ADVERTISEMENT

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಆರು ವರ್ಷಗಳಲ್ಲಿ ಉತ್ತಮ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 19:30 IST
Last Updated 13 ಜುಲೈ 2017, 19:30 IST
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಆರು ವರ್ಷಗಳಲ್ಲಿ ಉತ್ತಮ ಫಲಿತಾಂಶ
ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ: ಆರು ವರ್ಷಗಳಲ್ಲಿ ಉತ್ತಮ ಫಲಿತಾಂಶ   

ಬೆಂಗಳೂರು:  ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಶೇ 50.81 ರಷ್ಟು ಫಲಿತಾಂಶ ಬಂದಿದ್ದು, ಇದು ಕಳೆದ ಆರು ವರ್ಷಗಳಲ್ಲಿಯೇ ಅತ್ಯಧಿಕ.

ಕಳೆದ ಜೂನ್‌ 15ರಿಂದ 22ರವರೆಗೆ ನಡೆಸಲಾದ ಪರೀಕ್ಷೆಯಲ್ಲಿ 2,42,951 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 1,23,443 ವಿದ್ಯಾರ್ಥಿಗಳು  ಪಾಸಾಗಿದ್ದಾರೆ. ಫಲಿತಾಂಶವನ್ನು ರಾಜ್ಯದ ಎಲ್ಲ ಪ್ರೌಢ ಶಾಲೆಗಳಲ್ಲಿ ಶುಕ್ರವಾರ ಮಧ್ಯಾಹ್ನ 12ರಿಂದ ಪ್ರಕಟಿಸಲಾಗುತ್ತದೆ.

ಜಿಲ್ಲಾವಾರು ಫಲಿತಾಂಶದಲ್ಲಿ ವಿಜಯಪುರ (ಶೇ76.23) ಪ್ರಥಮ, ಚಿಕ್ಕೋಡಿ (ಶೇ 74.68) ದ್ವಿತೀಯ, ಬೆಳಗಾವಿ (ಶೇ 73.19) ತೃತೀಯ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ (ಶೇ 27.61) ಕೊನೆ ಸ್ಥಾನದಲ್ಲಿದೆ.

ADVERTISEMENT

ಉತ್ತಮ ಫಲಿತಾಂಶ: ‘ಈ ಬಾರಿ ಪರೀಕ್ಷೆಯಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಯಾವುದೇ ಅಕ್ರಮಗಳಿಗೂ ಅವಕಾಶ ಇರಲಿಲ್ಲ. ಓದಿದರೆ ಮಾತ್ರ ಪರೀಕ್ಷೆಯಲ್ಲಿ ಪಾಸಾಗಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಮನವರಿಕೆ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಸಾಗಿದ್ದಾರೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪೂರಕ ಪರೀಕ್ಷೆಯಲ್ಲೂ ಫೇಲಾದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಪುನಃ ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸಿದಲ್ಲಿ ಹತ್ತನೇ ತರಗತಿಗೆ ಮರು ಪ್ರವೇಶ ಪಡೆಯಲು ಅವಕಾಶ ಇದೆ ಎಂದು ಸಚಿವರು ಹೇಳಿದರು.

ಡಿ.ಸಿ ನೇತೃತ್ವದಲ್ಲಿ ‘ಡೇರಾ’: ಶುಲ್ಕ ಹೆಚ್ಚಳ ಸೇರಿದಂತೆ ಶಾಲೆಗಳಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (ಡೇರಾ) ರಚಿಸಲಾಗಿದ್ದು, ಅದನ್ನು ಮತ್ತಷ್ಟು ಬಲವರ್ಧನೆ ಮಾಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ಆಯುಕ್ತರಿಗೆ ಜಿಲ್ಲಾವಾರು ಶಿಕ್ಷಣ ಅದಾಲತ್ ಮಾಡುವಂತೆ ಸೂಚಿಸಲಾಗಿದೆ ಎಂದು ಸೇಠ್ ತಿಳಿಸಿದರು.

ಶಿಕ್ಷಕರ ವರ್ಗಾವಣೆಗೆ ವಾರದಲ್ಲಿ ವೇಳಾಪಟ್ಟಿ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಇನ್ನೊಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ತನ್ವೀರ್ ಸೇಠ್‌ ಹೇಳಿದರು.

ವರ್ಗಾವಣೆ ಮಿತಿಯನ್ನು ಶೇ 8ರಿಂದ 15ಕ್ಕೆ ಹೆಚ್ಚಿಸಲಾಗಿದೆ. ತಿದ್ದುಪಡಿ ಕಾಯ್ದೆಗೆ ನಿಯಮಗಳ ರಚನೆಯಾಗಿದ್ದು ಮುಂದಿನ ವಾರ ಪ್ರಕಟಿಸಲಾಗುವುದು. ಅಧಿಸೂಚನೆ ಹೊರಡಿಸಿದ ತಿಂಗಳೊಳಗೆ ವರ್ಗಾವಣೆ  ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.

ಶಿಕ್ಷಕರ ನೇಮಕಕ್ಕೆ ಅಧಿಸೂಚನೆ:ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 10,000 ಶಿಕ್ಷಕರ ನೇಮಕಕ್ಕೆ ಜುಲೈ 20ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದೂ ಸಚಿವರು ಹೇಳಿದರು.

ಪಿಯುಸಿಗೆ ಪ್ರವೇಶ
‘ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾದ ಏಳು ದಿನದೊಳಗೆ ಯಾವುದೇ ದಂಡ ಶುಲ್ಕ ಇಲ್ಲದೆ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಪಿಯುಸಿ ತರಗತಿಗಳಿಗೆ ಪ್ರವೇಶ ಪಡೆಯಬಹುದು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶವನ್ನೂ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಇದರಲ್ಲಿ ಪಾಸಾದ ವಿದ್ಯಾರ್ಥಿಗಳಿಗೂ ಸಿಇಟಿ ಮೂಲಕ ವೃತ್ತಿಪರ ಕೋರ್ಸ್‌ಗಳಿಗೆ ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ’ ಎಂದು ಸಚಿವ ತನ್ವೀರ್ ಸೇಠ್ ಹೇಳಿದರು.

ನಕಲು ಪ್ರತಿ ಮತ್ತು ಮರು ಎಣಿಕೆಗೆ ಅರ್ಜಿ: ಉತ್ತರ ಪತ್ರಿಕೆಯ ನಕಲು ಪ್ರತಿ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಇದೇ 24 ಕೊನೆಯ ದಿನ. ನಕಲು ಪ್ರತಿಗೆ ಒಂದು ವಿಷಯಕ್ಕೆ ₹ 300 ಮತ್ತು ಮರು ಎಣಿಕೆಗೆ ₹ 150 ನಿಗದಿ ಮಾಡಲಾಗಿದೆ. ಮರು ಮೌಲ್ಯಮಾಪನಕ್ಕೆ ಫಲಿತಾಂಶ ಪ್ರಕಟವಾದ 7 ದಿನದೊಳಗೆ ಅರ್ಜಿ ಸಲ್ಲಿಸಬೇಕು. ಪ್ರತಿ ವಿಷಯಕ್ಕೆ ₹ 700 ನಿಗದಿ ಮಾಡಲಾಗಿದೆ. ಮೊಬೈಲ್ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್‌ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.

5, 7ನೇ ತರಗತಿಗೆ ವಾರ್ಷಿಕ ಪರೀಕ್ಷೆ

ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಈ ವರ್ಷ 5 ಮತ್ತು 7ನೇ ತರಗತಿಗೂ ವಾರ್ಷಿಕ ಪರೀಕ್ಷೆ ನಡೆಸಲಾಗುವುದು ಎಂದು ತನ್ವೀರ್ ಸೇಠ್‌ ಹೇಳಿದರು.

ಕಳೆದ ಶೈಕ್ಷಣಿಕ ವರ್ಷ 4 ಮತ್ತು 6ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗಿತ್ತು. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆಎಸ್‌ಕ್ಯೂಎಎಸಿ) 4ರಿಂದ 7ನೇ ತರಗತಿವರೆಗೆ ಸಮಗ್ರ ಮೌಲ್ಯಾಂಕನ ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದರು.

ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಅಂತರ ತಾಲ್ಲೂಕು ಮಟ್ಟದಲ್ಲಿ ನಡೆಯುತ್ತದೆ. ಅನುತ್ತೀರ್ಣ ಆಗುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನೀಡಲಾಗುವುದು. ಶಿಕ್ಷಕರ ಬೋಧನಾ ಮಟ್ಟ ಅಳೆಯುವುದಕ್ಕೂ ಇದು ಸಹಕಾರಿ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.