ADVERTISEMENT

`ಒಳ ಜಗಳಗಳಿಂದ ಬೆಂಗಳೂರು ವಿ.ವಿಗೆ ಕೆಟ್ಟ ಹೆಸರು'

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 19:31 IST
Last Updated 18 ಡಿಸೆಂಬರ್ 2012, 19:31 IST
ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ರಂಗಸ್ವಾಮಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಸನ್ಮಾನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ, ಮೌಲ್ಯಮಾಪನ ಕುಲಸಚಿವ ಡಾ.ಆರ್.ಕೆ. ಸೋಮಶೇಖರ್ ಚಿತ್ರದಲ್ಲಿದ್ದಾರೆ
ಸಮಾರಂಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ರಂಗಸ್ವಾಮಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರನ್ನು ಸನ್ಮಾನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ, ಮೌಲ್ಯಮಾಪನ ಕುಲಸಚಿವ ಡಾ.ಆರ್.ಕೆ. ಸೋಮಶೇಖರ್ ಚಿತ್ರದಲ್ಲಿದ್ದಾರೆ   

ಬೆಂಗಳೂರು:  `ಬೆಂಗಳೂರು ವಿಶ್ವವಿದ್ಯಾಲಯ ಮೂಲತಃ ಉತ್ತಮ ವಿಶ್ವವಿದ್ಯಾಲಯವಾಗಿದೆ. ಆದರೆ, ಒಳಜಗಳಗಳಿಂದ ಇತ್ತೀಚೆಗೆ ಹೆಸರು ಕೆಡಿಸಿಕೊಂಡಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯವು ಮಂಗಳವಾರ ವಿಶ್ವವಿದ್ಯಾಲಯದ ಕುವೆಂಪು ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ `ಕನ್ನಡ ರಾಜ್ಯೋತ್ಸವ ಹಾಗೂ ವಿಶ್ವವಿದ್ಯಾಲಯ ದಿನಾಚರಣೆ' ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಈ ವಿಶ್ವವಿದ್ಯಾಲಯದಲ್ಲಿಯೇ ನಾನು ಓದಿದ್ದು. ಇದರಲ್ಲಿ ಓದಿದ ನಾನು ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದೇನೆ. ಭವಿಷ್ಯಕ್ಕೆ ಉತ್ತಮ ಬುನಾದಿ ಹಾಕುವ ಶಿಕ್ಷಣ ಸಂಸ್ಥೆಯು ಈ ರೀತಿ ಒಳಜಗಳಗಳಿಂದ ಹೆಸರು ಕೆಡಿಸಿಕೊಳ್ಳುವುದು ಉತ್ತಮವಾದ ಬೆಳವಣಿಗೆಯಲ್ಲ' ಎಂದರು.

`ವಿಶ್ವವಿದ್ಯಾಲಯದ ಒಳಗೆ ಒಳ ಜಗಳಗಳನ್ನು ಮಾಡಿಕೊಂಡು, ಆಡಳಿತದಿಂದ ಹೆಸರು ಕೆಡಿಸಿಕೊಳ್ಳುವುದಕ್ಕಿಂತ, ಯಾವುದೇ ಸಮಸ್ಯೆಗಳಿದ್ದರೂ ಪರಸ್ಪರ ಮಾತಾಡಿಕೊಂಡು ಪರಿಹರಿಸಿಕೊಳ್ಳಬೇಕು. ಮಾತುಕತೆಯಿಂದ ಎಂತಹ ಸಮಸ್ಯೆಗಳು ಪರಿಹಾರವಾಗುತ್ತವೆ. ಜಗಳವಾಡುವುದರಿಂದ ಯಾವುದೇ ಸಮಸ್ಯೆಗಳು ಪರಿಹಾರವಾಗುವುದಿಲ್ಲ' ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎನ್.ಆರ್.ಶೆಟ್ಟಿ ಮಾತನಾಡಿ, `ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಶಿಕ್ಷಕೇತರ ಸಿಬ್ಬಂದಿಯನ್ನು ಕಾಯಂಗೊಳಿಸಲು ಚಿಂತನೆ ನಡೆಸಬೇಕು' ಎಂದು ಹೇಳಿದರು.

`ಉತ್ತಮ ವಿಶ್ವವಿದ್ಯಾಲಯವೆಂದು ಹೆಸರು ಗಳಿಸಿದೆ. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸಿ ಅವರಲ್ಲಿರುವ ಅಸಮಾಧಾನವನ್ನು ನಿವಾರಿಸಬೇಕು. ವಿಶ್ವವಿದ್ಯಾಲಯವು ಶಿಕ್ಷಣ ನೀಡುವ ಪವಿತ್ರ ಸ್ಥಾನವಾಗಿದೆ. ಇಲ್ಲಿ ಯಾವುದೇ ರೀತಿಯ ಜಗಳಗಳು ನಡೆಯದೆ, ಇನ್ನು ಮುಂದಾದರೂ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವಂತಾಗಲಿ' ಎಂದು ಆಶಿಸಿದರು.


`ಒಂದು ಶಿಕ್ಷಣ ಸಂಸ್ಥೆಯೆಂದರೆ ಅಲ್ಲಿ ಆಡಳಿತ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಇವರೆಲ್ಲರೂ ಒಟ್ಟಾಗಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿಕೊಂಡು ಶಿಕ್ಷಣ ಸಂಸ್ಥೆಗಾಗಿ ದುಡಿಯಬೇಕು. ಆಗ, ಆ ಶಿಕ್ಷಣ ಸಂಸ್ಥೆ ಮತ್ತು ಅಲ್ಲಿನ ವಿದ್ಯಾರ್ಥಿಗಳು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT