ADVERTISEMENT

ಎಸ್ಕಾಂ ನೌಕರರ ವೇತನ ಶೇ 26 ರಷ್ಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:34 IST
Last Updated 3 ಮಾರ್ಚ್ 2018, 19:34 IST
ಎಸ್ಕಾಂ ನೌಕರರ ವೇತನ ಶೇ 26 ರಷ್ಟು ಹೆಚ್ಚಳ
ಎಸ್ಕಾಂ ನೌಕರರ ವೇತನ ಶೇ 26 ರಷ್ಟು ಹೆಚ್ಚಳ   

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳ(ಎಸ್ಕಾಂ) ನೌಕರರಿಗೆ ಶೇ 26ರಷ್ಟು ವೇತನ ಹೆಚ್ಚಿಸುವ ಸಂಬಂಧ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಜೊತೆ ಶನಿವಾರ ಒಪ್ಪಂದ ಏರ್ಪಟ್ಟಿದೆ.

ವಿಧಾನಸೌಧದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕೆಪಿಟಿಸಿಎಲ್‌ ಮತ್ತು ಎಸ್ಕಾಂ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಕುಮಾರ್, ಶೇ 38ರಷ್ಟು ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಕಂಪನಿಗಳ ಮೇಲಿನ ಹೊರೆ ಹೆಚ್ಚಾಗಬಾರದು ಎಂಬ ಕಾರಣದಿಂದ ಶೇ. 26ರಷ್ಟು ಹೆಚ್ಚಳ ಮಾಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ADVERTISEMENT

2017ರ ಏಪ್ರಿಲ್ 1ರಿಂದ ಪೂರ್ವಾನ್ವಯ ಆಗುವಂತೆ ವೇತನ ಹೆಚ್ಚಳವಾಗಲಿದ್ದು, ಇದರ ಲಾಭ 59,270 ನೌಕರರು ಮತ್ತು 37,966 ಪಿಂಚಣಿದಾರರಿಗೆ ದೊರಕಲಿದೆ. ಇದರಿಂದಾಗಿ ಎಸ್ಕಾಂಗಳಿಗೆ ₹ 844 ಕೋಟಿ ಹೊರೆಯಾಗಲಿದೆ ಎಂದು ಸಚಿವರು ವಿವರಿಸಿದರು.

ವೇತನ ಪರಿಷ್ಕರಣೆಯಿಂದ ಆಗುವ ಹೊರೆ ಬಗ್ಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಗಮನಕ್ಕೆ ತರಲಾಗುವುದು ಎಂದೂ ಹೇಳಿದರು.

ಐದು ಎಸ್ಕಾಂಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡಲಾಗುತ್ತಿದೆ. ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವೆ ಖಾಯಂಗೊಳಿಸಲು ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದೂ ಶಿವಕುಮಾರ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.