ADVERTISEMENT

ಐಎಎಸ್‌ಗೆ ಬಡ್ತಿ: ಪ್ರಕ್ರಿಯೆಗೆ ತಡೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 18:15 IST
Last Updated 1 ಫೆಬ್ರುವರಿ 2011, 18:15 IST

ಬೆಂಗಳೂರು: ಕೆ.ಎ.ಎಸ್.ಯೇತರ ಅಧಿಕಾರಿಗಳಿಗೆ ಐ.ಎ.ಎಸ್‌ಗೆ ಬಡ್ತಿ ನೀಡುವ ಸಂಬಂಧದ ಆಯ್ಕೆ ಪ್ರಕ್ರಿಯೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿಯ ಬೆಂಗಳೂರು ಘಟಕ ಮಂಗಳವಾರ ತಡೆ ನೀಡಿ ಆದೇಶಿಸಿದೆ.

ಖಾಲಿ ಇರುವ ಮೂರು ಸ್ಥಾನಗಳಿಗೆ 1:5ರ ಅನುಪಾತದಲ್ಲಿ 15 ಮಂದಿ ಅಧಿಕಾರಿಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿತ್ತು. ಇದು ಅರ್ಹತೆಯ ಆಧಾರದ ಮೇಲೆ ಸಿದ್ಧಗೊಂಡಿಲ್ಲ ಎಂದು ಆಕಾಂಕ್ಷಿಗಳಾದ ಸಾರಿಗೆ ಇಲಾಖೆಯ ರಿಚರ್ಡ್ ಡಿಸೋಜಾ ಮತ್ತು  ಗ್ರಾಮೀಣಾಭಿವೃದ್ಧಿ ಇಲಾಖೆಯ ಡಾ. ಕೆ.ಎನ್.ವಿಜಯ್ ಪ್ರಕಾಶ್ ಅವರು ನ್ಯಾಯಮಂಡಳಿ ಮುಂದೆ  ಅರ್ಜಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ನ್ಯಾಯಮಂಡಳಿ ಇದೇ 17ರವರೆಗೆ ನೇಮಕ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.

ಗ್ರೂಪ್-ಎ ಕಿರಿಯ ವೃಂದದಲ್ಲಿ ಕನಿಷ್ಠ ಎಂಟು ವರ್ಷ ಸೇವೆ ಸಲ್ಲಿಸಿದ ಹಾಗೂ 54 ವರ್ಷದೊಳಗಿನ ಅಧಿಕಾರಿಗಳು ಐಎಎಸ್‌ಗೆ  ಬಡ್ತಿ ಪಡೆಯಲು ಅರ್ಹರು. ಇಂತಹ ವಿವಿಧ ಇಲಾಖೆಗಳ 15 ಮಂದಿ ಅಧಿಕಾರಿಗಳನ್ನು ಸರ್ಕಾರ ಪಟ್ಟಿ ಮಾಡಿದ್ದು, ಅದು ಸರಿ ಇಲ್ಲ ಎನ್ನುವುದು ಅರ್ಜಿದಾರರ ವಾದ.

ನಿಯಮದ ಪ್ರಕಾರ ಒಂದು ಇಲಾಖೆಯಿಂದ ಗರಿಷ್ಠ ಮೂರು ಮಂದಿಯನ್ನು ಅರ್ಹರ ಪಟ್ಟಿಗೆ ಸೇರಿಸಬಹುದು. ಆದರೆ, ಈ ಪಟ್ಟಿ ಸಿದ್ಧಪಡಿಸುವಾಗ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದರಿಂದಲೇ ಐದು ಮಂದಿಯನ್ನು ಸೇರಿಸಲಾಗಿದೆ. ವಿಜಯ್‌ಪ್ರಕಾಶ್, ವಿ.ಪಿ.ಇಕ್ಕೇರಿ, ಗುತ್ತಿ ಜಂಬುನಾಥ್, ಡಾ.ಜಿ.ಸಿ.ಪ್ರಕಾಶ್, ಎನ್.ಎಸ್.ಪ್ರಸನ್ನಕುಮಾರ್ ಇವರೆಲ್ಲರೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳು. ಇದರಲ್ಲಿ ಅನರ್ಹರು ಕೂಡ ಸೇರಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ನೇಮಕಾತಿ ಕುರಿತು ಕೇಂದ್ರ ಲೋಕಸೇವಾ ಆಯೋಗ ಡಿಸೆಂಬರ್ 28ರಂದು ಸಂದರ್ಶನ ನಡೆಸಿದೆ. ಮೇಲಿನ ಐವರು ಅಧಿಕಾರಿಗಳಲ್ಲದೆ, ವಾರ್ತಾ ಇಲಾಖೆಯಿಂದ ಎನ್.ಆರ್.ವಿಶುಕುಮಾರ್, ಎನ್.ಭೃಂಗೇಶ್, ಸಾರಿಗೆ  ಇಲಾಖೆಯಿಂದ ಆರ್.ಮುನಿವೀರೇಗೌಡ, ಕೈಗಾರಿಕೆ ಇಲಾಖೆಯಿಂದ ಎಚ್.ಎಲ್.ಶಿವಾನಂದ,  ಸಿ.ವೀರಭದ್ರಯ್ಯ, ಎಚ್.ವಿ. ರಘುರಾಮ್, ಸಹಕಾರ ಇಲಾಖೆಯಿಂದ ಬಿ.ಇ.ಗೋವಿಂದರಾಜು, ವಾಣಿಜ್ಯ ತೆರಿಗೆ ಇಲಾಖೆಯಿಂದ ಎಚ್.ಡಿ.ಅರುಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯಿಂದ ಎಂ.ರಾಮಯ್ಯ ಅವರು ಸಂದರ್ಶನಕ್ಕೆ ಹಾಜರಾಗಿದ್ದರು. ಇವರಲ್ಲದೆ, ಕೋರ್ಟ್‌ನ ಮಧ್ಯಂತರ ಆದೇಶ ತಂದು ಮತ್ತಿಬ್ಬರು ಅಧಿಕಾರಿಗಳು ಸಂದರ್ಶನಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.