ಬೆಂಗಳೂರು: ಐಎಎಸ್, ಐಪಿಎಸ್ ಅಧಿಕಾರಿಗಳು ಸದಸ್ಯರಾಗಿರುವ ‘ದಿ ಮೆಟ್ರೊಪಾಲಿಟನ್ ಹೌಸಿಂಗ್ ಕೋ–ಆಪರೇಟಿವ್ ಸೊಸೈಟಿ’ ನಿರ್ಮಿಸಿರುವ ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ನಿವೇಶನ, ರಸ್ತೆ, ಉದ್ಯಾನ ನಿರ್ಮಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ 2015ರ ಮಾರ್ಚ್ 5ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಯುಕ್ತರಿಗೆ ಪತ್ರ ಬರೆದಿದ್ದ ಸ್ಥಳೀಯ ಶಾಸಕ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ‘ಮೆಟ್ರೊಪಾಲಿಟನ್ ಸೊಸೈಟಿಗೆ ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆ ಮಾಡಿದ ಜಮೀನಿನಲ್ಲಿ ರಾಜಕಾಲುವೆ ಇತ್ತು. ಸೊಸೈಟಿಯವರು ನಿವೇಶನ ನಿರ್ಮಿಸುವಾಗ ರಾಜಕಾಲುವೆ ಮುಚ್ಚಿ ರಸ್ತೆ, ಉದ್ಯಾನ ನಿರ್ಮಿಸಿದ್ದಾರೆ. ಜಮೀನಿನಲ್ಲಿರುವ ರಾಜಕಾಲುವೆ ಉಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದ್ದರು.
ಸಚಿವರ ಪತ್ರ ಆಧರಿಸಿ, ದಾಖಲೆ ಪರಿಶೀಲಿಸಿದ್ದ ಬಿಡಿಎ, 2015ರ ಸೆಪ್ಟೆಂಬರ್ 4ರಂದು ದಿ ಮೆಟ್ರೊಪಾಲಿಟನ್ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಪತ್ರ ಬರೆದಿತ್ತು.
ಈ ಪತ್ರದಲ್ಲಿ, ‘ಸೊಸೈಟಿ ಸಲ್ಲಿಸಿದ್ದ ಬಡಾವಣೆ ವಿನ್ಯಾಸ(ಲೇಔಟ್ ಪ್ಲಾನ್)ನಲ್ಲಿ ಸರ್ವೆ ನಂ 93ಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ರಾಜಕಾಲುವೆ ಮಾರ್ಗದಲ್ಲಿ 12.09 ಮೀಟರ್ ಅಗಲದ ರಸ್ತೆ ಎಂದು ನಮೂದಿಸಲಾಗಿತ್ತು. ಸರ್ವೆ ನಂ 94/3ರಲ್ಲಿ 15.14 ಮೀಟರ್ ಅಗಲದ ರಸ್ತೆ ನಮೂದಾಗಿತ್ತು. ಈ ಪೈಕಿ ಸರ್ವೆ ನಂ.94/5ರ ಬರುವ ರಸ್ತೆ ಪ್ರದೇಶವನ್ನು ಮಾತ್ರ ಬಿಡಿಎಯು ಸ್ವಾಧೀನಕ್ಕೆ ಪಡೆದಿತ್ತು. ಸೊಸೈಟಿ ವಶದಲ್ಲಿರುವ ಸರ್ವೆ ನ. 94/5ರ ಪ್ರದೇಶದಲ್ಲಿ ಮಾತ್ರ ರಸ್ತೆ ನಿರ್ಮಿಸಿಕೊಳ್ಳಬೇಕು. ಬಿಡಿಎ ಅನುಮೋದಿಸಿರುವ ವಿನ್ಯಾಸ ನಕ್ಷೆ ಮತ್ತು ಕಂದಾಯ ಇಲಾಖೆಯ ಮೂಲ ದಾಖಲೆಯಲ್ಲಿ ಇದ್ದಂತೆ ರಾಜಕಾಲುವೆಯನ್ನು ಯಥಾಸ್ಥಿತಿ ಉಳಿಸಿಕೊಳ್ಳಬೇಕು’ ಎಂದು ಸೂಚಿಸಲಾಗಿತ್ತು.
ಬಿಡಿಎ ಪತ್ರ ಬರೆದು 11ತಿಂಗಳ ಬಳಿಕ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ, ರಾಜಕಾಲುವೆ ಮಾರ್ಗದಲ್ಲಿ ಡಾಂಬರು ರಸ್ತೆ, ಗಿಡಗಂಟಿ ಬೆಳೆದ ನಿವೇಶನ, ಉದ್ಯಾನದ ಜಾಗವನ್ನು ಹಾಗೆಯೇ ಉಳಿಸಿಕೊಂಡಿರುವುದು ಕಂಡು ಬಂತು.
ಒತ್ತುವರಿ ಎಲ್ಲಿ?: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ಬಡಾವಣೆಯಲ್ಲಿ 22.19 ಎಕರೆ ಜಾಗವನ್ನು ಮೆಟ್ರೊಪಾಲಿಟನ್ ಸೊಸೈಟಿ, ಸಗಟು ಹಂಚಿಕೆ ಮಾಡುವಂತೆ ಕೋರಿತ್ತು. ಜಕ್ಕೂರು ಗ್ರಾಮದ ಸರ್ವೆ ನಂ. 91ರಿಂದ 94/6ಎ ವರೆಗಿನ ಹತ್ತು ಸರ್ವೆ ನಂ.ಗಳಲ್ಲಿ ಸೊಸೈಟಿಗೆ ಸಗಟು ಭೂಮಿ ಹಂಚಿಕೆ ಮಾಡಿ 2007ರಲ್ಲಿ ಬಿಡಿಎ ಪತ್ರ ನೀಡಿತ್ತು.
ಜಕ್ಕೂರು ಪ್ಲಾಂಟೇಶನ್ ಎಂದು ಕರೆಯಲಾಗುತ್ತಿದ್ದ ಈ ಪ್ರದೇಶ ದೊಡ್ಡ ನಗರವಾಗಿ ಬೆಳೆದಿದೆ. ಅದರ ಜತೆ 100 ಎಕರೆ ವಿಸ್ತೀರ್ಣದಲ್ಲಿರುವ ಜಕ್ಕೂರು ವಿಮಾನ ಚಾಲನಾ ತರಬೇತಿ ಕೇಂದ್ರ(ಏರೋಡ್ರಂ)ದ ಆಸುಪಾಸು ಬೀಳುವ ಮಳೆನೀರು ಹರಿದು ಹೋಗುವ ರಾಜಕಾಲುವೆ ಇತ್ತು. ಈ ಕಾಲುವೆ ಮೂಲಕ ಹರಿವ ನೀರು ದಾಸರಹಳ್ಳಿ ಕೆರೆಗೆ ಸೇರುತ್ತಿತ್ತು.
ಮೆಟ್ರೊಪಾಲಿಟನ್ ಸೊಸೈಟಿಯವರು ಬಡಾವಣೆ ನಿರ್ಮಿಸುವಾಗ ಜಕ್ಕೂರು ಗ್ರಾಮದಿಂದ ಹೆಗಡೆ ನಗರದ ರಸ್ತೆಗೆ ಸೇರುವವರೆಗೆ ಇದ್ದ ರಾಜಕಾಲುವೆಯನ್ನು ಮುಚ್ಚಿ ಅಲ್ಲಿ ರಸ್ತೆ, ಉದ್ಯಾನ, ಕೆಲವು ಭಾಗದಲ್ಲಿ ನಿವೇಶನ ನಿರ್ಮಿಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
‘ಜಕ್ಕೂರು ಗ್ರಾಮದ ಆರಂಭದಲ್ಲಿ ಮೂರು ಅಡಿಗಳ ಕಾಲುವೆ ಇದೆ. ಆದರೆ ಹೆಗಡೆನಗರ ರಸ್ತೆಗೆ ಸೇರುವ ಜಾಗದಲ್ಲಿ ಒಂದು ಅಡಿ ಅಗಲ, ಒಂದು ಅಡಿ ಆಳದ ಕಾಲುವೆ ಇದೆ. ಕಳೆದ ವಾರ ನಗರದ ಕೆಲವೆಡೆ ಸುರಿದಂತೆ ಮಳೆ ಬಿದ್ದರೆ ನೀರು ಹರಿಯಲು ಕಾಲುವೆ ಇಲ್ಲದೆ ಜಕ್ಕೂರು ಗ್ರಾಮ ಪ್ರವಾಹಕ್ಕೆ ಸಿಲುಕಲಿದೆ’ ಎನ್ನುತ್ತಾರೆ ಗ್ರಾಮಸ್ಥರಾದ ಹರೀಶ.
****
ಐಎಎಸ್ ಅಧಿಕಾರಿಗಳ ಗೃಹ ನಿರ್ಮಾಣ ಸಹಕಾರ ಸಂಘ ರಾಜಕಾಲುವೆ ಒತ್ತುವರಿ ಮಾಡಿದ್ದರೆ ತನಿಖೆ ನಡೆಸಿ ತೆರವುಗೊಳಿಸಲಾಗುವುದು
ಮಂಜುನಾಥ ಪ್ರಸಾದ್
ಬಿಬಿಎಂಪಿ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.