ADVERTISEMENT

ಏಕಪಕ್ಷೀಯ ತೀರ್ಮಾನ ಬೇಡ

ಕಾವೇರಿ ಅಧಿಸೂಚನೆ: ಪ್ರಧಾನಿಗೆ ಶೆಟ್ಟರ್ ಮೊರೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಬೆಂಗಳೂರು: ಕಾವೇರಿ ನ್ಯಾಯ ಮಂಡಳಿಯ ಐತೀರ್ಪು ಜಾರಿಗೆ ಅಧಿಸೂಚನೆ ಹೊರಡಿಸುವ ಸಂಬಂಧ ಕೇಂದ್ರ ಸರ್ಕಾರ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಕೋರಿದ್ದಾರೆ.

ಸಿಂಗ್ ಅವರಿಗೆ ಸೋಮವಾರ ಈ ಸಂಬಂಧ ಪತ್ರ ಬರೆದಿರುವ   ಶೆಟ್ಟರ್, ಕಾವೇರಿ ನದಿ ನೀರಿನ ಉಪಯೋಗ ಪಡೆಯುವ ರಾಜ್ಯಗಳ ಅಭಿಪ್ರಾಯ ಪಡೆಯದೆ ಯಾವುದೇ ರೀತಿಯ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕಾವೇರಿ ನ್ಯಾಯ ಮಂಡಳಿ 2007ರ ಫೆಬ್ರುವರಿ 5ರಂದು ಐತೀರ್ಪು ನೀಡಿದೆ. ಆದರೆ, ಅದನ್ನು ಪ್ರಶ್ನಿಸಿ ಸಂಬಂಧಪಟ್ಟ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿವೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವ ಮೊದಲೇ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು  ಪತ್ರದಲ್ಲಿ ಹೇಳಿದ್ದಾರೆ.

ಇದೇ 15ರಂದು ನಡೆದ ವಿಧಾನಮಂಡಲದ ಉಭಯ ಸದನಗಳ ನಾಯಕರು ಮತ್ತು ಕಾವೇರಿ ಜಲಾನಯನ ಪ್ರದೇಶದ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ, ಪ್ರಧಾನಿ ಬಳಿಗೆ ಸರ್ವಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋಗುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ತಮ್ಮ ಭೇಟಿಗೆ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.

ಪ್ರಧಾನಿ ಭೇಟಿಗೆ ಕಾಲಾವಕಾಶ ಕೋರಿ ಕರ್ನಾಟಕ ಭವನದ ಸ್ಥಾನಿಕ ಆಯುಕ್ತರು ಈಗಾಗಲೇ ತಮ್ಮ ಕಚೇರಿಗೆ ಪತ್ರ ಬರೆದಿದ್ದಾರೆ. ಸಮಸ್ಯೆಯ ಮಹತ್ವವನ್ನು ಅರ್ಥಮಾಡಿಕೊಂಡು ಆದಷ್ಟು ಬೇಗ ಭೇಟಿಗೆ ಸಮಯ ನಿಗದಿ ಮಾಡಬೇಕು. ಸಂಬಂಧಪಟ್ಟ ರಾಜ್ಯಗಳ ಅಭಿಪ್ರಾಯವನ್ನು ಪಡೆಯದೆ ಅಧಿಸೂಚನೆ ಹೊರಡಿಸಬಾರದು ಎಂದು ಆಗ್ರಹಿಸಿದ್ದಾರೆ.

ಅಭಿಪ್ರಾಯ: ಕಾವೇರಿ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಐತೀರ್ಪು ಅಧಿಸೂಚನೆ ಪ್ರಕಟಣೆ ಸಾಧ್ಯವಿಲ್ಲ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆ ಬಹಳ ಹಿಂದೆಯೇ ತನ್ನ ಅಭಿಪ್ರಾಯವನ್ನು ತಿಳಿಸಿದೆ. ಈ ಬಾರಿಯೂ ಅದೇ ರೀತಿಯ ಅಭಿಪ್ರಾಯ ನೀಡುವ ವಿಶ್ವಾಸವಿದೆ ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.