ADVERTISEMENT

‘ಒಳನಾಡು ಮೀನುಗಾರಿಕಾ ನೀತಿಗೆ ಸಂಪುಟ ಸಭೆಯಲ್ಲಿ ಶೀಘ್ರ ಒಪ್ಪಿಗೆ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮೀನುಗಳನ್ನು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್ (ಬಲ ತುದಿ) ವೀಕ್ಷಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ ಇದ್ದಾರೆ (ಎಡದಿಂದ ಎರಡನೇಯವರು) – ಪ್ರಜಾವಾಣಿ ಚಿತ
ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಮೀನುಗಳನ್ನು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್ (ಬಲ ತುದಿ) ವೀಕ್ಷಿಸಿದರು. ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ ಇದ್ದಾರೆ (ಎಡದಿಂದ ಎರಡನೇಯವರು) – ಪ್ರಜಾವಾಣಿ ಚಿತ   

ಬೆಂಗಳೂರು: ‘ಒಳನಾಡು ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸ ಒಳನಾಡು ಮೀನುಗಾರಿಕಾ ನೀತಿ ರೂಪಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು’ ಎಂದು ಮೀನುಗಾರಿಕಾ ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ‘ಮತ್ಸ್ಯ ಮೇಳ –2017’ ಅನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಬಾಗಲಕೋಟೆಯಲ್ಲಿ ಒಳನಾಡು ಮೀನುಗಾರಿಕಾ ನಿಗಮ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ₹ 2 ಕೋಟಿ ಮೀಸಲಿಡಲಾಗಿದೆ’ ಎಂದು ತಿಳಿಸಿದರು.

‘ಬೆಂಗಳೂರಿನ ಜನರಿಗೆ ಕರಾವಳಿ ಮತ್ತು ಒಳನಾಡು ಮೀನಿನ ಖಾದ್ಯಗಳ ವೈವಿಧ್ಯವನ್ನು ಇನ್ನಷ್ಟು ಪರಿಚಯಿಸಿ ಮಾರುಕಟ್ಟೆ ವಿಸ್ತರಿಸಿದರೆ ಅಮೆರಿಕ, ಯುರೋಪ್‌ ರಾಷ್ಟ್ರಗಳಿಗೆ ರಾಜ್ಯದಿಂದ ಮೀನು ರಫ್ತು ಮಾಡುವ ಅಗತ್ಯವೇ ಉದ್ಭವಿಸುವುದಿಲ್ಲ. ಇಂಥ ಮೇಳಗಳು ಈ ನಿಟ್ಟಿನಲ್ಲಿ ಸಹಕಾರಿ ಆಗಬಲ್ಲುದು’ ಎಂದೂ ಸಚಿವರು ಅಭಿಪ್ರಾಯಪಟ್ಟರು.

ADVERTISEMENT

‘ಉತ್ತರ ಕರ್ನಾಟಕ ಭಾಗದಲ್ಲಿ ಒಳನಾಡು ಮೀನುಗಾರಿಕೆ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಕೃಷಿಗಿಂತಲೂ ಮೀನುಗಾರಿಕೆಯಿಂದ ನಾಲ್ಕು ಪಟ್ಟು ಲಾಭ ಗಳಿಸಬಹುದು. ಒಂದು ಎಕರೆಯಲ್ಲಿ ಕಬ್ಬು ಬೆಳೆದ ರೈತ ₹ 25,000 ಲಾಭ ಗಳಿಸಿದರೆ, ಅಷ್ಟೇ ಪ್ರದೇಶದಲ್ಲಿ ಮೀನು ಬೆಳೆಸಿದರೆ ₹ 1.50 ಲಕ್ಷ ಆದಾಯ ಗಳಿಸಬಹುದು’ ಎಂದ ಅವರು, ಮೀನುಗಾರಿಕೆ ಉದ್ಯಮ ಆರಂಭಿಸಲು ಮುಂದಾಗುವವರಿಗೆ ಕೇಂದ್ರ– ರಾಜ್ಯ ಸರ್ಕಾರದಿಂದ ಸಹಾಯಧನವೂ ಇದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಚಿವ ಪ್ರಮೋದ್‌ ಅವರು ಸಲಹೆ ನೀಡಿದರು.

ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜಕುಮಾರ್‌ ಖತ್ರಿ,  ‘ರಾಜ್ಯದಲ್ಲಿ ಸುಮಾರು 9 ಲಕ್ಷ  ಮೀನುಗಾರ ಕುಟುಂಬಗಳಿವೆ. ಸಾಂಪ್ರದಾಯಿಕ ಮೀನುಗಾರಿಕೆ ವೃತ್ತಿಯ ಜೊತೆಗೆ ಈ ವಲಯದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಪರ್ಯಾಯ ವೃತ್ತಿಯಾಗಿಯೂ ಈ ಕ್ಷೇತ್ರದಲ್ಲಿ ಹಣ ಸಂಪಾದಿಸಬಹುದು’ ಎಂದು ಸಲಹೆ ನೀಡಿದರು.

‘ಮತ್ಸ್ಯಮೇಳ’ದ ಆಕರ್ಷಣೆ: ಮೀನುಗಾರಿಕಾ ಮೇಳ ನಾಲ್ಕು ದಿನ ನಡೆಯಲಿದೆ. ಅಲಂಕಾರಿಕ ಮೀನುಗಳ ಗ್ಯಾಲರಿ, ಅಪರೂಪದ ಸಮುದ್ರ ಚಿಪ್ಪುಗಳ ಪ್ರದರ್ಶನ, ಅಲಂಕಾರಿಕ ಮೀನು ಪ್ರದರ್ಶನಗಳ ಸ್ಪರ್ಧೆ, ಮೀನುಗಾರಿಕೆಗೆ ಸಂಬಂಧಿಸಿದ ಮಾಹಿತಿ ವಿಭಾಗ, ಸ್ವಾದಿಷ್ಟ ಆಹಾರ ಮಳಿಗೆ, ಖಾದ್ಯ ತಯಾರಿಕೆ ಮತ್ತು ತಾಜಾ ಮೀನು ಮಾರಾಟ ಮಳಿಗೆಗಳು ಇವೆ ಮೇಳದಲ್ಲಿವೆ. ಸುಮಾರು 4 ಲಕ್ಷ ಜನರು ವೀಕ್ಷಣೆಗೆ ಬರುವ ನಿರೀಕ್ಷೆ ಇದೆ ಎಂದು ಮೀನುಗಾರಿಕಾ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದರು.

ಮೀನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

‘ಇತ್ತೀಚಿನ ದಿನಗಳಲ್ಲಿ ತರಕಾರಿ, ಹಣ್ಣು ಹಂಪಲುಗಳಿಗೆ ಅತಿಯಾದ ಪ್ರಮಾಣದಲ್ಲಿ ಕೀಟನಾಶಕ ಉಪಯೋಗಿಸುತ್ತಿರುವುದರಿಂದ ಅವುಗಳು ವಿಷಕಾರಿಯಾಗುತ್ತಿವೆ. ಅಷ್ಟೇ ಅಲ್ಲ, ಕ್ಯಾನ್ಸರ್‌ ಬರಲು ಕಾರಣವಾಗುತ್ತಿವೆ. ಮಾಂಸ ತಿಂದರೆ ಕೊಬ್ಬಿನಂಶ ಹೆಚ್ಚುತ್ತದೆ. ಆದರೆ, ಮೀನು ತಿನ್ನುವುದರಿಂದ ಮೆದುಳಿನ ಸಾಮರ್ಥ್ಯ ವೃದ್ಧಿಯಾಗುತ್ತದೆ, ಹೃದಯಾಘಾತ ಸಂಭವಿಸುವುದಿಲ್ಲ. ದೇಹದ ಆರೋಗ್ಯ ಕಾಪಾಡಲು ಮೀನು ಸೇವನೆ ಒಳ್ಳೆಯದು. ಜೊತೆಗೆ ಮೀನುಗಾರರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಬಹುದು’ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.