ADVERTISEMENT

ಎಪಿಎಂಸಿಯಲ್ಲಿ ಕನಕ ಹತ್ತಿ ಬೀಜಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST
ಎಪಿಎಂಸಿಯಲ್ಲಿ ಕನಕ ಹತ್ತಿ ಬೀಜಗಳ ವಿತರಣೆ
ಎಪಿಎಂಸಿಯಲ್ಲಿ ಕನಕ ಹತ್ತಿ ಬೀಜಗಳ ವಿತರಣೆ   

ಹುಬ್ಬಳ್ಳಿ:ಕೆಲ ದಿನಗಳಿಂದ ಸ್ಥಗಿತವಾಗಿದ್ದ ಕನಕ ಹತ್ತಿ ಬೀಜ ವಿತರಣೆ ಎಪಿಎಂಸಿಯಲ್ಲಿ ಬುಧವಾರ ನಡೆಯಿತು. ರೈತರು ಸಾಲುಗಟ್ಟಿನಿಂತು ಬೀಜ ಖರೀದಿಸಿದರು.

ಕಳೆದವಾರ ಕಾಟನ್ ಮಾರ್ಕೆಟ್‌ನಲ್ಲಿರುವ ವ್ಯಾಪಾರಸ್ಥರ ಸಂಘದ ಆವರಣ ಹಾಗೂ ನೀಲಿಜನ್ ರಸ್ತೆಯ ಮಳಿಗೆಯೊಂದರಲ್ಲಿ ಕನಕ ಹತ್ತಿ ಬೀಜದ ವಿತರಣೆ ನಡೆದಿತ್ತು.ಆದರೆ ರೈತರ ಬೇಡಿಕೆಗೆ ತಕ್ಕಂತೆ ಬೀಜ ವಿತರಿಸಲು ಬೇಕಾದ ದಾಸ್ತಾನು ಇರಲಿಲ್ಲ. ಆದ್ದರಿಂದ ಕೃಷಿ ಇಲಾಖೆಯವರು ಮತ್ತೆ ಏಜೆನ್ಸಿಯವರಿಗೆ ಹತ್ತಿ ಬೀಜವನ್ನು ನೀಡುವಂತೆ ಕಂಪೆನಿಯನ್ನು ಕೇಳಿಕೊಂಡಿದ್ದರು. ಬೀಜ ಆಗಮಿಸಿದ ಹಿನ್ನೆಲೆಯಲ್ಲಿ ಬುಧವಾರ ಮತ್ತೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿತ್ತು. ಈ ಬಾರಿ ವಿತರಣೆಗೆ ಎಪಿಎಂಸಿ ಪ್ರಾಂಗಣವನ್ನು ಆರಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಕಲಘಟಗಿ ಹಾಗೂ ಕುಂದಗೋಳ ತಾಲ್ಲೂಕು ಕೇಂದ್ರಗಳಲ್ಲೂ ಕನಕ ಹತ್ತಿ ಬೀಜದ ವಿತರಣೆ ನಡೆದಿದ್ದು ಕಲಘಟಗಿಯಲ್ಲಿ ರಾಶಿ ಹತ್ತಿ ಬೀಜಕ್ಕೂ ರೈತರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅದನ್ನು ಕೂಡ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

`ಬುಧವಾರ ಜಿಲ್ಲೆಯಲ್ಲಿ ಒಟ್ಟು ಮೂರು ಸಾವಿರ ಪ್ಯಾಕೆಟ್‌ಗಳಷ್ಟು ಕನಕ ಹತ್ತಿ ಬೀಜವನ್ನು ವಿತರಿಸಲಾಗಿದೆ. 300 ಪ್ಯಾಕೆಟ್ ರಾಶಿ ಹತ್ತಿ ಬೀಜವನ್ನು ಕೂಡ ವಿತರಿಸಲಾಗಿದೆ~ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯಕ್ `ಪ್ರಜಾವಾಣಿ~ಗೆ ತಿಳಿಸಿದರು.

`ಕನಕ ಬೀಜಕ್ಕೆ ರೈತರು ಆದ್ಯತೆ ನೀಡುತ್ತಿದ್ದಾರೆ. ಹೀಗಾಗಿ ಗೊಂದಲ ಸೃಷ್ಟಿಯಾಗಿದೆ. ಕಾಳಸಂತೆಯಲ್ಲೂ ಮಾರಾಟ ಮಾಡುವ ಯತ್ನಕ್ಕೆ ಆಸ್ಪದ ಒದಗಿಸಿದೆ. ಆದರೆ ಕಲಘಟಗಿಯಲ್ಲಿ ರಾಶಿ ಬೀಜಕ್ಕೂ ಬೇಡಿಕೆ ಬಂದಿರುವುದು ವಿಶೇಷ. ಅಲ್ಲಿ 500 ಪ್ಯಾಕೆಟ್ ಬೀಜವನ್ನು ವಿತರಿಸಲಾಗಿದೆ. ಮೈಸೂರು, ದಾವಣಗೆರೆ ಮತ್ತಿತರ ಕಡೆ ಉಳಿದ ಬೀಜವನ್ನು ಕಂಪೆನಿ ಹುಬ್ಬಳ್ಳಿಗೆ ಸರಬರಾಜು ಮಾಡಿದೆ~ ಎಂದು ಅವರು ವಿವರಿಸಿದರು.

`ಕೃಷಿ ಇಲಾಖೆಯೇ ಮುಂದೆ ನಿಂತು ಬೀಜ ವಿತರಣೆಗೆ ವ್ಯವಸ್ಥೆ ಮಾಡಿದ್ದರಿಂದ ರೈತರಿಗೆ ಸರಿಯಾದ ಬೆಲೆಗೆ ಸರಿಯಾದ ಸಮಯದಲ್ಲಿ ಬೀಜ ಸಿಗುವಂತಾಗಿದೆ. ಬೇಡಿಕೆಯ ದುರ್ಲಾಭ ಪಡೆಯುವುದನ್ನು ತಡೆಯುವುದಕ್ಕೂ ಸಾಧ್ಯವಾಗಿದೆ~ ಎಂದು ಗಣೇಶ ನಾಯಕ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.