ADVERTISEMENT

ಒಳ ಮೀಸಲಾತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು: `ಮಂಡಲ್ ಆಯೋಗದ ವರದಿಯಂತೆ ದೇಶದ ಹಿಂದುಳಿದ ವರ್ಗಗಳಿಗೆ ಶೇ 27 ಮೀಸಲಾತಿ ನೀಡಬೇಕೆಂಬ ಶಿಫಾರಸನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ~ ಎಂದು ಕರ್ನಾಟಕ ಹಿಂದುಳಿದ ದಲಿತ ಹಾಗೂ ಅಲ್ಪಸಂಖ್ಯಾತರ ಜಂಟಿ ಕ್ರಿಯಾ ವೇದಿಕೆ ಅಧ್ಯಕ್ಷ ಕೃಷ್ಣಾ ನಾಯಕ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ 27 ರಷ್ಟು ಮೀಸಲಾತಿಯಲ್ಲಿ ಶೇ 9 ಮುಸ್ಲಿಮರಿಗೆ ಒಳ ಮೀಸಲಾತಿ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹಿಂದುಳಿದ ವರ್ಗಗಳಿಗೆ ನೀಡಿದ ಮೀಸಲಾತಿಯಲ್ಲಿ ಪಾಲು ನೀಡಿದರೆ ಯಾರಿಗೂ ಉಪಯೋಗವಾಗುವುದಿಲ್ಲ~ ಎಂದು ಹೇಳಿದರು.
`ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿಯದಿದ್ದರೆ ರಾಷ್ಟ್ರ ಹಾಗೂ ರಾಜ್ಯದಲ್ಲಿ ಉಗ್ರ ಚಳವಳಿ ನಡೆಸಲಾಗುವುದು~ ಎಂದು ಎಚ್ಚರಿಸಿದರು.

ಕರ್ನಾಟಕ ಕುಂಬಾರ ಸಂಘದ ಅಧ್ಯಕ್ಷ ಶ್ರೀನಿವಾಸಪ್ಪ, ಅಖಿಲ ಭಾರತ ಯಾದವ ಮಹಾಸಭಾ ಮುಖಂಡ ಲಕ್ಷ್ಮಿನಾರಾಯಣ ಯಾದವ್ ಉಪಸ್ಥಿತರಿದ್ದರು.

ರಾಜ್ಯ ಮಟ್ಟದ ಕಥಾ ಸ್ಪರ್ಧೆ

ಬೆಂಗಳೂರು: ಸೃಷ್ಟಿ ವೆಂಚರ್ಸ್ ಸಂಸ್ಥೆಯು ಡಿವಿಜಿ ಅವರ ಜನ್ಮದಿನದ ಅಂಗವಾಗಿ ರಾಜ್ಯ ಮಟ್ಟದ ಕಗ್ಗಕ್ಕೊಂದು ಸಣ್ಣ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಮಂಕುತಿಮ್ಮನ ಕಗ್ಗದ ಒಂದು ಪದ್ಯವನ್ನಾಧರಿಸಿ ಕಲ್ಪನೆಯ ಸಣ್ಣ ಕಥೆಯನ್ನು ರಚಿಸಬೇಕು. ಅತ್ಯುತ್ತಮ 100 ಸಣ್ಣ ಕಥೆಗಳನ್ನು ಕಥಾಸಂಕಲನದ ರೂಪದಲ್ಲಿ ಪ್ರಕಟಿಸಲಾಗುವುದು. ಕಥೆಗಳನ್ನು ಫೆಬ್ರುವರಿ 10 ರೊಳಗೆ ಕಳುಹಿಸಿಕೊಡಬೇಕು. ವಿಳಾಸ: ಸೃಷ್ಟಿ ವೆಂಚರ್ಸ್, ಸ್ಟೋರಿ ಸ್ಕೂಲ್ ವಿಭಾಗ, ನಂ. 81, ಇಎಟಿ ಬೀದಿ, ಬಸವನಗುಡಿ. ಮೊಬೈಲ್; 9448685484

ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆ ವಿಜೇತರು

ADVERTISEMENT

ಬೆಂಗಳೂರು: ದ.ರಾ. ಬೇಂದ್ರೆ ಕಾವ್ಯ ಕೂಟವು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ದ.ರಾ. ಬೇಂದ್ರೆ ಸ್ಮೃತಿ ಲೇಖನ ಸ್ಪರ್ಧೆಯಲ್ಲಿ ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಎಂ.ಎ. (ಕನ್ನಡ) ಪ್ರಥಮ ವರ್ಷದ ವಿದ್ಯಾರ್ಥಿ ಎಂ. ಮರಿಸ್ವಾಮಿ ಪ್ರಥಮ ಬಹುಮಾನ ಪಡೆದಿದ್ದಾರೆ.

ಮೊದಲ ಬಹುಮಾನಕ್ಕೆ ರೂ. 4 ಸಾವಿರ ನಗದು ಬಹುಮಾನ ನೀಡಲಾಗುತ್ತದೆ. ಬೆಂಗಳೂರು ವಿವಿಯ ಪ್ರಥಮ ವರ್ಷದ ಎಂ.ಎ (ಕನ್ನಡ) ವಿಭಾಗದ ವಿದ್ಯಾರ್ಥಿ ಎಚ್. ದಿನೇಶ್ ಹಾಗೂ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಎಂ.ಎ. (ಕನ್ನಡ) ಪ್ರಥಮ ವರ್ಷದ ವಿದ್ಯಾರ್ಥಿ ಕೆ.ಎಂ. ನಾಗೇಶ್ ಕ್ರಮವಾಗಿ 2ನೇ ಹಾಗೂ 3ನೇಬಹುಮಾನ ಪಡೆದಿದ್ದಾರೆ. 2ನೇ ಬಹುಮಾನ ರೂ. 3 ಸಾವಿರ,3ನೇ ಬಹುಮಾನವು ರೂ 2 ಸಾವಿರ ನಗದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.