ADVERTISEMENT

ಎಲ್ಲ 224 ಕ್ಷೇತ್ರಗಳಲ್ಲಿ ಏಕಾಂಗಿ ಸ್ಪರ್ಧೆ– ಎಐಎಂಇಪಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ಬೆಂಗಳೂರು: ‘ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷ (ಆಲ್‌ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ– ಎಐಎಂಇಪಿ) ಸ್ಪರ್ಧಿಸಲಿದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ. ನೌಹೀರಾ ಶೇಖ್ ತಿಳಿಸಿದರು.

‘ರಾಷ್ಟ್ರೀಯ ಪಕ್ಷಗಳ ಕೆಲವರು ಹೊಂದಾಣಿಕೆಗಾಗಿ ನಮ್ಮನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಪಕ್ಷ ಸ್ಪರ್ಧಿಸಲಿದೆ. ನ್ಯಾಯ ಮತ್ತು ಮಾನವೀಯತೆ ಧ್ಯೇಯದೊಂದಿಗೆ, ಭ್ರಷ್ಟಾಚಾರ ಮುಕ್ತ ಆಡಳಿತ ರಾಜ್ಯಕ್ಕೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪಕ್ಷ ಕೆಲಸ ಮಾಡಲಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

‘ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನಾನು ಮಹಿಳೆಯರನ್ನು ಸದೃಢರನ್ನಾಗಿಸುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದೇನೆ. ಹಾಗೆಂದು ಮಹಿಳೆಯರಿಗಷ್ಟೆ ಟಿಕೆಟ್‌ ಮೀಸಲಿಡುವುದಿಲ್ಲ. ಶೇ 40ರಷ್ಟು ಸ್ಥಾನಗಳಲ್ಲಿ ಮಾತ್ರ ಮಹಿಳೆಯರು ಸ್ಪರ್ಧಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಈಗಾಗಲೇ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದೇನೆ. ಚುನಾವಣೆಗೆ ಇನ್ನೂ ಎರಡು ತಿಂಗಳು ಇದೆ. ಅಷ್ಟರೊಳಗೆ ಉಳಿದ 17 ಜಿಲ್ಲೆಗಳಲ್ಲೂ ಸುತ್ತಾಡುತ್ತೇನೆ. ಚುನಾವಣಾ ನೀತಿಸಂಹಿತೆ ಘೋಷಣೆಯಾದ ಬಳಿಕ ಪಕ್ಷದ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು’ ಎಂದರು.

‘ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಾನೂ ಸಮೀಕ್ಷೆ ಮಾಡಿಸಿದ್ದೇನೆ. ಎಐಎಂಇಪಿ ಪರ ಬೆಂಬಲ ವ್ಯಕ್ತವಾಗಿದೆ. ಕೆಲವು ಸರ್ವೆಗಳು ನಮ್ಮ ಪಕ್ಷಕ್ಕೆ 30– 40 ಸ್ಥಾನ ಸಿಗಬಹುದು ಎಂದು ಭವಿಷ್ಯ ನುಡಿದಿವೆ. ಆದರೆ, 150 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ನನಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.