ADVERTISEMENT

ಎನ್‌ಎಂಡಿಸಿಯಿಂದ ಶುಲ್ಕ: ಹೈಕೋರ್ಟ್ ಅಸ್ತು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 18:55 IST
Last Updated 9 ಸೆಪ್ಟೆಂಬರ್ 2011, 18:55 IST

ಬೆಂಗಳೂರು:  ಅರಣ್ಯ ಪ್ರದೇಶದಲ್ಲಿ ಅದಿರು ಗಣಿಗಾರಿಕೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಿಂದ (ಎನ್‌ಎಂಡಿಸಿ) ಶೇ 50ರಷ್ಟು ಅರಣ್ಯ ಅಭಿವೃದ್ಧಿ ಶುಲ್ಕ ವಸೂಲಿ ಮಾಡಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.

ಶುಲ್ಕ ವಸೂಲಿಗೆ ತಡೆ ನೀಡಿ 2010ರ ಜೂನ್‌ನಲ್ಲಿ ಹೊರಡಿಸಲಾಗಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ    ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ತೆರವುಗೊಳಿಸುವ ಮೂಲಕ ಈಗ ಸರ್ಕಾರದ ಹಾದಿ ಸುಗಮವಾಗಿದೆ.

ಶುಲ್ಕ ನೀಡುವಂತೆ ಸರ್ಕಾರ 2008ರಲ್ಲಿ ಎನ್‌ಎಂಡಿಸಿಗೆ ಆದೇಶಿಸಿತ್ತು. ಆದರೆ ಈ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆ ಇತ್ತು. ತಡೆ ತೆರವಿಗೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದ್ದಾರೆ.

ಈ ಆದೇಶದಿಂದಾಗಿ ಸರ್ಕಾರ ಸುಮಾರು 221 ಕೋಟಿ ರೂಪಾಯಿ ಶುಲ್ಕ ಪಡೆದುಕೊಳ್ಳಲು ಅರ್ಹವಾಗಿದೆ.
`ಇತರ ಮೈನಿಂಗ್ ಕಂಪೆನಿಗಳಿಂದ ಈಗಾಗಲೇ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೆ ಹೈಕೋರ್ಟ್‌ನಿಂದ ಇರುವ ತಡೆಯಾಜ್ಞೆಯಿಂದಾಗಿ ಸರ್ಕಾರಕ್ಕೆ ತೊಂದರೆ ಆಗುತ್ತಿದೆ~ ಎಂದು ಸರ್ಕಾರದ ಪರ ವಕೀಲ ರವೀಂದ್ರ ಕೊಲ್ಲೆ ಕೋರ್ಟ್ ಗಮನಕ್ಕೆ ತಂದರು. ಇದನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.

ಭದ್ರಾ ಪ್ರಕರಣ: ಆದೇಶದ ಪ್ರತಿ ಹಾಜರಿಗೆ ಸೂಚನೆ
 ಭದ್ರಾ ಮೇಲ್ದಂಡೆ ಗುತ್ತಿಗೆ ಕಾಮಗಾರಿಯ ಅವ್ಯವಹಾರದ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ 15ಕ್ಕೆ ಮುಂದೂಡಿದೆ.

ಇವರ ವಿರುದ್ಧ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಅವರು ದಾಖಲು ಮಾಡಿರುವ ಖಾಸಗಿ ದೂರಿನ ಅನ್ವಯ ಲೋಕಾಯುಕ್ತ ವಿಶೇಷ ಕೋರ್ಟ್ ನಡೆಸುತ್ತಿರುವ ವಿಚಾರಣೆಯ ಪ್ರಕರಣ ಇದಾಗಿದ್ದು, ಇದರ ರದ್ದತಿಗೆ ಯಡಿಯೂರಪ್ಪ ಕೋರಿದ್ದಾರೆ.

ಗುತ್ತಿಗೆ ಕಾಮಗಾರಿಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶದ ಅನ್ವಯವೇ ವಹಿಸಲಾಗಿದೆ. ಇದರಲ್ಲಿ ಯಡಿಯೂರಪ್ಪನವರು ಯಾವುದೇ ರೀತಿಯ ತಪ್ಪು ಎಸಗಿಲ್ಲ ಎಂದು ಅವರ ಪರ ವಕೀಲ ರವಿ ಬಿ. ನಾಯಕ್          ವಾದಿಸಿದರು.
 
ಈ ಹಿನ್ನೆಲೆಯಲ್ಲಿ ಸಂಬಂಧಿತ ಆದೇಶವನ್ನು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಪರಿಶೀಲಿಸಬಯಸಿದರು. ಆದುದರಿಂದ ಹಿಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಪಿ.ಡಿ.ದಿನಕರನ್ ನೇತೃತ್ವದ ವಿಭಾಗೀಯ ಪೀಠ ಹೊರಡಿಸಿದ್ದ ಆದೇಶದ ಪ್ರತಿಯನ್ನು ಹಾಜರುಪಡಿಸುವಂತೆ ಆದೇಶಿಸಿದ ಅವರು ವಿಚಾರಣೆ            ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.