ಬೆಂಗಳೂರು: ಒಂದು ಚದರ ಅಡಿಗೆ ಕೇವಲ ₨ 5 ಬಾಡಿಗೆಗೆ ಕೊಡ್ತೇವೆ ಎಂದರೂ ಬೆಂಗಳೂರು ಬಿಟ್ಟು ಬೇರೆ ಕಡೆಗೆ ಐಟಿ ಕಂಪೆನಿಗಳು ಬರುತ್ತಿಲ್ಲ. ಇದರಿಂದ ಬೆಂಗಳೂರಿನಿಂದಾಚೆಗೆ ಎರಡನೇ ಮತ್ತು ಮೂರನೇ ಹಂತದ ನಗರಗಳಿಗೂ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯಮವನ್ನು ವಿಸ್ತರಿಸಬೇಕು ಎನ್ನುವ ಸರ್ಕಾರದ ಪ್ರಯತ್ನಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿಲ್ಲ.
ಮೂಲಸೌಕರ್ಯು, ಮಾರುಕಟ್ಟೆ ಸೌಲಭ್ಯ ಮತ್ತಿತರ ಕಾರಣಗಳಿಂದ ಬೆಂಗಳೂರು ಮಹಾನಗರವೇ ಸೂಕ್ತ ಸ್ಥಳ ಎಂದು ಪ್ರತಿಪಾದಿಸುವ ಐಟಿ ಕಂಪೆನಿಗಳು, ಇತರ ನಗರಗಳಲ್ಲಿ ಘಟಕಗಳನ್ನು ವಿಸ್ತರಿಸುವ ಗೋಜಿಗೆ ಹೋಗುತ್ತಿಲ್ಲ. ಎರಡನೇ ಹಂತದ ನಗರಗಳು ಎಂದು ಗುರುತಿಸಲಾದ ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ, ಗುಲ್ಬರ್ಗ ಮತ್ತು ಶಿವಮೊಗ್ಗಗಳಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮಗಳು ಸ್ಥಾಪನೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ವಹಿಸಿ ಹಲವಾರು ಸೌಲಭ್ಯಗಳನ್ನು ನೀಡಲು ಮುಂದಾಗಿದೆ.
ಆದರೆ, ಸದ್ಯಕ್ಕೆ 62 ಕಂಪೆನಿಗಳು ಮಾತ್ರ ಈ ನಗರಗಳಲ್ಲಿ ತಮ್ಮ ಘಟಕಗಳನ್ನು ಸ್ಥಾಪಿಸಿದ್ದು, ಸುಮಾರು 30 ಸಾವಿರ ಮಂದಿಗೆ ಉದ್ಯೋಗ ಒದಗಿಸಿವೆ. ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಸಮೀಕ್ಷೆಯಂತೆ ಅಂದಾಜು ಶೇಕಡ 58ರಷ್ಟು ಕನ್ನಡಿಗರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆದರೆ, ‘ಐಟಿ ರಾಜಧಾನಿ’ ಬೆಂಗಳೂರು ನಗರಕ್ಕೆ ಹೋಲಿಸಿದಾಗ ಇದು ಅತ್ಯಲ್ಪ. ಈ ಮಹಾನಗರವೊಂದರಲ್ಲೇ 2321 ಐಟಿ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 8.5 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯೂ ಶೇಕಡ 58ರಷ್ಟು ಕನ್ನಡಿಗರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಾಸ್ಕಾಂ ಅಂದಾಜಿಸಿದೆ.
ಎರಡನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ (ಕಿಯೋನಿಕ್ಸ್) ಶಿವಮೊಗ್ಗ, ಗುಲ್ಬರ್ಗ, ಮೈಸೂರು ಮತ್ತು ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ ಐಟಿ ಪಾರ್ಕ್‌ಗಳು ಸಹ ಬಹುತೇಕ ಖಾಲಿಯಾಗಿ ಉಳಿದಿವೆ.
ಆರಂಭದಲ್ಲಿ ಈ ಐಟಿ ಪಾರ್ಕ್‌ಗಳಲ್ಲಿ ಜಾಗವನ್ನು ಚದರ ಅಡಿಗೆ ಪ್ರತಿ ತಿಂಗಳು ₨ 23 ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ, ಐಟಿ ಕಂಪೆನಿಗಳಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆಯದಿದ್ದಾಗ ಇದನ್ನು ಕೇವಲ ₨ 5ಗೆ ಇಳಿಸಲಾಯಿತು. ಆದರೂ, ಪರಿಸ್ಥಿತಿ ಬದಲಾಗಿಲ್ಲ.
‘ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆ ಇರುವ ಎಲ್ಲ ಐಟಿ ಪಾರ್ಕ್‌ಗಳಲ್ಲಿ ಶೇಕಡ 50ಕ್ಕೂ ಕಡಿಮೆ ಜಾಗ ಮಾತ್ರ ಬಳಕೆಯಾಗುತ್ತಿದೆ.
ಮಾರುಕಟ್ಟೆ ಸೌಲಭ್ಯ ಮತ್ತು ನೈಪುಣ್ಯತೆ ಹೊಂದಿರುವ ಮಾನವ ಸಂಪನ್ಮೂಲ ದೊರೆಯುವುದರಿಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಬೆಂಗಳೂರಿನಲ್ಲಿ ಮಾತ್ರ ಉದ್ಯಮ ಸ್ಥಾಪಿಸಲು ಮತ್ತು ವಿಸ್ತರಿಸುವ ಕಾರ್ಯಕ್ಕೆ ಮುಂದಾಗುತ್ತಿವೆ’ ಎನ್ನುತ್ತಾರೆ ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಸುಭಾಷ ಮಾಲಖೆಡೆ.
‘ಇತರ ನಗರಗಳಲ್ಲಿ ಐಟಿ ಉದ್ಯಮ ಬೆಳೆಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಮುಖ್ಯವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೌಶಲ ಹೆಚ್ಚಿಸುವ ಕಾರ್ಯ ಮತ್ತಷ್ಟು ನಡೆಯಬೇಕಾಗಿದೆ. ಈಗಿನ ಉದ್ಯಮಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ. ಬೇರೆ ನಗರಗಳಲ್ಲಿ ಐಟಿ ಉದ್ಯಮ ಬೆಳೆದರೆ ಬೆಂಗಳೂರು ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ’ ಎನ್ನುವುದು ಸುಭಾಷ್ ಅವರ ಪ್ರತಿಪಾದನೆ.
‘ನಿಧಾನವಾಗಿ ಪ್ರಗತಿಯಾಗುತ್ತಿದೆ’
‘ಐಟಿ ಉದ್ಯಮ ಸ್ಥಾಪಿಸಲು ಹುಬ್ಬಳ್ಳಿ, ಗುಲ್ಬರ್ಗದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಶಿವಮೊಗ್ಗದಲ್ಲಿ ನೀರಸವಾಗಿದೆ. ಐಟಿ ಉದ್ಯಮಿಗಳು ಬೆಂಗಳೂರಿನಲ್ಲೇ ಉಳಿಯಲು ಹೆಚ್ಚು ಆಸಕ್ತಿ ವಹಿಸುತ್ತಿರುವುದರಿಂದ ಇತರ ನಗರಗಳಲ್ಲಿ ಈ ಉದ್ಯಮ ಬೆಳೆಯುತ್ತಿಲ್ಲ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಈ ಉದ್ಯಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ 2013ರಲ್ಲಿ ‘‘ಕರ್ನಾಟಕ ಐ4’’ ನೀತಿ ಜಾರಿಗೊಳಿಸಲಾಗಿದೆ.
ರಿಯಾಯಿತಿ ದರದಲ್ಲಿ ಭೂಮಿ ಸೇರಿದಂತೆ ಹಲವಾರು ಅನುಕೂಲಗಳನ್ನು ಕಲ್ಪಿಸಲಾಗುತ್ತಿದೆ. ಜತೆಗೆ ₨100 ಕೋಟಿಗೂ ಹೆಚ್ಚು ಬಂಡವಾಳ ಹೂಡುವವರಿಗೆ ಏಕಗವಾಕ್ಷಿ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಪರವಾನಗಿಗಳನ್ನು ನೀಡಲಾಗುತ್ತಿದೆ. ಇದರಿಂದ ಕ್ರಮೇಣ ಪರಿಸ್ಥಿತಿ ಬದಲಾಗುತ್ತಿದ್ದು, ರಾಜ್ಯದ ಉಳಿದೆಡೆಯೂ ಪ್ರಗತಿಯಾಗಲಿದೆ’
– ಎಸ್.ಆರ್. ಪಾಟೀಲ್, ಮಾಹಿತಿ ತಂತ್ರಜ್ಞಾನ ಸಚಿವ
ಸಂಪನ್ಮೂಲಗಳ ಕೊರತೆ
‘ಬೇರೆ ನಗರಗಳಲ್ಲಿ ಐಟಿ ಉದ್ಯಮ ಬೆಳೆಯಲು ಹಲವು ರೀತಿಯ ಸಂಪನ್ಮೂಲಗಳ ಕೊರತೆಯೇ ಕಾರಣ. ಅತಿ ಮುಖ್ಯವಾಗಿ ವಾಯು ಸಂಪರ್ಕ ಸಮಸ್ಯೆ. ವಿಮಾನ ನಿಲ್ದಾಣಗಳಿದ್ದರೂ ವಿಮಾನಗಳ ಸಂಚಾರ ಅತಿ ಕಡಿಮೆ ಇದೆ. ಜತೆಗೆ ಮಾನವ ಸಂಪನ್ಮೂಲವೂ ಸುಲಭವಾಗಿ ಲಭ್ಯವಾಗಬೇಕು. ಯುವಕರು ಬೆಂಗಳೂರಿಗೆ ಹೆಚ್ಚು ಆಕರ್ಷಿತರಾಗಿದ್ದಾರೆ.
ಹೀಗಾಗಿ ಬೇರೆ ನಗರಗಳಿಗೆ ಹೋಗಲು ಆಸಕ್ತಿವಹಿಸುವುದಿಲ್ಲ. ಈ ಉದ್ಯಮಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸರ್ಕಾರ ಕಲ್ಪಿಸಬೇಕು. ಆರಂಭದಲ್ಲಿ ಕೆಲವು ದೊಡ್ಡ ಕಂಪೆನಿಗಳ ಘಟಕಗಳನ್ನು ಇತರ ನಗರಗಳಲ್ಲಿ ಸ್ಥಾಪಿಸುವಂತೆ ಸರ್ಕಾರ ಮನವೊಲಿಸಬೇಕು. ಈಗಾಗಲೇ ಮೈಸೂರು ಐಟಿ ಉದ್ಯಮದಲ್ಲಿ ನಿಧಾನವಾಗಿ ಅಭಿವೃದ್ಧಿಯಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಇತರ ನಗರಗಳಲ್ಲಿಯೂ ಉದ್ಯಮ ಬೆಳೆಸಲು ಆಸಕ್ತಿ ವಹಿಸಬೇಕು’
– ವಿ. ಬಾಲಕೃಷ್ಣನ್
ಇನ್ಫೊಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ
‘ಅವಕಾಶಗಳಿದ್ದರೂ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ’
'ಗುಲ್ಬರ್ಗದಂತಹ ಎರಡನೇ ಹಂತದ ನಗರಗಳಲ್ಲಿ ಐಟಿ ಉದ್ಯಮ ಬೆಳೆಸಲು ಸಾಕಷ್ಟು ಅವಕಾಶಗಳಿದ್ದರೂ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಹೈದರಾಬಾದ್–ಕರ್ನಾಟಕ ಭಾಗದ 15ರಿಂದ 20 ಸಾವಿರ ಎಂಜಿನಿಯರ್‌ಗಳು ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ ಹಾಗೂ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. ಆದ್ದರಿಂದ, ಇಲ್ಲಿ ದೊರೆಯುವ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.
ಈ ನಗರದಿಂದ ಹೈದರಾಬಾದ್ ಸೇರಿದಂತೆ ದೇಶದ ಪ್ರಮುಖ ನಗರಗಳು ಸಮೀಪದಲ್ಲಿರುವುದು ಉದ್ಯಮದ ಬೆಳವಣಿಗೆಗೆ ಪೂರಕವಾಗಲಿದೆ. ಗುಲ್ಬರ್ಗದಲ್ಲಿ ಐಟಿ ಪಾರ್ಕ್ ಸ್ಥಾಪಿಸಿದ್ದರೂ ತಾಂತ್ರಿಕ ಸೌಲಭ್ಯಗಳನ್ನು ಇನ್ನೂ ಕಲ್ಪಿಸಿಲ್ಲ. ಹೀಗಾಗಿ ಮುಖ್ಯವಾಗಿ ಮೂಲಸೌಕರ್ಯಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಉದ್ಯಮ ಸ್ಥಾಪಿಸುವವರಿಗೆ ಕೆಲವು ವರ್ಷ ತೆರಿಗೆ ರಜೆ ನೀಡಬೇಕು’
– ಉಮಾಕಾಂತ ನಿಗ್ಗುಡಗಿ
ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮಾಜಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.