ADVERTISEMENT

ಎಪಿಎಂಸಿ: ಆವರ್ತಕ ನಿಧಿ 1000 ಕೋಟಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಬೆಂಗಳೂರು: ಕೃಷಿ ಮಾರುಕಟ್ಟೆಗಳಿಗೆ ಹೊಸ ಆಯಾಮ ನೀಡಲು ಮುಂದಾಗಿರುವ ಸರ್ಕಾರ, ಮಾರುಕಟ್ಟೆಯಲ್ಲಿ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದಾಗ ನೆರವು ಒದಗಿಸಲು ಆವರ್ತಕ ನಿಧಿಯ ಗಾತ್ರವನ್ನು 650 ಕೋಟಿ ರೂಪಾಯಿಗಳಿಂದ ಒಂದು ಸಾವಿರ ಕೋಟಿಗೆ ಹೆಚ್ಚಿಸಲು ನಿರ್ಧರಿಸಿದೆ.

ಖಾಸಗಿ ಮಾರುಕಟ್ಟೆಗಳು, ನೇರ ಖರೀದಿ ಕೇಂದ್ರಗಳು ಮತ್ತು ರೈತ ಗ್ರಾಹಕ ಮಾರುಕಟ್ಟೆಗಳನ್ನು ಸ್ಥಾಪಿಸಲು ಹಾಗೂ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಇ-ವ್ಯಾಪಾರ ಕೈಗೊಳ್ಳಲು ಒಪ್ಪಂದ ಕೃಷಿ ಮಾಡಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲು ಕೂಡ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಗುಲ್ಬರ್ಗ ಜಿಲ್ಲೆಯಲ್ಲಿ ತೊಗರಿ ಟೆಕ್ನಾಲಜಿ ಪಾರ್ಕ್, ರಾಣೆಬೆನ್ನೂರು ಮಾರುಕಟ್ಟೆ ಸಮಿತಿಯು ಹೊಂದಿರುವ 60 ಎಕರೆ ಜಾಗದಲ್ಲಿ ಮೆಕ್ಕೆಜೋಳದ ಟೆಕ್ನಾಲಜಿ ಪಾರ್ಕ್ ಮತ್ತು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ತೆಂಗು ಉತ್ಪನ್ನಗಳ ಸಂಶೋಧನೆ ಮತ್ತು ಅಭಿವೃದ್ಧಿ ಘಟಕ ಸೇರಿದಂತೆ ತೆಂಗಿನ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಶೇ 20ರಷ್ಟು ನೆರವು ನೀಡಲು ಸರ್ಕಾರ ತೀರ್ಮಾನಿಸಿದೆ.

ಇ-ಟೆಂಡರ್ ಮಾರಾಟ ಪದ್ಧತಿ: 2012-13ನೇ ಸಾಲಿನಲ್ಲಿ 11 ಪ್ರಮುಖ ಉತ್ಪನ್ನಗಳಿಗೆ 50 ಎಪಿಎಂಸಿ ಮಾರುಕಟ್ಟೆಗಳ ಮೂಲಕ ಇ-ಟೆಂಡರ್ ಮಾರಾಟ ಪದ್ಧತಿಯನ್ನು ಅಳವಡಿಸಲಾಗುವುದು. ಮೊದಲನೇ ಹಂತದಲ್ಲಿ 11 ಪ್ರಮುಖ ಉತ್ಪನ್ನಗಳಾದ ತೊಗರಿ, ಕೊಬ್ಬರಿ, ಅರಿಶಿನ, ಒಣಮೆಣಸಿನಕಾಯಿ, ಒಣ ದ್ರಾಕ್ಷಿ, ಅಕ್ಕಿ, ಅಡಿಕೆ, ಮೆಕ್ಕೆಜೋಳ, ಶೇಂಗಾ, ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲು ಸರ್ಕಾರ ತೀರ್ಮಾನಿಸಿದೆ.

ವರ್ಗೀಕರಣ: ಮೊದಲ ಹಂತದಲ್ಲಿ ರಾಯಚೂರು, ರಾಣೆಬೆನ್ನೂರು, ಬಾಗಲಕೋಟೆ, ಚಾಮರಾಜನಗರ, ಶಿಕಾರಿಪುರ ಮತ್ತು ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ವ್ಯವಹಾರ ಸಲಹೆಗಾರರ ಸಲಹೆ ಪಡೆದು ವಿನೂತನ ಉಗ್ರಾಣ, ಸ್ವಚ್ಛ ಹಾಗೂ ವರ್ಗೀಕರಣ ಮಾಡುವ ಉಪಕರಣಗಳು ಹಾಗೂ ಇನ್ನಿತರೆ ಮೌಲ್ಯವರ್ಧಿತ ಚಟುವಟಿಕೆಗಳನ್ನು ಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.