ADVERTISEMENT

ಒಂದು ಪ್ರಶ್ನೆಗೆ ಬರೋಬ್ಬರಿ 5 ಸಾವಿರ ಪುಟದ ಉತ್ತರ!

ಸದನ ಸ್ವಾರಸ್ಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಬೆಂಗಳೂರು: ವಕ್ಫ್ ಇಲಾಖೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಗೋ. ಮಧುಸೂಧನ್ ಕೇಳಿದ ಪ್ರಶ್ನೆಗೆ ಸರ್ಕಾರ ಬರೋಬ್ಬರಿ 5 ಸಾವಿರ ಪುಟಗಳ ಉತ್ತರ ನೀಡಿದೆ!

ಅಷ್ಟೊಂದು ಪುಟಗಳನ್ನು ಮುದ್ರಿಸಿ ಕೊಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ಇಡೀ ಉತ್ತರವನ್ನು ಸಿ.ಡಿಯಲ್ಲಿ ಒದಗಿಸಿತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಧುಸೂಧನ್, `ಪ್ರಶ್ನೆ ಕೇಳಿದ ನನಗಾದರೂ ಒಂದು ಮುದ್ರಿತ ಪ್ರತಿಯನ್ನು ನೀಡಬೇಕು' ಎಂದು ಮನವಿ ಮಾಡಿದರು.

`ರಾಜ್ಯದಲ್ಲಿ ಇರುವ ಮಸೀದಿ, ಖಬರಸ್ತಾನ, ದರ್ಗಾ ಮೊದಲಾದ ವಕ್ಫ್ ಆಸ್ತಿಗಳ ವಿವರ ನೀಡಬೇಕು ಮತ್ತು ಆದಾಯದ ಮಾಹಿತಿಯನ್ನು ಒದಗಿಸಬೇಕು' ಎಂದು ಮಧುಸೂಧನ್ ಪ್ರಶ್ನಿಸಿದ್ದರು.

`ಸಾಧ್ಯವಾದರೆ ಅವರ ಬೇಡಿಕೆ ಈಡೇರಿಸಬೇಕು' ಎಂದು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸೂಚನೆ ನೀಡಿದರು. `5 ಸಾವಿರ ಪುಟಗಳ ಅಧ್ಯಯನದ ಬಳಿಕ ಉಪಪ್ರಶ್ನೆಗಳನ್ನು ಕೇಳುತ್ತೇನೆ' ಎಂದು ಮಧುಸೂಧನ್ ಹೇಳಿದಾಗ, ಸದನ ನಗೆಗಡಲಲ್ಲಿ ತೇಲಿತು.

ತಯಾರಿ ಇಲ್ಲದೆ ಬಂದ ಖಮರುಲ್
ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಸೂಕ್ತ ತಯಾರಿ ಮಾಡಿಕೊಳ್ಳದೆ ಬಂದ ಸಾರ್ವಜನಿಕ ಉದ್ಯಮ, ಅಲ್ಪ ಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ಅವರು ವಿರೋಧ ಪಕ್ಷದ ಸದಸ್ಯರಿಂದ ತೀವ್ರ ಟೀಕೆಗೆ ಒಳಗಾದ ಪ್ರಸಂಗ ಮಂಗಳವಾರ ವಿಧಾನ ಪರಿಷತ್ತಿನಲ್ಲಿ ನಡೆಯಿತು.

ರಾಜ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಸದಸ್ಯ ಎಂ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಸಚಿವರು ಅಸ್ಪಷ್ಟ ಉತ್ತರ ನೀಡಿದಾಗ ಈ ಪ್ರಸಂಗ ನಡೆಯಿತು. `ರಾಜ್ಯದ 60 ಸಾರ್ವಜನಿಕ ಉದ್ಯಮಗಳ ಪೈಕಿ 26 ಲಾಭದಲ್ಲಿದ್ದರೆ, 18 ನಷ್ಟದಲ್ಲಿವೆ. ಮಿಕ್ಕ ಸಂಸ್ಥೆಗಳ ಮಾಹಿತಿ ಇಲ್ಲ' ಎಂದು ಸಚಿವರು ಉತ್ತರಿಸಿದರು.

`ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ಉದ್ಯಮಗಳ ಬಗ್ಗೆ ಸರ್ಕಾರದ ಬಳಿಯೇ ಉತ್ತರ ಇಲ್ಲದಿದ್ದರೆ ಯಾರನ್ನು ಕೇಳಬೇಕು' ಎಂದು ಶ್ರೀನಿವಾಸ್ ಪ್ರಶ್ನಿಸಿದರು. `ನೀವು ಕೇಳಿದ ಪ್ರಶ್ನೆಯಲ್ಲಿ ಈ ಮಾಹಿತಿ ಬಯಸಿಲ್ಲ. ಅದಕ್ಕೆ ನನ್ನ ಬಳಿ ಉತ್ತರ ಇಲ್ಲ' ಎಂದು ಸಚಿವರು ಹೇಳಿದರು.

ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ, ಎಂ.ಸಿ. ನಾಣಯ್ಯ ಮತ್ತಿತರರು, `ಉಪಪ್ರಶ್ನೆಗಳಿಗೆ ತಯಾರಿ ಮಾಡಿಕೊಳ್ಳದೆ ಸದನಕ್ಕೆ ಬಂದರೆ ಹೇಗೆ' ಎಂದು ಪ್ರಶ್ನಿಸಿದರು. `ಪ್ರಶ್ನೆಗೆ ಸರಿಯಾದ ಉತ್ತರವನ್ನು ಸರ್ಕಾರ ಒದಗಿಸಬೇಕು. ಪುನಃ ಈ ವಿಷಯವನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು' ಎಂದು ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಕಟಿಸಿದರು.
ಕೊರಟೆಗೆರೆಗೆ ಏನೂ ಕೊಟ್ಟಿಲ್ಲ

`ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ನಯಾಪೈಸೆಯನ್ನೂ ಕೊಟ್ಟಿಲ್ಲ. ಇದರಿಂದ ನಮಗೆ ಬೇಸರವಾಗಿದೆ. ಏನೊ ಬಿರುಕು ಬಿಟ್ಟಂತಿದೆ' ಎನ್ನುವ ಡಿ.ವಿ. ಸದಾನಂದಗೌಡ ಅವರ ಹೇಳಿಕೆ ಪರಿಷತ್‌ನಲ್ಲಿ ಕೆಲಕಾಲ ಸ್ವಾರಸ್ಯದ ಚರ್ಚೆಗೆ ಗ್ರಾಸವಾಯಿತು.

`ನೀವು ಏನೇ ಬಿರುಕು ಉಂಟುಮಾಡಲು ಯತ್ನಿಸಿದರೂ ನಮ್ಮದು ಕಾಂಕ್ರೀಟ್ ಕಟ್ಟಡ. ನಿಮ್ಮ ಮನೆಯಂತೆ ಅದು ಅಲ್ಲಾಡುವುದಿಲ್ಲ' ಎಂದು ಆಡಳಿತ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು. ಅದಕ್ಕೆ ತಕ್ಷಣ ಸ್ಪಂದಿಸಿದ ಸದಾನಂದಗೌಡ, `ಕಾಂಕ್ರೀಟ್ ಕಟ್ಟಡ ಬಿರುಕು ಬಿಟ್ಟರೆ ಒಡೆದು ಕಟ್ಟಬೇಕು. ಮಣ್ಣಿನ ಕಟ್ಟಡವಾದರೆ ಬಿರುಕು ಮುಚ್ಚಬಹುದು' ಎಂದು ಚುಚ್ಚಿದರು.

`ನಮ್ಮ ಆಡಳಿತವಿದ್ದಾಗ ಒಂದೂವರೆ ವರ್ಷದ ಬಳಿಕ ಭಿನ್ನಾಭಿಪ್ರಾಯ ತಲೆದೂರಿತ್ತು. ನಿಮ್ಮ ಆಡಳಿತದಲ್ಲಿ ಮೂರೇ ತಿಂಗಳಿಗೆ ಭಿನ್ನಮತ ಶುರುವಾಗಿದೆ' ಎಂದೂ ಅವರು ಹೇಳಿದರು. `ಸರ್ಕಾರ ಬೀಳುವ ಕನಸು ಕಾಣುವುದು ಬೇಡ. ನಿಮಗೆ ನಿರಾಸೆಯಾಗಲಿದೆ' ಎಂದು ಪಾಟೀಲರು ಮರು ಉತ್ತರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.