ADVERTISEMENT

ಒಣಗಿದ ಗದ್ದೆಯಲ್ಲೇ ವಿಷ ಸೇವಿಸಿ ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST
ಭಾನುವಳ್ಳಿ ಗ್ರಾಮದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಸಾಂತ್ವನ ಹೇಳಲು ಬಂದ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ಕಾರಿಗೆ ಅಡ್ಡಲಾಗಿ ಮೃತ ರೈತನ ಕುಟುಂಬದವರು ಮಲಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಳ್ಳಿ ಗ್ರಾಮದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಸಾಂತ್ವನ ಹೇಳಲು ಬಂದ ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ಕಾರಿಗೆ ಅಡ್ಡಲಾಗಿ ಮೃತ ರೈತನ ಕುಟುಂಬದವರು ಮಲಗಿ ಆಕ್ರೋಶ ವ್ಯಕ್ತಪಡಿಸಿದರು.   

ಮಲೇಬೆನ್ನೂರು: ಭದ್ರಾ ನಾಲೆಯ ಕೊನೆಯ ಭಾಗವಾದ ಭಾನುವಳ್ಳಿ ಗ್ರಾಮದಲ್ಲಿ ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ಬೇಸತ್ತ ರೈತ ಬಸವನಗೌಡ (28), ನೀರಿಲ್ಲದೆ ಒಣಗಿದ ತಮ್ಮ ಭತ್ತದ ಗದ್ದೆಯಲ್ಲಿ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಭಾನುವಳ್ಳಿ ಹಾಗೂ ನಂದಿತಾವರೆ ಗ್ರಾಮದ ಬ್ಯಾಂಕಿನಲ್ಲಿ ಬಸವನಗೌಡ ಬೆಳೆ ಸಾಲ ಪಡೆದಿದ್ದರು. ಮೂರು ವರ್ಷಗಳಿಂದ ಮಳೆ ಮತ್ತು ನೀರಿನ ಕೊರತೆಯಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ. ಈ ಬಾರಿ ನಾಟಿ ಮಾಡಿದ್ದರು. ಆದರೆ, ನಾಲೆಗೆ ನೀರು ಹರಿದು ಬರದಿರುವುದರಿಂದ ಬೆಳೆ ಒಣಗಿತ್ತು. ಇದರಿಂದ ತೀವ್ರ ನೊಂದುಕೊಂಡಿದ್ದರು’ ಎಂದು  ಕುಟುಂಬದವರು ತಿಳಿಸಿದ್ದಾರೆ.

ಸ್ಥಳಕ್ಕೆ ತಹಶಿಲ್ದಾರ್ ರೆಹಾನ್ ಪಾಷಾ ಬಂದು ಪರಿಶೀಲಿಸಿದರು. ಅಂತ್ಯಸಂಸ್ಕಾರ ನಡೆಸಲು ರೈತನ ಕುಟುಂಬಕ್ಕೆ ₹ 5 ಸಾವಿರ ಹಣದ ಚೆಕ್ ನೀಡಿದರು. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ರೈತರ ಪ್ರತಿಭಟನೆ: ವಿಷಯ ತಿಳಿದು ನೀರಾವರಿ ಇಲಾಖೆಯ ಪ್ರಭಾರ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗವಿಸಿದ್ದೇಶ್ವರ ಅವರು ಸ್ಥಳಕ್ಕೆ ಬರುತ್ತಿದ್ದಂತೆ ವಾಹನವನ್ನು ತಡೆದ ರೈತರು ಘೋಷಣೆಗಳನ್ನು ಕೂಗಿದರು.

ಬಸವನಗೌಡ ಅವರ ಕುಟುಂಬದವರು ವಾಹನಕ್ಕೆ ಅಡ್ಡವಾಗಿ ಮಲಗಿಕೊಂಡು ನೀರಾವರಿ ಇಲಾಖೆ ಎಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ರೈತರನ್ನು ಸಮಾಧಾನಪಡಿಸಿ ಅಧಿಕಾರಿಗಳನ್ನು ಸುರಕ್ಷಿತವಾಗಿ ವಾಪಸ್‌ ಕಳುಹಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.