ADVERTISEMENT

ಎಸಿಬಿ– ಸರ್ಕಾರದ ನಿಲುವೇನು: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:30 IST
Last Updated 28 ಮೇ 2018, 19:30 IST
ಎಸಿಬಿ– ಸರ್ಕಾರದ ನಿಲುವೇನು: ಹೈಕೋರ್ಟ್‌
ಎಸಿಬಿ– ಸರ್ಕಾರದ ನಿಲುವೇನು: ಹೈಕೋರ್ಟ್‌   

ಬೆಂಗಳೂರು: ‘ಭ್ರಷ್ಟಾಚಾರ ನಿಗ್ರಹ‌ ದಳ (ಎಸಿಬಿ) ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ಜಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್‌) ಕುರಿತಂತೆ ಹೊಸ ಸರ್ಕಾರದ ನಿಲುವು ಏನು ಎಂಬುದನ್ನು ತಿಳಿಸಿ’ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರಿಗೆ ಹೈಕೋರ್ಟ್ ಸೂಚಿಸಿದೆ.

ಎಸಿಬಿ ರಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ‌ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ‌ ನಡೆಸಿತು.

ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿಗಳು ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರಿಗೆ, ‘ಹೊಸ ಸರ್ಕಾರ ಬಂದಿದೆಯೆಲ್ಲಾ, ಎಸಿಬಿ ವ್ಯವಸ್ಥೆಯಲ್ಲಿ ಏನಾದ್ರೂ ಬದಲಾವಣೆ ಇದೆಯಾ’ ಎಂದು ಪ್ರಶ್ನಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಪೊನ್ನಣ್ಣ, ’ನಾನಿನ್ನೂ ಈ ಕುರಿತಂತೆ ಹೊಸ ಸರ್ಕಾರದ ಜೊತೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಆದ್ದರಿಂದ ಒಂದಷ್ಟು ಕಾಲಾವಕಾಶ ನೀಡಿದರೆ ಚರ್ಚಿಸಿ ಕೋರ್ಟ್‌ಗೆ ಸರ್ಕಾರದ ನಿಲುವು ತಿಳಿಸುತ್ತೇನೆ’ ಎಂದರು.

ಇದಕ್ಕೆ ನ್ಯಾಯಪೀಠ, ‘ಜೂನ್‌ 1ರವರೆಗೆ ನಿಮಗೆ ಸಮಯ ಕೊಡುತ್ತೇನೆ. ಅಷ್ಟರಲ್ಲಿ ಸರ್ಕಾರದ ಸ್ಪಷ್ಟ ನಿಲುವು ತಿಳಿಸಿ. ಇಲ್ಲವಾದರೆ ಅರ್ಜಿ ವಿಚಾರಣೆ ಪೂರೈಸಿ ಆದೇಶ ಕಾಯ್ದಿರಿಸಲಾಗುವುದು’ ಎಂದು ತಿಳಿಸಿತು.

ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಲಾಗಿದೆ.

‘ಎಸಿಬಿ ರಚನೆ ಮಾಡಿರುವುದು ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ವಿರುದ್ಧವಾಗಿದೆ. ಆದ್ದರಿಂದ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ಪುನಃ ಲೋಕಾಯುಕ್ತಕ್ಕೆ ವರ್ಗಾಯಿಸಬೇಕು’ ಎಂದು ಕೋರಿ ಸಮಾಜ ಪರಿವರ್ತನಾ ಸಮುದಾಯ, ಬೆಂಗಳೂರು ವಕೀಲರ ಸಂಘ ಪಿಐಎಲ್‌ ಸಲ್ಲಿಸಿವೆ. ಅಂತೆಯೇ ಎಸಿಬಿ ದಾಖಲಿಸಿರುವ ಎಫ್‌ಐಆರ್‌ಗಳನ್ನು ಪ್ರಶ್ನಿಸಿದ ಅರ್ಜಿಗಳನ್ನೂ ಇದೇ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.