ADVERTISEMENT

‘ಎನ್‌ಪಿಎ ಮಾಹಿತಿ ಕೊಡುವವರೆಗೆ ಮರುಪಾವತಿ ಬೇಡ’

ಕೃಷಿ ಸಾಲ: ರೈತರ ಆಂದೋಲನಕ್ಕೆ ಆರೋಗ್ಯ ಸಚಿವ ಕೆ.ಆರ್. ರಮೇಶಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:41 IST
Last Updated 16 ಜೂನ್ 2017, 19:41 IST
‘ಎನ್‌ಪಿಎ ಮಾಹಿತಿ ಕೊಡುವವರೆಗೆ ಮರುಪಾವತಿ ಬೇಡ’
‘ಎನ್‌ಪಿಎ ಮಾಹಿತಿ ಕೊಡುವವರೆಗೆ ಮರುಪಾವತಿ ಬೇಡ’   

ಬೆಂಗಳೂರು: ‘₹6 ಲಕ್ಷ ಕೋಟಿಯಷ್ಟಿರುವ ವಸೂಲಾಗದ ಸಾಲದಲ್ಲಿ (ಎನ್‌ಪಿಎ) ಯಾವ ಉದ್ಯಮಿ ಎಷ್ಟು ಬಾಕಿ ಕಟ್ಟಬೇಕು ಎಂಬ ಮಾಹಿತಿ  ಕೊಡುವವರೆಗೆ ರೈತರು ವಾಣಿಜ್ಯ ಬ್ಯಾಂಕ್‌ಗಳ ಕೃಷಿ ಸಾಲ ಮರುಪಾವತಿ ಮಾಡುವುದು ಬೇಡ’ ಎಂದು ಆರೋಗ್ಯ ಸಚಿವ ಕೆ.ಆರ್‌. ರಮೇಶಕುಮಾರ್‌ ಹೇಳಿದರು.

ವಿಧಾನಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಬಡವರು, ಮಧ್ಯಮ ವರ್ಗದವರು ಕಷ್ಟಪಟ್ಟು ಉಳಿಸಿ, ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟ ಹಣವನ್ನು ಸಾಲ ತೆಗೆದುಕೊಂಡ ಶ್ರೀಮಂತರು, ಉದ್ಯಮಿಗಳು ಮರುಪಾವತಿ ಮಾಡಿಲ್ಲ. ಅವರು ಅಡಮಾನ ಇಟ್ಟ ಆಸ್ತಿಗಳೂ ಊರ್ಜಿತದಲ್ಲಿ ಇಲ್ಲ. ಎನ್‌ಪಿಎ ಲೆಕ್ಕಕೊಡುವವರೆಗೆ ನಯಾಪೈಸೆ ಸಾಲ ತೀರಿಸಬೇಡಿ’ ಎಂದು ರೈತರಿಗೆ ಕರೆ ಕೊಡುವ ನಿರ್ಣಯವನ್ನು ಈ ಸದನದಲ್ಲಿ ಮಂಡಿಸಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿಗೆ ಅವರು ಸಲಹೆ ನೀಡಿದರು.

‘ಎನ್‌ಪಿಎ ಪಾವತಿಸಬೇಕಾದವರು ರಾಜ್ಯಸಭೆ ಸದಸ್ಯರು. ಅವರೇ ಟಿ.ವಿ ಚಾನಲ್‌, ಪತ್ರಿಕೆ ನಡೆಸುತ್ತಾರೆ.  ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳನ್ನು ಮಾಡುವವರೂ ಅವರೇ, ಇಳಿಸುವವರೂ ಅವರೇ. ಈ ದೇಶದಿಂದ ಬ್ರಿಟಿಶರು ಹೊರಟು ಹೋದರೂ ಅವರ ಅಪ್ಪನಂತವರು ಈ ರೂಪದಲ್ಲಿ ಬಂದು ಕುಳಿತಿದ್ದಾರೆ’ ಎಂದು ಟೀಕಿಸಿದರು.

‘ಸಾಲಮನ್ನಾ  ವಿಷಯದಲ್ಲಿ ಸಮಸ್ಯೆಯ ಮೂಲಕ್ಕೆ ಹೋಗದೇ ರಾಜಕಾರಣ ಮಾತನಾಡಿದರೆ ಪ್ರಯೋಜನವಿಲ್ಲ. ರೈತ ಸಮೂಹವನ್ನು ಬಡಿದೆಬ್ಬಿಸಲು ಇಲ್ಲಿರುವವರಿಗೆ ಶಕ್ತಿ ಇದೆ. ರಾಜಕೀಯ ಬಿಟ್ಟು ಆ ಕೆಲಸ ಮಾಡೋಣ’ ಎಂದು ಕಿವಿಮಾತು ಹೇಳಿದರು.

‘ಪ್ರಾಥಮಿಕ ಸಹಕಾರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನಲ್ಲಿ ಮಾಡಿದ ₹3,000 ಸಾಲ ತೀರಿಸದೇ ಇದ್ದರೆ ನಮ್ಮ ಮನೆ ಮುಂದೆ ತಮಟೆ ಬಾರಿಸುತ್ತಾರೆ. ಆದರೆ, ಮಲ್ಯ ಅವರ ಮನೆ ಮುಂದೆ ಬ್ಯಾಂಡ್  ಬಾರಿಸುತ್ತಾರಾ’ ಎಂದು ರಮೇಶ ಕುಮಾರ್ ವ್ಯಂಗ್ಯವಾಡಿದರು.

‘ಸಣ್ಣ, ಮಧ್ಯಮ ರೈತರು ಸಾಲಕ್ಕಾಗಿ ಬ್ಯಾಂಕ್‌ಗೆ ಹೋದರೆ ನಗರ ಪ್ರದೇಶದ ಆಸ್ತಿಯನ್ನು ಅಡಮಾನ ಮಾಡಿ ಎನ್ನುತ್ತಾರೆ. ನಗರದಲ್ಲಿ ಆಸ್ತಿ ಇದ್ದರೆ ಕೃಷಿ ಸಾಲ ಕೇಳಲು ಯಾರು ಹೋಗುತ್ತಾರೆ. ಸಣ್ಣ ಭೂಮಿಗಾಗಿ ನಾವು ಜಗಳವಾಡಿಕೊಂಡು ನಿತ್ಯವೂ ಕೋರ್ಟ್‌ಗೆ ಅಲೆದಾಡುತ್ತೇವೆ. ಊರ್ಜಿತದಲ್ಲಿ ಇಲ್ಲದ ಆಸ್ತಿ ಅಡವಿಟ್ಟು ಸಾಲ ಪಡೆಯುವ ಶ್ರೀಮಂತರು ಮುಂಬೈನಲ್ಲಿ ಕುಳಿತುಕೊಂಡು ಚಿಯರ್ಸ್‌ ಹೇಳುತ್ತಾರೆ. ಇದು ನಮ್ಮ ದೇಶದ ಸ್ಥಿತಿ’ ಎಂದು ಅವರು ವಿವರಿಸಿದರು.

ಹಂದಿ ತುಟಿಗೆ ಲಿಪ್‌ಸ್ಟಿಕ್‌. . !
‘ಎನ್‌ಪಿಎ ಪಾವತಿಸಬೇಕಾದವರು ಹಂದಿಗಳಿದ್ದಂತೆ’ ಎಂದು ರಮೇಶ್‌ ಕುಮಾರ್‌ ಹೇಳಿದರು. ‘ಎನ್‌ಪಿಎ ಕುರಿತು ಮಾತನಾಡಿದ್ದ ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾದ ಗವರ್ನರ್ ಆಗಿದ್ದವರೊಬ್ಬರು ಹಂದಿ ತುಟಿಗೆ ಲಿಪ್‌ಸ್ಟಿಕ್ ಬಳಿದರೆ ಅದು ರಾಜಕುಮಾರಿಯಾಗುವುದಿಲ್ಲ ಎಂದು ಅದ್ಭುತವಾಗಿ ಹೇಳಿದ್ದರು’ ಎಂಬ ಮಾತನ್ನು ನೆನಪಿಸಿಕೊಂಡ ರಮೇಶ್‌ಕುಮಾರ್‌, ‘ಇಂತಹವರ ಸಾಲಮನ್ನಾ ಮಾಡುವುದೇ ಈಗಿನ ಅರ್ಥ ವ್ಯವಸ್ಥೆಯಾಗಿದೆ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.