಶೇಷ ನ್ಯಾಯಾಲಯಕ್ಕೆ ಬಂದ ಅವರು, ಒಂದು ಸಾವಿರ ಪುಟಗಳಿಗೂ ಹೆಚ್ಚು ದಾಖಲೆಗಳನ್ನು ಒಳಗೊಂಡ ದೂರನ್ನು ಸಲ್ಲಿಸಿದರು. `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988~ರ ಕಲಂ 13(1)(ಇ) ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.

`ಬಾಲಕೃಷ್ಣೇಗೌಡ 1984ರಲ್ಲಿ ಕೆಎಎಸ್ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದ್ದರು. 2005ರಲ್ಲಿ ಸ್ವಯಂನಿವೃತ್ತಿ ಪಡೆಯುವ ಸಂದರ್ಭದಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕರ ಹುದ್ದೆಯಲ್ಲಿದ್ದರು.
 
ಅದಕ್ಕೂ ಮುನ್ನ ಬೆಂಗಳೂರಿನ ನಗರ ಭೂಮಿತಿ ವಿಶೇಷ ಜಿಲ್ಲಾಧಿಕಾರಿಯೂ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಅವರ ಒಟ್ಟು ಸೇವಾ ಅವಧಿಯಲ್ಲಿನ ಅಧಿಕೃತ ಆದಾಯ ಕೇವಲ 30 ಲಕ್ಷ ರೂಪಾಯಿ ಆಗಿತ್ತು ಎಂಬ ಮಾಹಿತಿ ಮಹಾ ಲೆಕ್ಕನಿಯಂತ್ರಕರ (ಎಜಿ) ಕಚೇರಿಯಿಂದ ಪಡೆದ ದಾಖಲೆಗಳಲ್ಲಿದೆ~ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ವ್ಯಕ್ತಿಯು ಸ್ವಯಂನಿವೃತ್ತಿ ಪಡೆದ ಕೆಲವೇ ದಿನಗಳಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ಭೂಮಿ, ವಾಣಿಜ್ಯ ಕಟ್ಟಡಗಳನ್ನು ಖರೀದಿಸಿದ್ದಾರೆ. ವಿವಿಧ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ಈ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ಕ್ರಯಪತ್ರಗಳ ದಾಖಲೆಗಳನ್ನು ದೂರಿನೊಂದಿಗೆ ಸಲ್ಲಿಸಿದ್ದು, ಹೀಗೆ ಖರೀದಿಸಿದ್ದ ಆಸ್ತಿಯ ಮೌಲ್ಯ 77 ಕೋಟಿ ರೂಪಾಯಿ ಆಗಿತ್ತು. ಸದ್ಯ ಈ ಆಸ್ತಿಗಳು ನೂರಾರು ಕೋಟಿ ರೂಪಾಯಿ ಬೆಲೆ ಬಾಳುತ್ತವೆ ಎಂದು ವಿವರಿಸಿದ್ದಾರೆ.

`ಎಚ್.ಡಿ.ಬಾಲಕೃಷ್ಣೇಗೌಡ, ಅವರ ಪತ್ನಿ ಕವಿತಾ, ಅತ್ತೆ ಜಯಮ್ಮ (ಕವಿತಾ ಅವರ ತಾಯಿ), ಬಾವಂದಿರಾದ ರವೀಂದ್ರ ಮತ್ತು ಶ್ರೀಕಾಂತ್ (ಇಬ್ಬರೂ ಕವಿತಾ ಅವರ ಸಹೋದರರು) ಮತ್ತು ನಾದಿನಿ ಸವಿತಾ (ಕವಿತಾ ಅವರ ಸಹೋದರಿ) ಹೆಸರಿನಲ್ಲಿ ಆಸ್ತಿಗಳನ್ನು ಖರೀದಿಸಲಾಗಿದೆ.

ಈ ಖರೀದಿಗೆ ಬಾಲಕೃಷ್ಣೇಗೌಡ ಅವರು ಅಕ್ರಮವಾಗಿ ಸಂಪಾದಿಸಿದ್ದ ಹಣವನ್ನು ಬಳಸಿದ್ದಾರೆ~ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನಲ್ಲಿರುವ ವಿಷಯಗಳ ಕುರಿತು ತನಿಖೆ ನಡೆಸುವಂತೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 156(3) ಅಡಿಯಲ್ಲಿ ಸಂಬಂಧಿಸಿದ ತನಿಖಾ ಸಂಸ್ಥೆಗೆ ಆದೇಶಿಸುವಂತೆ ಕೋರಲಾಗಿದೆ. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಧೀಶರು, ಶನಿವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.